ಮಾಜಿ ಸಂಸದರ ಅರ್ಜಿ ವಜಾ: 2 ದಶಕಗಳ ಹಳೆಯ ಪ್ರಕರಣಕ್ಕೆ ಅಂತ್ಯ ಹಾಡಿದ ಸುಪ್ರೀಂ.
ನವದೆಹಲಿ: ರಾಮೋಜಿ ಗ್ರೂಪ್ ಆಫ್ ಕಂಪನೀಸ್ ಗೆ ಸೇರಿದ ಸಂಸ್ಥೆಯಾದ ಮಾರ್ಗದರ್ಶಿ ಫೈನಾನ್ಷಿಯರ್ಸ್ ವಿರುದ್ಧ ಮಾಜಿ ಸಂಸದ ವುಂಡವಳ್ಳಿ ಅರುಣ್ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡುವ ಮೂಲಕ 2 ದಶಕಗಳ ಹಳೆಯ ಪ್ರಕರಣಕ್ಕೆ ಸುಪ್ರೀಂಕೋರ್ಟ್ ಅಂತ್ಯ ಹಾಡಿದೆ.
ಮಾರ್ಗದರ್ಶಿ ಫೈನಾನ್ಷಿಯರ್ಸ್ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿ ತೆಲಂಗಾಣ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮಾಜಿ ಸಂಸದ ವುಂಡವಳ್ಳಿ ಅರುಣ್ ಕುಮಾರ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ.ವರಾಳೆ ಅವರಿದ್ದ ಪೀಠವು ಅಂತಿಮ ವಿಚಾರಣೆ ನಡೆಸಿದ್ದು, ಅರ್ಜಿ ಸಲ್ಲಿಸಲು ನೀವು ಯಾರು?: ವಿಚಾರಣೆಯ ಸಮಯದಲ್ಲಿ, ಈ ಅರ್ಜಿ ಸಲ್ಲಿಸಲು ನೀವು ಯಾರು? ಎಂದು ಅರ್ಜಿದಾರರನ್ನು ಪ್ರಶ್ನಿಸಿತು. ಮಾಜಿ ಸಂಸದರ ಪರ ವಕೀಲರು ವಾದ ಮುಂದುವರಿಸಿದಾಗ, ಅರ್ಜಿದಾರರು ಸಂಸ್ಥೆಯೊಂದಿಗೆ ಕೇವಲ ವೈಯಕ್ತಿಕ ವಿವಾದ ಹೊಂದಿದ್ದಾರೆ. ಬೇರೇನೂ ಇದರಲ್ಲಿ ಗೋಚರಿಸುತ್ತಿಲ್ಲ. ಈ ಪ್ರಕರಣದಲ್ಲಿ ನೀವು ಹೆಚ್ಚು ವಾದಿಸಿದಷ್ಟೂ ನಿಮ್ಮ ಮೇಲೆಯೇ ಅನುಮಾನಗಳು ಹೆಚ್ಚಾಗುತ್ತವೆ ಎಂದು ಪೀಠವು ಅರ್ಜಿದಾರರಿಗೆ ಸ್ಪಷ್ಟಪಡಿಸಿತು.
ಈ ವೇಳೆ, ಮಾರ್ಗದರ್ಶಿ ಫೈನಾನ್ಷಿಯರ್ಸ್ ಪರ ಹಾಜರಿದ್ದ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಮತ್ತು ನಾಗಮುತ್ತು ಅವರು, ಇದುವರೆಗೆ 2,591 ಕೋಟಿ ರೂಪಾಯಿ ಮೊತ್ತವನ್ನು ಠೇವಣಿದಾರರಿಗೆ ಹಿಂತಿರುಗಿಸಲಾಗಿದೆ. ಕ್ಲೇಮು ಆಗದ ಬಾಕಿ 5.43 ಕೋಟಿ ರೂಪಾಯಿ ಮೊತ್ತವನ್ನು ಎಸ್ಕ್ರೊ ಖಾತೆಯಲ್ಲಿ ಠೇವಣಿ ಇಡಲಾಗಿದೆ ಎಂದು ಪೀಠದ ಗಮನಕ್ಕೆ ತಂದರು. ಸುಪ್ರೀಂ ಕೋರ್ಟ್ ನಿರ್ದೇಶನಗಳಂತೆ ಹೈಕೋರ್ಟ್ ಕಾರ್ಯನಿರ್ವಹಿಸಿದೆ. ಸಾರ್ವಜನಿಕ ನೋಟಿಸ್ ನೀಡಿದ ನಂತರವೇ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ದ್ವಿಸದಸ್ಯ ಪೀಠಕ್ಕೆ ವಿವರಿಸಿದರು.
ವಾದ ಪ್ರತಿವಾದ ಆಲಿಸಿದ ನಂತರ, ಪ್ರಕರಣದಲ್ಲಿ ಯಾವುದೇ ತಥ್ಯ ಇಲ್ಲ ಎಂದು ಪರಿಗಣಿಸಿದ ನ್ಯಾಯಪೀಠವು ಮಾಜಿ ಸಂಸದರ ಅರ್ಜಿಯನ್ನು ವಜಾಗೊಳಿಸಿ ಪ್ರಕರಣಕ್ಕೆ ಅಂತ್ಯ ಹಾಡಿತು.
