ನವಜಾತ ಶಿಶುವಿನ ಮೂಗಿಗೆ ತೀವ್ರ ಗಾಯ: 40 ಲಕ್ಷ ರೂ. ಪರಿಹಾರ ನೀಡಲು ESIC ಆಸ್ಪತ್ರೆಗೆ ಗ್ರಾಹಕ ಆಯೋಗ ಆದೇಶ
ಬೆಂಗಳೂರು: ಚಿಕಿತ್ಸೆ ವೇಳೆ ಸಿಪಿಎಪಿ ಯಂತ್ರದ ದೋಷದಿಂದ ನವಜಾತ ಶಿಶುವಿನ ಮೂಗಿಗೆ ತೀವ್ರ ಹಾಗೂ ಶಾಶ್ವತ ಗಾಯವಾದ ಪ್ರಕರಣಕ್ಕೆ ಸಂಬಂಧಿಸಿದಂತೆ 40 ಲಕ್ಷ ರೂ. ಪರಿಹಾರ ನೀಡುವಂತೆ ಬೆಂಗಳೂರಿನ ರಾಜಾಜಿನಗರದಲ್ಲಿರುವ ಇಎಸ್ ಐಸಿ ಮೆಡಿಕಲ್ ಮತ್ತು ಪಿಜಿಐಎಂಎಸ್ ಆರ್ ಆಸ್ಪತ್ರೆಗೆ ಬೆಂಗಳೂರು-1ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಆದೇಶಿಸಿದೆ.
2022ರಲ್ಲಿ ಇಎಸ್ ಐಸಿ ಮೆಡಿಕಲ್ ಕಾಲೇಜು ಮತ್ತು ಪಿಜಿಐಎಂಎಸ್ (PGIMSR) ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆಯಲ್ಲಿ ಸಿಪಿಎಪಿ ಯಂತ್ರ ದೋಷದಿಂದ ನವಜಾತ ಶಿಶುವಿನ ಮೂಗಿಗೆ ಗಂಭೀರ ಸುಟ್ಟ ಗಾಯಗಳಾಗಿತ್ತು. ಹೀಗಾಗಿ ಆಸ್ಪತ್ರೆ ವಿರುದ್ಧ ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿತ್ತು. ಗ್ರಾಹಕ ದೂರುವನ್ನು ಬೆಂಗಳೂರು-1ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಪುರಸ್ಕರಿಸಿದೆ.
ಸಿಪಿಎಪಿ ಚಿಕಿತ್ಸೆಯಲ್ಲಿದ್ದ ವೇಳೆ ಯಂತ್ರದ ಹ್ಯೂಮಿಡಿಫೈಯರ್/ಥರ್ಮೋಸ್ಟಾಟ್ ದೋಷದಿಂದ ತಾಪಮಾನ 52ರಿಂದ 69 ಡಿಗ್ರಿ ಸೆಲ್ಸಿಯಸ್ ವರೆಗೆ ಏರಿಕೆಯಾಗಿ ಶಿಶುವಿನ ಮೂಗಿಗೆ ತೀವ್ರ ಸುಟ್ಟ ಗಾಯಗಳಾಗಿದ್ದವು. ಬಳಿಕ ಮಗುವಿಗೆ ಸುಮಾರು 90 ದಿನಗಳ ತೃತೀಯ ಹಂತದ ಚಿಕಿತ್ಸೆ ಅಗತ್ಯವಾಯಿತು. ಆಸ್ಪತ್ರೆಯು ಯಂತ್ರ ತಯಾರಕ ಎಫ್ ಎಎನ್ ಇಎಂ ಕಂಪನಿಯ ದೋಷವೆಂದು ಉಲ್ಲೇಖಿಸಿತು. ಆದರೆ ಗ್ರಾಹಕರ ಆಯೋಗವು ರೋಗಿಯ ಸುರಕ್ಷತೆ ಮತ್ತು ಚಿಕಿತ್ಸೆಯಲ್ಲಿ ಬಳಸುವ ಉಪಕರಣಗಳ ಮೇಲ್ವಿಚಾರಣೆಯ ಹೊಣೆ ಆಸ್ಪತ್ರೆಯದ್ದೇ ಎಂದು ಹೇಳಿ ಇದನ್ನು ಸೇವೆಯಲ್ಲಿನ ನ್ಯೂನ್ಯತೆ (‘Deficiency in Service’) ಎಂದು ಪರಿಗಣಿಸಿತು. ನಂತರ ಆಸ್ಪತ್ರೆ ಮತ್ತು ಸಂಬಂಧಿತ ನಾಲ್ವರು ಪ್ರತಿವಾದಿಗಳು ಜಂಟಿಯಾಗಿ 40 ಲಕ್ಷ ರೂ. ಪರಿಹಾರವನ್ನು ಶೇ.6ರ ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ಆಯೋಗ ಆದೇಶಿಸಿತು.
ಮೊತ್ತವನ್ನು ಮಗುವಿನ ಹೆಸರಿನಲ್ಲಿ ದೀರ್ಘಾವಧಿ ಠೇವಣಿಯಾಗಿ ಇಡಬೇಕು. ಜೊತೆಗೆ ಭವಿಷ್ಯದ ಮೂಗು ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆ, ಕಾಸ್ಮೆಟಿಕ್ ಚಿಕಿತ್ಸೆ ಹಾಗೂ ಅಗತ್ಯ ಚಿಕಿತ್ಸಾ ವೆಚ್ಚವನ್ನೂ ಆಸ್ಪತ್ರೆಯೇ ಭರಿಸಬೇಕು. 30 ದಿನಗಳೊಳಗೆ ಪರಿಹಾರ ಪಾವತಿಸಿ, 45 ದಿನಗಳಲ್ಲಿ ಅನುಷ್ಠಾನ ವರದಿ ಸಲ್ಲಿಸಬೇಕು ಎಂದು ಆಯೋಗ ಸೂಚಿಸಿತು.
ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಅಡ್ವೊಕೇಟ್ ವರ್ಷಿತಾ ಎಸ್. ಗೌಡ, ಗ್ರಾಹಕ ಆಯೋಗದ ಆದೇಶದಿಂದ ಬಹಳ ಸಂತಸವಾಗಿದೆ. ಈ ಪ್ರಕರಣ ಕೇವಲ ಪರಿಹಾರ ಮೊತ್ತಕ್ಕೆ ಸಂಬಂಧಿಸಿದ್ದಲ್ಲ; ವೈದ್ಯಕೀಯ ನಿರ್ಲಕ್ಷ್ಯದಿಂದ ತೀವ್ರ ಹಾಗೂ ಶಾಶ್ವತ ಗಾಯಗಳಿಗೆ ಒಳಗಾದ ನವಜಾತ ಶಿಶುವಿಗೆ ನ್ಯಾಯ ದೊರಕಿಸಿಕೊಡುವ ಹೋರಾಟವಾಗಿತ್ತು ಎಂದು ಬಣ್ಣಿಸಿದರು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
