25/08/2026

Law Guide Kannada

Online Guide

ನ್ಯಾಯಾಧೀಶರು ದೇವರಲ್ಲ: ಪ್ರತಿ ತೀರ್ಪು ಸರಿಯಾಗಿರಲು ಸಾಧ್ಯವಿಲ್ಲ- ನಿವೃತ್ತ ನ್ಯಾ.ಸಂಜಯ್ ಕರೋಲ್ ಮಾರ್ಮಿಕ ನುಡಿ

ನವದೆಹಲಿ: ನ್ಯಾಯದಾನ ಪ್ರಕ್ರಿಯೆಯಲ್ಲಿ ವಿನಮ್ರತೆ ಮತ್ತು ಮಾನವೀಯ ಸಂವೇದನೆ ಅತ್ಯಗತ್ಯ. ಪ್ರತಿಯೊಂದು ತೀರ್ಪು ಸರಿಯಾಗಿರಲು ಸಾಧ್ಯವಿಲ್ಲ. ಏಕೆಂದರೆ ನ್ಯಾಯಾಧೀಶರು ದೇವರಲ್ಲ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂಜಯ್ ಕರೋಲ್ ಅವರು ಮಾರ್ಮಿಕವಾಗಿ ನುಡಿದರು.

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (SCBA) ತಮಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಸಂಜಯ್ ಕರೋಲ್ ಅವರು, ಅರ್ಜಿದಾರ ಸಲ್ಲಿಸುವ ಅರ್ಜಿಯು ಪ್ರಕರಣದ ಸತ್ಯಾಸತ್ಯತೆಗಳನ್ನು ಮಾತ್ರ ತಿಳಿಸುತ್ತದೆ. ಆದರೆ ಆ ವ್ಯಕ್ತಿ ಜೀವನದಲ್ಲಿ ಏನನ್ನು ಕಳೆದುಕೊಂಡಿದ್ದಾನೆ ಅಥವಾ ಕೋರ್ಟ್ನಿಂದ ಏನನ್ನು ನಿರೀಕ್ಷಿಸುತ್ತಿದ್ದಾನೆ ಎಂಬುದು ಅದರಲ್ಲಿರುವುದಿಲ್ಲ. ಆದ್ದರಿಂದ ಪ್ರಕರಣದ ಕಡತಗಳಷ್ಟೇ ಅಲ್ಲದೆ, ಅದರ ಹಿಂದಿರುವ ‘ಮನುಷ್ಯನನ್ನು ಕಾಣುವುದು ನ್ಯಾಯಾಧೀಶರ ಕರ್ತವ್ಯ ಎಂದು ತಿಳಿಸಿದರು.

ಇನ್ನು ಸಂವಿಧಾನವು ಕೇವಲ ಕಾನೂನನ್ನು ಯಾಂತ್ರಿಕವಾಗಿ ಅನ್ವಯಿಸುವುದನ್ನು ಅಪೇಕ್ಷಿಸುವುದಿಲ್ಲ, ಬದಲಿಗೆ ಅದನ್ನು ‘ನ್ಯಾಯಯುತವಾಗಿ’ ಅನ್ವಯಿಸುವುದನ್ನು ಬಯಸುತ್ತದೆ ಎಂದು ಕರೋಲ್ ತಿಳಿಸಿದರು.

ತಮ್ಮ ಸುದೀರ್ಘ ಸೇವಾವಧಿಯನ್ನು ಸ್ಮರಿಸಿದ ಸಂಜಯ್ ಕರೋಲ್ ಅವರು, ನ್ಯಾಯಾಂಗ ಸೇವೆಯಿಂದ ನಿವೃತ್ತರಾದ ನಂತರ ತಾವು ದೇಶದ ಅತ್ಯಂತ ಗೌರವಾನ್ವಿತ ಸಾಂವಿಧಾನಿಕ ಹುದ್ದೆಯಾದ ‘ಸಾಮಾನ್ಯ ಪ್ರಜೆ’ಯ ಸ್ಥಾನಕ್ಕೆ ಮರಳುತ್ತಿರುವುದಾಗಿ ಹೆಮ್ಮೆಯಿಂದ ಹೇಳಿದರು.

ಕರೋಲ್ ಅವರ ಸೇವೆಯನ್ನ ಶ್ಲಾಘಿಸಿದ CJI
ಸಮಾರಂಭದಲ್ಲಿ ಮಾತನಾಡಿ ಕರೋಲ್ ಅವರ ಸೇವೆಯನ್ನ ಶ್ಲಾಘಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರು, ನ್ಯಾಯಮೂರ್ತಿ ಕರೋಲ್ ಅವರು ಯುವ ವಕೀಲರಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು. ಸಂವಿಧಾನದ ಆಶಯಗಳನ್ನು ತಮ್ಮ ದೈನಂದಿನ ನ್ಯಾಯದಾನದಲ್ಲಿ ಅಳವಡಿಸಿಕೊಂಡಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು

ನ್ಯಾಯಮೂರ್ತಿ ಸಂಜಯ್ ಕರೋಲ್ ಅವರು ವಕೀಲರಾಗಿ ಹಾಗೂ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ತ್ರಿಪುರಾ ಮತ್ತು ಪಾಟ್ನಾ ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಯಾಗಿ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಒಟ್ಟು 40 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿದ್ದಾರೆ.

ಸಮಾರಂಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಹಾಗೂ ಹಿರಿಯ ವಕೀಲರು ಸೇರಿದಂತೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಬಹುತೇಕ ವಕೀಲರು ಉಪಸ್ಥಿತರಿದ್ದರು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.