ಏನಿದು ಪ್ರಕರಣ
2008 ರಲ್ಲಿ ಅವಿಭಜಿತ ಆಂಧ್ರಪ್ರದೇಶದ ಮಾಜಿ ಸಿಎಂ ವೈ.ಎಸ್. ರಾಜಶೇಖರ್ ರೆಡ್ಡಿ ಅವರ ಸರ್ಕಾರದ ಅವಧಿಯಲ್ಲಿ ಮಾರ್ಗದರ್ಶಿ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲಾಗಿತ್ತು. ಆರ್ಬಿಐ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿತ್ತು. ಆದರೆ, 10 ವರ್ಷಗಳ ನಂತರ ತೆಲಂಗಾಣ ಹೈಕೋರ್ಟ್ ಈ ಪ್ರಕ್ರಿಯೆಯನ್ನು ರದ್ದುಗೊಳಿಸಿತ್ತು.
2024ರ ಏಪ್ರಿಲ್ನಲ್ಲಿ ಸುಪ್ರೀಂ ಕೋರ್ಟ್ ಪ್ರಕರಣವನ್ನು ಮರಳಿ ಹೈಕೋರ್ಟ್ಗೆ ವರ್ಗಾಯಿಸಿ, ಈ ಕ್ರಿಮಿನಲ್ ಪ್ರಕ್ರಿಯೆ ಮುಂದುವರಿಸಬಹುದೇ ಎಂದು ನಿರ್ಧರಿಸಲು ಸೂಚಿಸಿತ್ತು. ಹೂಡಿಕೆದಾರರು ಮತ್ತು ಠೇವಣಿದಾರರಿಂದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸುವಂತೆಯೂ ಹೇಳಿತ್ತು. ಇದರನ್ವಯ, ಹೈಕೋರ್ಟ್ ರಿಜಿಸ್ಟ್ರಿಯು 2024ರ ಸೆಪ್ಟೆಂಬರ್ 26 ರಂದು ಪತ್ರಿಕೆಗಳಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಿ ಆಕ್ಷೇಪಣೆಗಳನ್ನು ಕೋರಿತ್ತು.
ಆದರೆ, ಯಾವೊಬ್ಬ ಠೇವಣಿದಾರನೂ ದೂರು, ಆಕ್ಷೇಪಣೆ ಸಲ್ಲಿಸಿರಲಿಲ್ಲ. ಈ ಮಧ್ಯೆ 2025ರ ಆರಂಭದಲ್ಲಿ ಮಾರ್ಗದರ್ಶಿ ಫೈನಾನ್ಷಿಯರ್ಸ್ ಹೈಕೋರ್ಟ್ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿ ಎಲ್ಲ ಠೇವಣಿದಾರರಿಗೆ ಹಣವನ್ನು ಮರುಪಾವತಿಸಲಾಗಿದೆ. ಸಂಸ್ಥೆಯ ಮೇಲಿನ ಪ್ರಕರಣವನ್ನು ಕೈ ಬಿಡುವಂತೆ ಮನವಿ ಮಾಡಿತ್ತು. ಜೊತೆಗೆ, ಸಂಸ್ಥೆಯ ಸಂಸ್ಥಾಪಕರಾದ ರಾಮೋಜಿ ರಾವ್ ಅವರು ನಿಧನರಾಗಿದ್ದಾರೆ. ಹೀಗಾಗಿ ಉಳಿದ ಸದಸ್ಯರನ್ನು ಆರೋಪಿಗಳನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ಯಾವುದೇ ಠೇವಣಿದಾರರು ಆಕ್ಷೇಪಣೆ ಎತ್ತದ ಹಿನ್ನೆಲೆಯಲ್ಲಿ ತೆಲಂಗಾಣ ಹೈಕೋರ್ಟ್, ಮಾರ್ಗದರ್ಶಿ ಫೈನಾನ್ಷಿಯರ್ಸ್ ಮೇಲೆ ಹೊರಿಸಲಾಗಿದ್ದ ಎಲ್ಲ ಕ್ರಿಮಿನಲ್ ಆರೋಪಗಳನ್ನು ವಜಾಗೊಳಿಸಿತ್ತು.
ಇದನ್ನು ಪ್ರಶ್ನಿಸಿ ಮಾಜಿ ಸಂಸದ ವುಂಡವಳ್ಳಿ ಅರುಣ್ ಕುಮಾರ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಇದೀಗ, ಸುಪ್ರೀಂ ಕೋರ್ಟ್ ಕೂಡ ಅಂತಿಮ ತೀರ್ಪು ನೀಡುವ ಮೂಲಕ ಪ್ರಕರಣ ಅಂತ್ಯಗೊಳಿಸಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
