25/08/2026

Law Guide Kannada

Online Guide

ಜಡ್ಜ್ ಗೆ ಲಂಚ ನೀಡಬೇಕೆಂದು ಹಣಕ್ಕೆ ಬೇಡಿಕೆ ಆರೋಪ: ಅರ್ಜಿ ತಿರಸ್ಕರಿಸಿ ಹೈಕೋರ್ಟ್ ಕಳವಳ

ಬೆಂಗಳೂರು: ಜಾಮೀನು ಕೊಡಿಸಲು ನ್ಯಾಯಮೂರ್ತಿಗಳಿಗೆ ಲಂಚ ಕೊಡಬೇಕೆಂದು ಹೇಳಿ ಹಣ ಪಡೆದುಕೊಂಡ ಆರೋಪ ಎದುರಿಸುತ್ತಿರುವ ವಕೀಲೆ ತನ್ನ ವಿರುದ್ದ ದಾಖಲಾಗಿರುವ ಎಫ್ ಐಆರ್ ರದ್ದುಪಡಿಸಬೇಕೆಂದು ಕೋರಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್ ಈ ಸಂಬಂಧ ಕಳವಳ ವ್ಯಕ್ತಪಡಿಸಿದೆ.

‘ನನ್ನ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಬೇಕು’ ಎಂದು ಕೋರಿ ವಕೀಲೆ ಬಿ.ಎಂ.ದಯೀನಾ ಬಾನು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು, ‘ಹೈಕೋರ್ಟ್ ನ್ಯಾಯಮೂರ್ತಿಗೆ ಲಂಚ ನೀಡುವ ನೆಪದಲ್ಲಿ ಹಣಕ್ಕೆ ಬೇಡಿಕೆ ಇರಿಸುವಂತಹ ಆರೋಪಗಳು ಸಂಸ್ಥೆಯ ಸಮಗ್ರತೆಯ ಮೂಲವನ್ನೇ ಬುಡಮೇಲು ಮಾಡುತ್ತವೆ’ ಎಂದು ಆತಂಕ ವ್ಯಕ್ತಪಡಿಸಿತು.

ವಿಚಾರಣೆ ವೇಳೆ ವಾದಿಸಿದ ದಯೀನಾ ಬಾನು ಪರ ವಕೀಲರು, ‘ಅರ್ಜಿದಾರರು ಈಗಾಗಲೇ ಭಾರತೀಯ ವಕೀಲರ ಪರಿಷತ್ನಿಂದ ಶಿಸ್ತುಕ್ರಮ ಎದುರಿಸುತ್ತಿದ್ದಾರೆ. ಪ್ರಾಥಮಿಕ ತನಿಖೆ ನಡೆಸದೇ ಎಫ್ಐಆರ್ ದಾಖಲಿಸಿರುವ ಕಾರಣ ಅದನ್ನು ರದ್ದುಗೊಳಿಸಬೇಕು’ ಎಂದು ಕೋರಿದ್ದರು.

ಆದರೆ ಈ ವಾದವನ್ನ ತಳ್ಳಿ ಹಾಕಿರುವ ನ್ಯಾಯಪೀಠ, ‘ತಮ್ಮ ಮಗನಿಗೆ ಜಾಮೀನು ಕೊಡಿಸಲು ವ್ಯವಸ್ಥೆ ಮಾಡುವ ನೆಪದಲ್ಲಿ ಹಣ ನೀಡುವಂತೆ ವಿಷ್ಣುದೇವನ್ ಅವರ ತಾಯಿಯನ್ನು ಪ್ರೇರೇಪಿಸಲಾಗಿದೆ ಮತ್ತು ಇದು ಮೇಲ್ನೋಟಕ್ಕೆ ಆರಂಭದಿಂದಲೇ ಅಪ್ರಾಮಾಣಿಕ ಉದ್ದೇಶವನ್ನು ಹೊಂದಿರುವಂತೆ ತೋರುತ್ತದೆ. ಆದ್ದರಿಂದ, ವಂಚನೆಯ ಅಪರಾಧದ ಅಂಶಗಳು ಕನಿಷ್ಠ ಮಟ್ಟದಲ್ಲೂ ಕಂಡುಬರುವುದಿಲ್ಲ ಎಂಬ ಹಿರಿಯ ವಕೀಲರ ವಾದವು ಅತ್ಯಂತ ಅಸಂಬದ್ಧವಾಗಿದೆ’ ಎಂದು ಹೇಳಿತು.

