ವೇಶ್ಯಾವಾಟಿಕೆ ಕೇಂದ್ರದಲ್ಲಿ ಸಿಕ್ಕಿಬಿದ್ದ ಗ್ರಾಹಕರ ವಿರುದ್ಧ ಕ್ರಮ ಜರುಗಿಸಬಹುದೇ..? ಹೈಕೋರ್ಟ್ ಕೊಟ್ಟ ತೀರ್ಪಿದು
ಬೆಂಗಳೂರು: ವೇಶ್ಯಾವಾಟಿಕೆ ಕೇಂದ್ರದ ಮೇಲೆ ದಾಳಿ ನಡೆಸಿದ ವೇಳೇ, ಅಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡು ಸಿಕ್ಕಿ ಬಿದ್ದ ಗ್ರಾಹಕನ ಮೇಲೆ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ. ಹೀಗಾಗಿ ಅರ್ಜಿದಾರರ ವಿರುದ್ಧದ ಪ್ರಕರಣ ಊರ್ಜಿತವಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಕಟಿಸಿದೆ.
“ಬಾಬು ಎಸ್ ವಿರುದ್ಧ ಕರ್ನಾಟಕ ರಾಜ್ಯ” ಪ್ರಕರಣದಲ್ಲಿ ಅರ್ಜಿದಾರರು ತಮ್ಮ ವಿರುದ್ಧ ಪೊಲೀಸರು ದಾಖಲಿಸಿದ್ದ ಎಫ್ ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಪೊಲೀಸರು ಶೋಧ ಕಾರ್ಯ ನಡೆಸಿದಾಗ ಅರ್ಜಿದಾರರು ವೇಶ್ಯಾಗೃಹದಲ್ಲಿ ಇದ್ದರು ಎಂಬ ಬಗ್ಗೆ ಯಾವುದೇ ವಿವಾದವಿಲ್ಲ. ಆದರೆ, ಅವರು ಗ್ರಾಹಕರು ಎಂಬ ಕಾರಣಕ್ಕೆ ಅವರನ್ನು ಕ್ರಿಮಿನಲ್ ಮೊಕದ್ದಮೆಯಲ್ಲಿ ಸೇರ್ಪಡೆ ಮಾಡಲಾಗದು. ಪೊಲೀಸರು ದಾಖಲಿಸಿರುವ ಫಿರ್ಯಾದಿನಲ್ಲಿ ಮಾನವ ಕಳ್ಳಸಾಗಣೆ ಕಾಯ್ದೆಯ ಸೆಕ್ಷನ್ 3ರ ಪ್ರಕಾರ ವೇಶ್ಯಾಗೃಹವನ್ನು ನಡೆಸುವುದಕ್ಕೆ ಅಥವಾ ಜಾಗವನ್ನು ವೇಶ್ಯಾಗೃಹಕ್ಕೆ ಬಳಕೆ ಮಾಡಲು ಅನುಮತಿ ನೀಡಿರುವುದಕ್ಕೆ ಶಿಕ್ಷೆ ವಿಧಿಸಬಹುದು. ಎಂದು ಅಭಿಪ್ರಾಯಿಸಿದೆ.
ಸೆಕ್ಷನ್ 4ರ ಅಡಿಯಲ್ಲಿ ವೇಶ್ಯಾವಾಟಿಕೆಯಿಂದ ಜೀವನ ಸಾಗಿಸುವವರಿಗೆ ಶಿಕ್ಷೆ ನೀಡುತ್ತದೆ. ಸೆಕ್ಷನ್ 5ರ ಪ್ರಕಾರ, ವೇಶ್ಯಾವಾಟಿಕೆಗಾಗಿ ವ್ಯಕ್ತಿಗಳನ್ನು ಪೂರೈಕೆ ಮಾಡುವುದು, ಪ್ರಚೋದನೆ ನೀಡುವುದಕ್ಕೆ ಶಿಕ್ಷೆ ವಿಧಿಸಬಹುದು. ಸೆಕ್ಷನ್ 6ರಂತೆ ವೇಶ್ಯಾವಾಟಿಕೆ ನಡೆಸುತ್ತಿರುವ ಸ್ಥಳದಲ್ಲಿ ಯಾವುದೇ ವ್ಯಕ್ತಿಯನ್ನು ಬಂಧಿಸಿಟ್ಟರೆ ಶಿಕ್ಷೆ ನೀಡಬಹುದು ಎಂದು ಕಾನೂನು ಹೇಳುತ್ತದೆ.
ಆದರೆ, ಅರ್ಜಿದಾರರು ಯಾವ ಅಪರಾಧದಲ್ಲಿ ಭಾಗಿಯಾಗಿದ್ದರು ಎಂಬುದನ್ನು ದೂರಿನಲ್ಲಿ ಸ್ಪಷ್ಟಪಡಿಸಲಾಗಿಲ್ಲ. ಹೀಗಾಗಿ, ಅರ್ಜಿದಾರರು ವಿರುದ್ಧದ ಪ್ರಕರಣ ಊರ್ಜಿತವಲ್ಲ ಎಂದು ನ್ಯಾಯಪೀಠ ತೀರ್ಪು ನೀಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
