24/08/2026

Law Guide Kannada

Online Guide

105 ವರ್ಷದ ಕೊಲೆ ಅಪರಾಧಿಗೆ ಕೊನೆಗೂ ಸಿಕ್ತು ಬಿಡುಗಡೆ ಭಾಗ್ಯ.

ನವದೆಹಲಿ: ಕೊಲೆ ಪ್ರಕರಣವೊಂದರಲ್ಲಿ 30 ವರ್ಷಗಳಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 105 ವರ್ಷದ ಅಪರಾಧಿಗೆ ಕೊನೆಗೂ ಬಿಡುಗಡೆಯ ಭಾಗ್ಯ ದೊರೆತಿದೆ. ಅಪರಾಧಿಯ ನೆರವಿಗೆ ಬಂದ ಸುಪ್ರೀಂಕೋರ್ಟ್, ಆರೋಗ್ಯ ಸಮಸ್ಯೆ ಮತ್ತು ವಯಸ್ಸು ಪರಿಗಣಿಸಿ ಮಧ್ಯಂತರ ಜಾಮೀನು ಆದೇಶವನ್ನು ಅಂತಿಮಗೊಳಿಸಿ ಬಿಡುಗಡೆಗೆ ಆದೇಶ ನೀಡಿದೆ.

1994ರಲ್ಲಿ ಪಶ್ಚಿಮ ಬಂಗಾಳದ ಮಾಲ್ದಾ ಜಿಲ್ಲೆಯ ರಸಿಕ್ ಚಂದ್ರ ಮಂಡಲ್ ತನ್ನ 68ನೇ ವಯಸ್ಸಿನಲ್ಲಿ ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆಗೆ ಒಳಗಾಗಿದ್ದರು. ಈ ಮಧ್ಯೆ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಮಂಡಲ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್ 2018ರಲ್ಲಿ ವಜಾಗೊಳಿಸಿತ್ತು.

ಈ ಬೆನ್ನಲ್ಲೆ ಹೈಕೋರ್ಟ್ ಆದೇಶದ ವಿರುದ್ಧ ರಸಿಕ್ ಚಂದ್ರ ಮಂಡಲ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. 30 ವರ್ಷ ಜೈಲು ಶಿಕ್ಷೆ ಅನುಭವಿಸಿದ ಮಂಡಲ್ಗೆ ಸುಪ್ರೀಂಕೋರ್ಟ್ 2024ರಲ್ಲಿ ಜಾಮೀನು ಮಂಜೂರು ಮಾಡಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ.ಮೋಹನಾ ಅವರಿದ್ದ ಪೀಠವು, ‘ಅರ್ಜಿದಾರರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆ ಮತ್ತು ವಯಸ್ಸು ಪರಿಗಣಿಸಿ ಪ್ರಕರಣವನ್ನು ಮುಕ್ತಾಯಗೊಳಿಸುತ್ತಿರುವುದಾಗಿ ತಿಳಿಸಿದ್ದು ಹಾಗೆಯೇ ಈ ವಿಷಯದಲ್ಲಿ ಉಳಿದ ಶಿಕ್ಷೆ ಇದ್ದರೆ ಅದನ್ನು ಮನ್ನಾ ಮಾಡುತ್ತಿರುವುದಾಗಿ ಹೇಳಿದೆ. ಮಂಡಲ್ ಜೀವಾವಧಿ ಶಿಕ್ಷೆ ಮುಗಿಯದಿದ್ದರೂ, ಮತ್ತೆ ಕಸ್ಟಡಿಗೆ ತೆಗೆದುಕೊಳ್ಳಲಾಗುವುದಿಲ್ಲ’ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.