ಅಕ್ರಮ ಆಸ್ತಿ ಗಳಿಕೆ ಪ್ರಕರಣ : ʼನಿವೃತ್ತ ಡಿಜಿಪಿʼಗೆ 4 ವರ್ಷ ಜೈಲು, ದಂಡ ವಿಧಿಸಿದ ಕೋರ್ಟ್
ತಿರುವನಂತಪುರ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದ ಆರೋಪದಡಿ 36 ವರ್ಷಗಳ ಹಿಂದೆ ದಾಖಲಾಗಿದ್ದ ಪ್ರಕರಣದಲ್ಲಿ ಕೇರಳಂನ ನಿವೃತ್ತ ಡಿಜಿಪಿ ಥೋಮಿನ್ ಜೆ. ಥಚಂಕರಿ ಅವರಿಗೆ ಕೊಟ್ಟಾಯಂನ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯ 4 ವರ್ಷಗಳ ಜೈಲು ಶಿಕ್ಷೆ ಮತ್ತು 30.84 ಲಕ್ಷ ದಂಡ ವಿಧಿಸಿ ತೀರ್ಪು ಪ್ರಕಟಿಇದೆ.
ಪೊಲೀಸ್ ಅಧಿಕಾರಿ ವಿರುದ್ಧ ಆಲಪ್ಪುಳದ ಬಾಬಿ ಕುರುವಿಲ ಅವರು ನೀಡಿದ್ದ ದೂರು ಆಧರಿಸಿ ತನಿಖೆ ನಡೆದಿತ್ತು. ಕೊಟ್ಟಾಯಂ ವಿಜಿಲೆನ್ಸ್ ಕೋರ್ಟ್ ನ್ಯಾಯಾಧೀಶ ಕೆ.ವಿ. ರಜನೀಶ್ ಅವರು ಈ ಆದೇಶ ಪ್ರಕಟಿಸಿದರು. ಭ್ರಷ್ಟಾಚಾರ ತಡೆ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಹಿರಿಯ ಅಧಿಕಾರಿಯನ್ನು ತಪ್ಪಿತಸ್ಥ ಎಂದು ಘೋಷಿಸಿ ತೀರ್ಪು ನೀಡಿದರು.
ತೀರ್ಪು ಪ್ರಶ್ನಿಸಿ ನಿವೃತ್ತ ಡಿಜಿಪಿ ಥೋಮಿನ್ ಅವರು ಕೇರಳಂ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯದ ತೀರ್ಪು ಸ್ವಾಗತಿಸಿರುವ ದೂರುದಾರರು, ಮಾಜಿ ಅಧಿಕಾರಿ ವಿರುದ್ಧ ಭ್ರಷ್ಟಾಚಾರದ ಮತ್ತೊಂದು ದೂರು ನೀಡುವುದಾಗಿ ಹೇಳಿದ್ದಾರೆ. ವರದಿಗಳ ಪ್ರಕಾರ ಕೇರಳಂನಲ್ಲಿ ಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರು ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಮೊದಲ ಪ್ರಕರಣ ಇದು ಎನ್ನಲಾಗಿದೆ.
ಜೈಲು ಶಿಕ್ಷೆಯ ಅವಧಿ ಮೂರು ವರ್ಷಗಳಿಗೂ ಹೆಚ್ಚಿರುವುದರಿಂದ ಮಾಜಿ ಅಧಿಕಾರಿ ತಕ್ಷಣದ ಜಾಮೀನಿಗೆ ಅರ್ಹರಾಗಿರುವುದಿಲ್ಲ. ಹೀಗಾಗಿ, ಅವರನ್ನು ತಿರುವನಂತಪುರಂ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲು ಪೊಲೀಸ್ ಅಧಿಕಾರಿಗಳು ನಿರ್ಧರಿಸಿದರು.
ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಜೈಲು ಶಿಕ್ಷೆ ಅನುಭವಿಸಲಿರುವ ಕೇರಳದ ಡಿಜಿಪಿ ಹಂತದ ಮೊದಲ ಐಪಿಎಸ್ ಅಧಿಕಾರಿ ಥಚಂಕರಿ ಎಂಬ ಕುಖ್ಯಾತಿ ಪಡೆದಿದ್ದಾರೆ. ವರ್ಗೀಸ್ ಹತ್ಯೆ ಪ್ರಕರಣದಲ್ಲಿ ಮಾಜಿ ಐಜಿ ಲಕ್ಷ್ಮಣ ಅವರ ನಂತರ ರಾಜ್ಯದಲ್ಲಿ ಜೈಲು ಶಿಕ್ಷೆಗೆ ಗುರಿಯಾದ ಅತ್ಯುನ್ನತ ಹುದ್ದೆಯ ಪೊಲೀಸ್ ಅಧಿಕಾರಿಯೂ ಇವರಾಗಲಿದ್ದಾರೆ.
ಈ ಪ್ರಕರಣವು ಜನವರಿ 2003 ಮತ್ತು 2007 ರ ಅವಧಿಯಲ್ಲಿ ನಡೆದಿತ್ತು. ಈ ಅವಧಿಯಲ್ಲಿ ಅಧಿಕಾರಿಯಾಗಿದ್ದ ಥಚ್ಚಂಕರಿ ಅವರು 64.7 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ಗಳಿಸಿದ್ದಾರೆ ಎಂದು ವಿಜಿಲೆನ್ಸ್ ತನಿಖೆಯಲ್ಲಿ ಪತ್ತೆಯಾಗಿತ್ತು.
ಪ್ರಾಸಿಕ್ಯೂಷನ್ ಪ್ರಕಾರ, ಮಾಜಿ ಅಧಿಕಾರಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಆದಾಯದ ಮೂಲ ಮೀರಿ ಶೇಕಡಾ 138 ಸಂಪತ್ತನ್ನು ಗಳಿಸಿದ್ದಾರೆ. ಆಸ್ತಿ ಖರೀದಿಯ ಸಮಯದಲ್ಲಿ ಸ್ಟಾಂಪ್ ಡ್ಯೂಟಿಯನ್ನು ತಪ್ಪಿಸುವ ಮೂಲಕ ಅವರು ರಾಜ್ಯ ಖಜಾನೆಗೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
