ಅಮೆಜಾನ್ ಗೆ 40 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಗ್ರಾಹಕ ನ್ಯಾಯಾಲಯ: ಏಕೆ ಗೊತ್ತೆ..?
ಬೆಂಗಳೂರು: ವಸ್ತುಗಳನ್ನ ಕೊಂಡುಕೊಳ್ಳುವಾಗ ಗ್ರಾಹಕರು ಮೋಸ ಹೋದರೆ ಮೋಸ ಮಾಡಿದ ಕಂಪನಿ ಸಂಸ್ಥೆ ವಿರುದ್ದ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿ ನ್ಯಾಯ ಪಡೆಯುವ ವ್ಯವಸ್ಥೆ ಇದೆ. ಅಂತೆಯೇ ಕೇವಲ 100 ರೂಪಾಯಿ ಮೌಲ್ಯದ ರಕ್ಷಾ ಬಂಧನವನ್ನು ಗ್ರಾಹಕರಿಗೆ ತಲುಪಿಸದ ಅಮೆಜಾನ್ ಸಂಸ್ಥೆಗೆ ಮುಂಬೈನ ಜಿಲ್ಲಾ ಗ್ರಾಹಕ ನ್ಯಾಯಾಲಯ 40,000 ದಂಡ ವಿಧಿಸಿ ತೀರ್ಪು ನೀಡಿದೆ.
ರಕ್ಷಾ ಬಂಧನವನ್ನ ತಲುಪಿಸದೇ ಸೇವಾನ್ಯೂನ್ಯತೆ ಎಸಗಿದ ಆರೋಪದ ಮೇಲೆ ಅಮೇಜಾನ್ ಗೆ ದಂಡ ವಿಧಿಸಲಾಗಿದೆ. ಗ್ರಾಹಕರಿಗೆ 60 ದಿನದ ಒಳಗೆ ರೂಪಾಯಿ 30,000 ಮತ್ತು 10,000 ದಾವೆ ವೆಚ್ಚವನ್ನು ಪಾವತಿಸಲು ಅಮೆಜಾನ್ ಸಂಸ್ಥೆಗೆ ಗ್ರಾಹಕ ನ್ಯಾಯಾಲಯ ನಿರ್ದೇಶನ ನೀಡಿದೆ. ಅಲ್ಲದೆ ಸಮಯಕ್ಕೆ ಸರಿಯಾಗಿ ಪಾವತಿಸದಿದ್ದರೆ ಪಾವತಿ ಮಾಡುವವರಿಗೆ ವಾರ್ಷಿಕ ಶೇಕಡ ಆರು ರಷ್ಟು ಬಡ್ಡಿ ವಿಧಿಸಲಾಗುತ್ತದೆ ಎಂದು ಗ್ರಾಹಕ ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಏನಿದು ಪ್ರಕರಣ
ಮಹಿಳೆಯೊಬ್ಬರು 2019ರಲ್ಲಿ ತನ್ನ ಸಹೋದರನಿಗೆ ನೂರು ರೂಪಾಯಿ ಮೌಲ್ಯದ “ಮೋಟು ಔರ್ ಪತ್ತು” ಕಿಡ್ಸ್ ರಕ್ಷಾ ಬಂಧನ (ರಾಖಿ)ವನ್ನ ಆರ್ಡರ್ ಮಾಡಿದ್ದರು. ಅವರಿಗೆ ಅಮೆಜಾನ್ ಸರಿಯಾಗಿ ಸೇವೆ ನೀಡದ ಹಿನ್ನಲೆಯಲ್ಲಿ ಮಹಿಳೆ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಪ್ರಕರಣದಲ್ಲಿ, ಅಮೆಜಾನ್ ಈ ಆರ್ಡರ್ ಅನ್ನು ರದ್ದುಗೊಳಿಸಿತ್ತು. ಬಳಿಕ ಆರ್ಡರ್ ಗಾಗಿ ಪಾವತಿಸಿದ ರೂ. 100/-ಗಳನ್ನು ಅದರ ನಿಗದಿತ ವಿಚಾರಣಾ ದಿನದ ಒಂದು ದಿನದ ನಂತರ ಪಾವತಿಸಿತ್ತು. ರಕ್ಷಾಬಂಧನ ವಿತರಣೆಯನ್ನು ನಿಷ್ಕ್ರಿಯಗೊಂಡ ಕೊರಿಯರ್ ಸೇವೆಗೆ ವಹಿಸಲಾಗಿತ್ತು ಎಂಬ ಗ್ರಾಹಕರ ದೂರನ್ನು ಗಮನಿಸಿದ ಜಿಲ್ಲಾ ಗ್ರಾಹಕ ಆಯೋಗ, ಈ ಲೋಪಕ್ಕೆ ಹೆಚ್ಚುವರಿ ಪರಿಹಾರ ಪಾವತಿಸಲು ಆದೇಶ ನೀಡಿದೆ.
ರಾಖಿ ಉತ್ಪನ್ನವನ್ನು ಅಮೆಜಾನ್ ಜಾಲತಾಣದಲ್ಲಿ ಜಾಹೀರಾತು ನೀಡಿದ್ದ ಮಾರಾಟಗಾರನಿಗೆ ಮೀಡಿಯೇಟರ್ ಆಗಿದ್ದ (ಮಧ್ಯಸ್ಥಗಾರ) ಅಮೆಜಾನ್ ರೂ. 100/-ಗಳನ್ನು ಕಳಿಸಿಲ್ಲ ಎಂಬುದನ್ನು ಆಯೋಗ ಗಮನಿಸಿದ್ದು, ಉತ್ಪನ್ನ ತಲುಪಿಸಲು ಅಮೆಜಾನ್ ಜವಾಬ್ದಾರಿ ಹೊಂದಿತ್ತು. ಆದರೆ, ಅದು ತನ್ನ ಕರ್ತವ್ಯದಿಂದ ವಿಮುಖವಾಗಿ ಗ್ರಾಹಕನಿಗೆ ಸೇವಾ ನ್ಯೂನ್ಯತೆ ತೋರಿದೆ ಎಂದು ಗ್ರಾಹಕ ಆಯೋಗ ಗಮನಿಸಿತು.
ಅಮೆಜಾನ್ ಸಂಸ್ಥೆಯ ಸೇವಾ ನ್ಯೂನ್ಯತೆ ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಗೆ ಅದು ಗ್ರಾಹಕನಿಗೆ ಹೊಣೆಗಾರನಾಗಿದೆ ಎಂದು ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷ ಸಮಿಂದರ್ ಆರ್ ಸುರ್ವೇ ಮತ್ತು ಸದಸ್ಯ ಸಮೀರ್ ಎಸ್. ಕಾಂಬಳೆ ಅವರಿದ್ದ ನ್ಯಾಯಾಲಯ ಈ ತೀರ್ಪು ನೀಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
