08/03/2026

Law Guide Kannada

Online Guide

ಸರ್ಕಾರಿ ಜಮೀನು ಅಕ್ರಮವಾಗಿ ಖಾತೆ: ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಜೈಲುಶಿಕ್ಷೆ, ದಂಡ

ಕೋಲಾರ: ಸರ್ಕಾರಿ ಖರಾಬ್ ಜಮೀನಿಗೂ ಖಾತೆ ಮಾಡಿಕೊಟ್ಟ ಆರೋಪದ ಮೇಲೆ ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿ ಸಹಿತ 17 ಮಂದಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಕೆಜಿಎಫ್ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ತೀರ್ಪು ನೀಡಿದೆ ಕೆಜಿಎಫ್ ಘಟ್ ನ ಕಾಮಧೇನುಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಈ ಮೂಲಕ ಸರಕಾರಿ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟ ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ನ್ಯಾಯಾಲಯ ಬಿಸಿ ಮುಟ್ಟಿಸಿದೆ.

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೇರಿದಂತೆ 17 ಮಂದಿಗೆ ಕೆಜಿಎಫ್ ನ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಂ ಮಂಜು ಅವರಿದ್ದ ನ್ಯಾಯಪೀಠ ಒಂದು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶಿಸಿದೆ. ಈ ಅಪರಾಧಿಗಳ ಪೈಕಿ ಮೂವರು ಮೃತಪಟ್ಟಿದ್ದಾರೆ.

12 ಮಂದಿಗೆ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು ವಿಚಾರಣೆ ಕೈಗೆತ್ತಿಕೊಂಡ ಕೆಜಿಎಫ್ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಈ ಪ್ರಕರಣದಲ್ಲಿ ತೀರ್ಪು ನೀಡಿದೆ.

ತೀರ್ಪಿನ ಪ್ರಕಾರ ಆಗಿನ ಅಧ್ಯಕ್ಷ ಮಂಜು ಭಾರ್ಗವಿ, ಉಪಾಧ್ಯಕ್ಷ ಶಶಿಧರ್, ಪಿಡಿಓ ರತ್ನಮ್ಮ, ಬಿಲ್ ಕಲೆಕ್ಟರ್ ಮತ್ತು ಕಂಪ್ಯೂಟರ್ ಆಪರೇಟರ್ಗಳಾದ ನಾರಾಯಣಸ್ವಾಮಿ ಮತ್ತು ರಾಜೇಂದ್ರ ಅವರು ಶಿಕ್ಷೆಗೊಳಗಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು.

ಹಾಗೆಯೇ , ಫಲಾನುಭವಿಗಳಾದ ಅಕ್ರಮ ಖಾತೆ ಮಾಡಿಕೊಂಡ ಮುರುಗೇಶ್, ಸುಬ್ರಮಣಿ, ಕದಂಬವತಿ, ಶ್ರೀನಿವಾಸ್, ಪ್ರಿಯ, ಶ್ರೀಧರ್, ಅಣ್ಣಾದೊರೈ, ಆರ್ ಪಾಂಡುರಂಗನ್ ಮತ್ತು ಬಿ ರವಿಚಂದ್ರನ್ ಪ್ರಕರಣದಲ್ಲಿ ಅಪರಾಧಿಗಳಾಗಿದ್ದಾರೆ. ಉಳಿದ ತಪ್ಪಿತಸ್ಥರಾದ ಗಂಗಾಧರಂ, ಜಗದಂಬಾಲ್, ಮತ್ತು ಎಡ್ಮಿನ್ ಮೃತಪಟ್ಟಿದ್ದಾರೆ.

ಪ್ರಕರಣದ ಆರೋಪಿಗಳಾದ ಮಂಜು ಭಾರ್ಗವಿ, ಶಶಿಧರ್, ಪಿಡಿಓ ರತ್ನಮ್ಮ, ಸಿಬ್ಬಂದಿ ನಾರಾಯಣಸ್ವಾಮಿ ಮತ್ತು ರಾಜೇಂದ್ರ ಅವರಿಗೆ ಒಂದು ವರ್ಷದ ಜೈಲು ಮತ್ತು 6,000 ದಂಡ ವಿಧಿಸಲಾಗಿದೆ. ಇನ್ನು ಅಕ್ರಮ ಜಮೀನಿನ ಫಲಾನುಭವಿಗಳಾದ 9 ಮಂದಿಗೆ ಒಂದು ವರ್ಷ ಜೈಲು ಮತ್ತು 2000 ದಂಡ ವಿಧಿಸಲಾಗಿದೆ

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.