ನ್ಯಾ. ಯಶವಂತ್ ವರ್ಮಾ ವಿರುದ್ಧ ಮಹಾಭಿಯೋಗ: ಸ್ಪೀಕರ್ ಗೆ ಸಹಿ ಮಾಡಿದ ಪತ್ರ ಸಲ್ಲಿಸಿದ 100ಕ್ಕೂ ಹೆಚ್ಚು ಸಂಸದರು.
ನವದೆಹಲಿ: ಮನೆಗೆ ಬೆಂಕಿ ಬಿದ್ದ ವೇಳೆ ಸುಟ್ಟ ನೋಟುಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧ ಮಹಾಭಿಯೋಗ ಪ್ರಕ್ರಿಯೆ ಆರಂಭವಾಗಿದ್ದು, ವಿರೋಧ ಪಕ್ಷಗಳ ನಾಯಕರು ಸಹಿ ಮಾಡಿದ ಪತ್ರವನ್ನು ಲೋಕಸಭೆ ಸ್ಪೀಕರ್ ಓಬಿರ್ಲಾ ಅವರಿಗೆ ಸಲ್ಲಿಸಲಿದ್ದಾರೆ
100ಕ್ಕೂ ಹೆಚ್ಚು ಸಂಸತ್ ಸದಸ್ಯರು, ಸಂಸತ್ತಿನಲ್ಲಿ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧ ಮಂಡಿಸಲಾಗುವ ಮಹಾಭಿಯೋಗ ನಿರ್ಣಯದ ಕರಡಿಗೆ ಸಹಿ ಹಾಕಿದ್ದಾರೆ. ನ್ಯಾ. ಯಶವಂತ್ ವರ್ಮಾ ವಿರುದ್ಧ ಮಹಾಭಿಯೋಗ ಪ್ರಸ್ತಾವನೆಯ ಕರಡಿಗೆ 145 ಮಂದಿ ಲೋಕಸಭಾ ಸದಸ್ಯರು ಸಹಿ ಮಾಡಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಿದ್ದಾರೆ.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸುಪ್ರಿಯಾ ಸುಳೆ, ಪಿಪಿ ಚೌಧರಿ, ಅನುರಾಗ್ ಠಾಕೂರ್, ರವಿಶಂಕರ್ ಪ್ರಸಾದ್, ಟಿಆರ್ ಬಾಲು, ರಾಜೀವ್ ಪ್ರತಾಪ್ ರೂಡಿ ಸೇರಿದಂತೆ ಹಲವು ಪ್ರಮುಖ ನಾಯಕರು ಸಹಿ ಹಾಕಿದ್ದಾರೆ ಎನ್ನಲಾಗಿದೆ
ನಿಯಮಗಳ ಪ್ರಕಾರ, ಲೋಕಸಭೆಯಲ್ಲಿ ಕನಿಷ್ಠ 100 ಮತ್ತು ರಾಜ್ಯಸಭೆಯಲ್ಲಿ 50 ಸಂಸದರು ಸಹಿ ಮಾಡಿದರೆ ಮಾತ್ರ ನ್ಯಾಯಮೂರ್ತಿಗೆ ವಿರುದ್ಧ ಮಹಾಭಿಯೋಗ ಪ್ರಸ್ತಾವನೆ ಮಂಡಿಸಬಹುದು. ಭಾರತ ಸಂವಿಧಾನದ 124, 217 ಮತ್ತು 218ನೇ ವಿಧಿಗಳ ಪ್ರಕಾರ, ಮಹಾಭಿಯೋಗ ಪ್ರಕ್ರಿಯೆ ಆರಂಭಿಸಲು ಕ್ರಮಕೈಗೊಳ್ಳಲಾಗಿದೆ. ಪ್ರಸ್ತಾವನೆಗೆ ಕಾಂಗ್ರೆಸ್, ಡಿಎಂಕೆ, ತೃಣಮೂಲ, ಜೆಡಿಎಸ್, ಜೆಎಸಿಪಿ, ಅಸ್ಸಾಂ ಗಣ ಪರಿಷತ್, ಶಿವಸೇನೆ ಸೇರಿದಂತೆ ಹಲವಾರು ಪಕ್ಷಗಳ ಸಂಸದರು ಸಹಿ ಮಾಡಿದ್ದಾರೆ. ಬಿಜೆಪಿ ಮಾತ್ರ ಈ ಪ್ರಕ್ರಿಯೆಯಿಂದ ದೂರವಿದೆ.
ಪ್ರಕರಣದ ವಿವರ
ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ದೆಹಲಿ ನಿವಾಸದಲ್ಲಿ ಮಾರ್ಚ್ 15ರಂದು ಅಗ್ನಿ ಅವಘಡ ಸಂಭವಿಸಿ, ಅರ್ಧ ಸುಟ್ಟ ನೋಟುಗಳು ಪತ್ತೆಯಾಗಿದ್ದವು. ಈ ಬೆನ್ನಲ್ಲೆ ನ್ಯಾಯಮೂರ್ತಿಗಳ ವಿರುದ್ಧ ತನಿಖೆಗೆ ಆಗ್ರಹಿಸಿ ಕೂಗು ಎದ್ದಿತ್ತು. ಬಳಿಕ ಅವರನ್ನು ದೆಹಲಿ ಹೈಕೋರ್ಟ್ನಿಂದ ಅಲಹಾಬಾದ್ ಹೈಕೋರ್ಟ್ಗೆ ವರ್ಗಾವಣೆ ಮಾಡಲಾಗಿತ್ತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