‘ಜೈಲಿನಲ್ಲಿ ಇರುವ ಆರೋಪಿಯ ತಾಯಿ ಈಗಾಗಲೇ ಇದೇ ಹೈಕೋರ್ಟ್ನ ಸಮನ್ವಯ ನ್ಯಾಯಪೀಠಕ್ಕೆ ಪತ್ರವೊಂದನ್ನು ನೀಡಿ, ಅರ್ಜಿದಾರ ವಕೀಲೆ ಮತ್ತು ಆಕೆಯ ಸಹವರ್ತಿಗಳು ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರಿಗೆ ಹಣ ನೀಡಿ ಜಾಮೀನು ಕೊಡಿಸುವುದಾಗಿ ಹೇಳಿದ್ದಾರೆ. ಈ ಆರೋಪದಡಿಯಲ್ಲೇ ದೂರು ದಾಖಲಾಗಿದ್ದು, ತನಿಖೆ ನಡೆಸಿ ಆರೋಪಿಗಳನ್ನು ಬಯಲಿಗೆ ಎಳೆಯಬೇಕಿದೆ’ ಎಂದು ಸ್ಪಷ್ಟಪಡಿಸಿದೆ.

ಪ್ರಕರಣದ ವಿವರ
2021ರಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ನಗರದ ಬೈಯ್ಯಪ್ಪನಹಳ್ಳಿಯ ವಿ.ವಿಷ್ಣುದೇವನ್ (27) ಅವರು ಮೂರು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜೈಲಿನಲ್ಲಿರುವ ತನ್ನ ಮಗನಿಗೆ ಜಾಮೀನು ಕೊಡಿಸಲು ತಾಯಿ ತೆರೇಸಾ ಮುಂದಾಗಿದ್ದರು. ಮೆಯೋ ಹಾಲ್ ಕೋರ್ಟ್ ನಲ್ಲಿ ತೆರೇಸಾ ಅವರಿಗೆ ಪರಿಚಯವಾದ ಮರೀನಾ ಫರ್ನಾಂಡಿಸ್ ಮತ್ತು ನಂತರದಲ್ಲಿ ಸಂಪರ್ಕಕ್ಕೆ ಬಂದ ಆರತಿ ಹಾಗೂ ದಯೀನಾ ಬಾನು, ‘ನಿಮ್ಮ ಮಗನ ಬಿಡುಗಡೆ ಆದೇಶ ಪಡೆಯಬೇಕೆಂದರೆ 50 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಬೇಕಾಗುತ್ತದೆ. ಹೈಕೋರ್ಟ್ ನ್ಯಾಯಮೂರ್ತಿಯವರು ಒಂದೆರಡು ಲಕ್ಷದಂತಹ ಸಣ್ಣ ಮೊತ್ತವನ್ನು ಸ್ವೀಕರಿಸುವುದಿಲ್ಲ’ ಎಂದು ತೆರೇಸಾ ಅವರನ್ನು ಹಂತಹಂತವಾಗಿ ಪುಸಲಾಯಿಸಿ ಹಣ ಪಡೆದು ಜಾಮೀನು ಕೊಡಿಸದೇ ವಂಚಿಸಿದ್ದರು ಎನ್ನಲಾಗಿದೆ.

ಇದರಿಂದ ಹತಾಶಗೊಳಗಾದ ತೆರೇಸಾ ಈ ಕುರಿತು ವಕೀಲರ ಪರಿಷತ್ ಗೆ ದೂರು ನೀಡಿದ್ದರು. ಅಲ್ಲದೆ 2024ರ ಡಿಸೆಂಬರ್ 18ರಂದು ನೇರವಾಗಿ ಹೈಕೋರ್ಟ್ಗೆ ಪತ್ರವೊಂದನ್ನು ಬರೆದು ‘ನ್ಯಾಯಮೂರ್ತಿಯವರಿಗೆ ಲಂಚ ನೀಡಬೇಕು ಎಂದು ವಕೀಲೆ ಹಣ ಕೇಳುತ್ತಿದ್ದಾರೆ’ ಎಂದು ದೂರಿದ್ದರು.

ಈ ಪತ್ರವನ್ನು ಪರಿಗಣಿಸಿದ್ದ ಏಕಸದಸ್ಯ ನ್ಯಾಯಪೀಠ, ‘ನ್ಯಾಯಮೂರ್ತಿಯವರ ಹೆಸರಿನಲ್ಲಿ ಕಕ್ಷಿದಾರರಿಂದ ಹಣಕ್ಕೆ ಬೇಡಿಕೆ ಇಡುವ ಕೃತ್ಯದಲ್ಲಿ ವಕೀಲೆ ತೊಡಗಿರುವಂತೆ ಕಂಡುಬರುತ್ತಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಅಪರಾಧ ಪ್ರಕ್ರಿಯೆ ಪ್ರಾರಂಭಿಸುವಂತೆ ರಿಜಿಸ್ಟ್ರಾರ್ ಜನರಲ್ಗೆ ನಿರ್ದೇಶಿಸಿತ್ತು. ಪರಿಣಾಮ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ, ಭಾರತೀಯ ನ್ಯಾಯ ಸಂಹಿತಾ-2023ರ ಕಲಂ 318(4) (ವಂಚನೆ-ಇದು ಐಪಿಸಿ ಕಲ 420ಕ್ಕೆ ಸಮಾನ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.