23/04/2026

Law Guide Kannada

Online Guide

ಬದುಕಿದ್ದ ಮಹಿಳೆಯನ್ನೇ ಸತ್ತಿದ್ದಾರೆಂದು ನಕಲಿ ದಾಖಲೆ ಸೃಷ್ಠಿ: ಸ್ಥಿರಾಸ್ತಿ ಅಕ್ರಮ ವರ್ಗಾವಣೆ ವಂಚನೆ ಜಾಲ ಭೇದಿಸಿದ ಪೊಲೀಸರು

ಮಂಗಳೂರು: ಬದುಕಿದ್ದ ಮಹಿಳೆಯನ್ನೇ ಸತ್ತಿದ್ದಾರೆಂದು ನಕಲಿ ದಾಖಲೆ ಸೃಷ್ಠಿಸಿ ಮಹಿಳೆಯ ಹೆಸರಿನಲ್ಲಿದ್ದ ಸ್ಥಿರಾಸ್ತಿಯನ್ನ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದ ವಂಚನೆ ಜಾಲವನ್ನ ಪೊಲೀಸರು ಭೇದಿಸಿದ್ದಾರೆ.

ಮಂಗಳೂರಿನ ಬೊಂದೆಲ್ ನಿವಾಸಿ ಸುನಿಲ್ ಜೋಸೆಫ್ ಡಿಸೋಜಾ ಎಂಬುವವರೇ ಈ ರೀತಿ ವಂಚನೆ ಮಾಡಿರುವ ಆರೋಪಿ. ಸುರತ್ಕಲ್ ಹೋಬಳಿ ಕಾಟಿಪಳ್ಳ ಗ್ರಾಮದಲ್ಲಿದ ಸ್ಥಿರಾಸ್ತಿಯನ್ನು ವಂಚಕರು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದ ಪ್ರಕರಣ ಇದಾಗಿದೆ. ಹೌದು ಸ್ಥಿರಾಸ್ತಿಯ ಮಾಲೀಕರು ಮೃತಪಟ್ಟಿದ್ದಾರೆ ಎಂದು ಹಲವು ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದ ವಂಚಕರು ಅಕ್ರಮವಾಗಿ ಸ್ಥಿರಾಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದರು.

ಈ ಬಗ್ಗೆ ದಾಖಲಾದ ದೂರಿನ ಆಧಾರದಲ್ಲಿ ಸುರತ್ಕಲ್ ಪೊಲೀಸರು ತನಿಖೆ ನಡೆಸಿದ್ದು ಆಸ್ತಿ ವರ್ಗಾವಣೆಗೆ ಸಂಬಂಧಿಸಿದಂತೆ ವಂಚಕರು ಹಲವು ಕಚೇರಿಗಳ ನಕಲಿ ಸೀಲ್ ಗಳ ಸೃಷ್ಟಿಸಿರುವುದು ಬಯಲಾಗಿದೆ.
ಈ ತನಿಖೆಯ ಆಧಾರದಲ್ಲಿ ಸ್ಥಿರಾಸ್ತಿ ವರ್ಗಾವಣೆಗೆ ಬಳಸಲಾದ ದಾಖಲೆಗಳು, ಅಧಿಕಾರಿಗಳ ಸಹಿ ಮತ್ತು ಹಲವು ಸರ್ಕಾರಿ ಕಚೇರಿಗಳ ಮೊಹರುಗಳು (ಸೀಲ್) ನಕಲಿ ಎಂದು ದೃಢಪಟ್ಟಿತು. ಈ ಹಿನ್ನೆಲೆಯಲ್ಲಿ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ದಾವೆ ದಾಖಲಾಗಿದ್ದು, ವಿಚಾರಣೆ ಬಳಿಕ ಸ್ಥಿರಾಸ್ತಿಯನ್ನು ನೈಜ ಮಾಲೀಕರಿಗೆ ಹಿಂತಿರುಗಿಸಿ ಆದೇಶ ಹೊರಡಿಸಿದೆ.

ಮಂಗಳೂರು ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ರಾಮಲಿಂಗಪ್ಪ ಅವರು ಈ ತೀರ್ಪು ನೀಡಿದ್ದು ನಕಲಿ ದಾಖಲೆ ಸೃಷ್ಟಿಸಿ ಉಪ ನೋಂದಾಣಧಿಕಾರಿಯವರ ಕಚೇರಿಯಲ್ಲಿ ನೋಂದಾಯಿಸಲ್ಪಟ್ಟ “ಸ್ಥಿರಾಸ್ತಿಯ ಖಂಡಿತ ಕ್ರಯಪತ್ರ’ವನ್ನು ಅಸಿಂಧು ಎಂದು ಘೋಷಿಸಿದ್ದಾರೆ.

ಮರಣ ಪ್ರಮಾಣ ಪತ್ರ ಮತ್ತು ಸ್ಥಿರಾಸ್ತಿ ವರ್ಗಾವಣೆಗೆ ಸೃಷ್ಟಿಸಲಾದ ದಾಖಲೆಗಳಿಗೆ ನಕಲಿ ಸಹಿ-ಮೊಹರು ಬಳಕೆಯಾಗಿದ್ದು ಅವುಗಳು ಈ ಕೆಳಕಂಡಂತಿದೆ.

ಶಿವಮೊಗದ ನೋಟರಿ ವಕೀಲರ ಮೊಹರು ಸಹಿತ ಸಹಿ, ಶಿವಮೊಗ್ಗ, ಉಪಖಜಾನೆ ಅಧಿಕಾರಿಯ ಮೊಹರು ಸಹಿತ ಸಹಿ, ಮಂಗಳೂರು ಮಹಾನಗರ ಪಾಲಿಕೆಯ ಮೊಹರು ಸಹಿತ ಸಹಿ, ಸುರತ್ತಲ್ ವಲಯ ಕಚೇರಿಯಲ್ಲಿ ಮರಣ ಪ್ರಮಾಣ ಪತ್ರ ಮಂಜೂರು ಮಾಡುವ ಅಧಿಕಾರಿಯ ಮೂಹರು ಸಹಿತ ಸಹಿ, ಮಂಗಳೂರಿನ ಇಬ್ಬರು ತಹಶೀಲ್ದಾರರ ಮೊಹರು ಸಹಿತ ಸಹಿ, ಮಂಗಳೂರಿನ ‘ಪದವು’ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯ ಮೊಹರು ಸಹಿತ ಸಹಿ ನಕಲಿ ಮಾಡಿದ್ದರು.

ಏನಿದು ಪ್ರಕರಣ…
ಗ್ರಾಮದಲ್ಲಿ1984ರ ಫೆಬ್ರವರಿ 27ರಂದು ಮಂಗಳೂರು ತಾಲೂಕು ಕಾಟಿಪಳ್ಳ 12:30 ಸೆಂಟ್ಸ್ ಜಾಗವನ್ನು ಸರೋಜಿನಿ ಆರ್ ಅಂಚನ್ ಅವರ ಪತಿ ರಾಘವೇಂದ್ರ ಅಂಚನ್ ಮಂಗಳೂರು ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕ್ರಯ ಪತ್ರ ನೋಂದಣಿ ಮೂಲಕ ಲಕ್ಷ್ಮೀಬಾಯಿ ಮತ್ತು ಇತರರಿಂದ ಖರೀದಿಸಿದ್ದರು.

ಈ ಮಧ್ಯೆ 1992ರಲ್ಲಿ ಪತಿ ರಾಘವೇಂದ್ರ ಅಂಚನ್ ನಿಧನರಾಗಿದ್ದು ಆ ಬಳಿಕ, ಸ್ಥಿರಾಸ್ತಿಗೆ ಪತ್ನಿ ಸರೋಜಿನಿ ಆರ್ ಅಂಚನ್ ಮಕ್ಕಳಾದ ನವೀನ್ ಚಂದ್ರ, ವಾಣಿ ಪುರುಷೋತ್ತಮ್ ವಾರಿಸುದಾರಾದರು. ಸರೋಜಿನಿ ಆರ್ ಅಂಚನ್ ಹೆಸರಿಗೆ ಆಸ್ತಿ ಖಾತೆ ವರ್ಗಾಯಿಸಿದ್ದು. ಸರೋಜಿನಿ ಅವರು ತಮ್ಮ ಹೆಸರಿನಲ್ಲಿ ತೆರಿಗೆ ಪಾವತಿಸುತ್ತಿದ್ದರು. ವಯಸ್ಸಿನ ಕಾರಣಕ್ಕೆ, ಸರೋಜಿನಿ ಅವರು ತಮ್ಮ ನಿವೇಶನಕ್ಕೆ ಭೇಟಿ ನೀಡುತ್ತಿರಲಿಲ್ಲ. ಸರೋಜಿನಿ ಅವರ ಮಗಳು ಮತ್ತು ಅಳಿಯ ವರ್ಷಕ್ಕೆ, ಎರಡು ಬಾರಿ ಜಮೀನಿನಲ್ಲಿದ್ದ ತೆಂಗಿನ ಮರಗಳಿಂದ ಕಾಯಿ ಕೀಳಿಸುತ್ತಿದ್ದರು. ಈ ವಿಷಯ ಮಂಗಳೂರಿನ ಬೊಂದೆಲ್ ನಿವಾಸಿ ಸುನಿಲ್ ಜೋಸೆಫ್ ಡಿಸೋಜಾ ಎಂಬವರ ಗಮನಕ್ಕೆ ಬಂದಿದ್ದು, ಅವರು ಸ್ಥಿರಾಸ್ತಿಯನ್ನು ವಂಚನೆಯಿಂದ ಕಬಳಿಸಲು ಸಂಚು ರೂಪಿಸಿದ ಅವರು, 2005ರ ಅಕ್ಟೋಬರ್ 19ರಂದು ಸರೋಜಿನಿ ಆರ್ ಅಂಚನ್ ನಿಧನರಾಗಿದ್ದಾರೆ ಎಂದು ಕಂದಾಯ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದರು. ಮೃತ ಪ್ರಮಾಣ ಸಹಿತ ಅದಕ್ಕೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರೋಜಿನಿ ಆರ್ ಅಂಚನ್ ಮತ್ತು ಅವರ ಪತಿ ಕೆ ರಾಘವೇಂದ ಅಂಚಾರ್ ಅವರ ಏಕೈಕ ವಾರಿಸುದಾರ ತಾನು ಎಂದು ನಂಬಿಸಿ ಸುನಿಲ್ ಆರ್ ಅಂಚನ್ ಹೆಸರಲ್ಲಿ ಸ್ಥಿರಾಸ್ತಿಯನ್ನು ತನ್ನ ಹೆಸರಿಗೆ ಬದಲಾಯಿಸಿಕೊಂಡಿದ್ದರು.

ಇದಾದ ಬಳಿಕ 2015ರ ಡಿಸೆಂಬರ್ 22ರಂದು ಸುನಿಲ್ ಆರ್ ಅಂಚನ್ ಹೆಸರಿನಲ್ಲಿದ್ದ ಸ್ಥಿರಾಸ್ತಿಯನ್ನು ಮಂಗಳೂರು ಕುತ್ತಾರುಪದವು ನಿವಾಸಿ ನಿತಿನ್ ಕೊಟ್ಟಾರಿ ಎಂಬವರಿಗೆ ಮಂಗಳೂರು ನೋಂದಣಾಧಿಕಾರಿ ಕಚೇರಿಯಲ್ಲಿ 12.40 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿ ಕ್ರಯಪತ್ರವನ್ನು ನೋಂದಣಿ ಮಾಡಿಸಲಾಗಿತ್ತು. 2016 ರಂದು ನಿತಿನ್ ಕೊಟ್ನಾರಿ ಮಂಗಳೂರಿನ ಶಿವನಗರದ ನಿವಾಸಿ ಸುಜಾತಾ ಚಂದ್ರಕಾಂತ ಪಾಟೀಲ್ ಅವರಿಗೆ 16. 18 ಲಕ್ಷ ರೂಪಾಯಿಗಳಿಗೆ ಈ ಆಸ್ತಿಯನ್ನು ಕ್ರಯ ಪತ್ರದ ಮೂಲಕ ಮಾರಾಟ ಮಾಡಿದರು.

2017ರಲ್ಲಿ ಸುಜಾತ ಚಂದ್ರಕಾಂತ್ ಪಾಟೀಲ್ ಅವರು ಮಂಗಳೂರಿನ ಕೊಡಿಯಾಲ್ ಬೈಲ್ ನಿವಾಸಿ ಮರಿಯಾ ರೆಬೆಲ್ಲೊ ಅವರಿಗೆ 18 ಲಕ್ಷ ರೂಪಾಯಿಗಳಿಗೆ ನೋಂದಾಯಿತ ಕ್ರಯ ಪತ್ರದ ಮೂಲಕ ಆಸ್ತಿ ಮಾರಾಟ ಮಾಡಿದರು. 2018ರಲ್ಲಿ ತನ್ನ ಸ್ಥಿರಾಸ್ತಿಯಲ್ಲಿ ಇರುವ ಮರಗಳನ್ನು ಕಡಿಯುತ್ತಿದ್ದಾರೆ ಎನ್ನುವ ಸುದ್ದಿ ತಿಳಿದ ಸರೋಜಿನಿ ಆರ್ ಅಂಚನ್ ಸ್ಥಳಕ್ಕೆ ಬಂದು ವಿಚಾರಿಸಿದಾಗ ಸವಿತಾ ಮರಿಯಾ ರೆಬೆಲ್ಲೊ ಸ್ಥಿರಾಸ್ತಿಯನ್ನು ನೋಂದಾಯಿತ ಕ್ರಯ ಪತ್ರದ ಮೂಲಕ ಖರೀದಿ ಮಾಡಿರುವ ವಿಷಯವನ್ನು ತಿಳಿಸಿದರು.

ವಂಚನೆಗೊಳಗಾದ ಬಗ್ಗೆ ಮಾಹಿತಿ ಗೊತ್ತಾದ ಬೆನ್ನಲ್ಲೆ ಸರೋಜಿನಿ ಸುರತ್ಕಲ್ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದು, ಈ ಬಗ್ಗೆ ಸುದೀರ್ಘ ವಿಚಾರಣೆ ನಡೆದು ಪ್ರಕರಣ ಬಯಲಿಗೆ ಬಂದಿದೆ. ತನಿಖೆಯಲ್ಲಿ ಆಸ್ತಿಯನ್ನು ವರ್ಗಾವಣೆ ಮಾಡಲು ಶಿವಮೊಗದ ನೋಟರಿ ವಕೀಲರ ಸೀಲು ಮತ್ತು ಸಹಿ ಶಿವಮೊಗ, ಉಪ ಖಜಾನೆ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ನಕಲಿ ಸೀಲ್ ಬಳಕೆ, ಸುರತ್ನಲ್ ವಲಯ ಕಚೇರಿಯಲ್ಲಿ ಮರಣ ಪ್ರಮಾಣ ಪತ್ರ ಮಂಜೂರು ಮಾಡುವ ಅಧಿಕಾರಿಯ ನಕಲಿ ಸೀಲು, ಮಂಗಳೂರಿನ ಇಬ್ಬರು ತಹಶೀಲ್ದಾರರ ನಕಲಿ ಸೀಲು ಪದವು ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯ ನಕಲಿ ಸೀಲು ತಯಾರಿಸಿ ಈ ಸ್ಥಿರಾಸ್ತಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು ಎಂಬ ಮಾಹಿತಿ ಬಯಲಾಯಿತು.

ಈ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಕ ದಂಡಾಧಿಕಾರಿಗಳ ನ್ಯಾಯಾಲಯ 2018ರಲ್ಲಿ ಸ್ಥಿರಾಸ್ತಿವಾರಿ ಸುಧಾರಣೆ ಎಂದು ಹೇಳಿಕೊಂಡ ಸುನಿಲ್ ಜೋಸೆಫ್ ಡಿಸೋಜಾ ಹಾಗೂ ತದ ನಂತರ ಆಸ್ತಿ ಖರೀದಿ ಮಾಡಿದ ಮೂವರ ವಿರುದ್ಧ ದಾವೆ ದಾಖಲಿಸಿಕೊಂಡಿದ್ದರು. ಪೊಲೀಸ್ ತನಿಖಾ ವರದಿಯ ಆಧಾರದಲ್ಲಿ ನ್ಯಾಯಾಲಯವು, “ನಕಲಿ ದಾಖಲೆಗಳನ್ನು ಸೃಷ್ಟಿಸಿ ಅದರ ಆಧಾರದಲ್ಲಿ ಮೂಲಕ ನೋಂದಾಯಿಸಲಾದ ಕ್ರಯ ಪತ್ರಗಳನ್ನು ಅಮಾನ್ಯ” ಎಂದು ಘೋಷಣೆ ಮಾಡಿತು. ಸ್ಥಿರಾಸ್ತಿ ಹಕ್ಕನ್ನು ಮರಳಿ ಸರೋಜಿನಿ ಆರ್ ಅಂಚನ್ ಅವರಿಗೆ ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.