07/03/2026

Law Guide Kannada

Online Guide

ಸಿವಿಲ್ ವ್ಯಾಜ್ಯ ಕ್ರಿಮಿನಲ್ ಪ್ರಕರಣವಾಗಿ ಪರಿಗಣಿಸಲು ಅನುಮತಿ: ಹೈಕೋರ್ಟ್ ಗೆ ಸುಪ್ರೀಂಕೋರ್ಟ್ ತೀವ್ರ ತರಾಟೆ

ನವದೆಹಲಿ: ಸಿವಿಲ್ ವ್ಯಾಜ್ಯವನ್ನು ಕ್ರಿಮಿನಲ್ ಪ್ರಕರಣವನ್ನಾಗಿ ಪರಿಗಣಿಸಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್ ಗೆ ತೀವ್ರ ತರಾಟೆ ತೆಗೆದುಕೊಂಡ ಸುಪ್ರೀಂಕೋರ್ಟ್ ಸಿವಿಲ್ ದಾವೆಗಳನ್ನು ಇತ್ಯರ್ಥಗೊಳಿಸಲು ಕ್ರಿಮಿನಲ್ ಕಾನೂನನ್ನು ಬಳಸುವಂತಿಲ್ಲ ಎಂದು ಚಾಟಿ ಬೀಸಿದೆ.

ಸಿವಿಲ್ ವ್ಯಾಜ್ಯದಲ್ಲಿ ವಸೂಲಾತಿಯು ಸಮಯವನ್ನು ತೆಗೆದುಕೊಳ್ಳಬಹುದು ಎಂಬ ಏಕೈಕ ಕಾರಣಕ್ಕಾಗಿ ಚೆಕ್ ಬೌನ್ಸ್ನಂತಹ ಸಂಪೂರ್ಣವಾಗಿ ಸಿವಿಲ್ ಸ್ವರೂಪದ ವಿಷಯದಲ್ಲಿ ಕ್ರಿಮಿನಲ್ ವಿಚಾರಣೆಗಳನ್ನು ಉಚ್ಚ ನ್ಯಾಯಾಲಯವು ಸಮರ್ಥಿಸಿಕೊಂಡಿದ್ದ ಅಲಹಾಬಾದ್ ಹೈಕೋರ್ಟ್ ವಿರುದ್ದ ಗರಂ ಆದ ಸುಪ್ರೀಂಕೋರ್ಟ್, ಇದು ತಾನು ಇತ್ತೀಚಿಗೆ ನೋಡಿರುವ ಅತ್ಯಂತ ಕೆಟ್ಟ ಮತ್ತು ತಪ್ಪು’ ತೀರ್ಪುಗಳಲ್ಲಿ ಒಂದಾಗಿದೆ. ‘ಇದು ಆಕ್ಷೇಪಾರ್ಹ ಆದೇಶದ ಪ್ಯಾರಾಗ್ರಾಫ್ 12ರಲ್ಲಿ ಒಳಗೊಂಡಿರುವ ಅವಲೋಕನಗಳನ್ನು ಓದಲು ಎಲ್ಲರಿಗೂ ಅತ್ಯಂತ ದುಃಖಕರ ದಿನವಾಗಿದೆ’ ಎಂದು ಕಟುಟೀಕೆ ವ್ಯಕ್ತಪಡಿಸಿದೆ.

ಸಿವಿಲ್ ವ್ಯಾಜ್ಯದಲ್ಲಿ ಬಾಕಿ ಹಣದ ವಸೂಲಾತಿಯು ಗಣನೀಯ ಸಮಯವನ್ನು ತೆಗೆದುಕೊಳ್ಳಬಹುದು ಎಂಬ ಕಾರಣಕ್ಕೆ ಸಿವಿಲ್ ವಿವಾದದಲ್ಲಿ ದೂರುದಾರರು ಹೂಡಿರುವ ಕ್ರಿಮಿನಲ್ ಮೊಕದ್ದಮೆಯನ್ನು ಉಚ್ಚ ನ್ಯಾಯಾಲಯವು ಸಮರ್ಥನೀಯ ಎಂದು ಹೇಳಿದೆ. ಈ ತಾರ್ಕಿಕತೆಯನ್ನು ಪ್ರಕ್ರಿಯೆಯ ಸ್ಪಷ್ಟ ದುರುಪಯೋಗ ಎಂದು ಸುಪ್ರೀ ಕೋರ್ಟ್ ಹೇಳಿದೆ.

ಸಿವಿಲ್ ದಾವೆಗಳನ್ನು ಇತ್ಯರ್ಥಗೊಳಿಸಲು ಕ್ರಿಮಿನಲ್ ಕಾನೂನನ್ನು ಬಳಸುವಂತಿಲ್ಲ ಎಂಬ ಸುಸ್ಥಾಪಿತ ಕಾನೂನು ತತ್ವವನ್ನು ಉಚ್ಚ ನ್ಯಾಯಾಲಯವು ಅರ್ಥ ಮಾಡಿಕೊಳ್ಳಬೇಕು. ವಂಚನೆ ಮತ್ತು ಕ್ರಿಮಿನಲ್ ವಿಶ್ವಾಸ ದ್ರೋಹದ ಆರೋಪವನ್ನು ರೂಪಿಸಲು ಎರಡು ಅಪರಾಧಗಳ ನಡುವಿನ ಸೂಕ್ಷ್ಮ ವ್ಯತ್ಯಾಸ ಮತ್ತು ಅಗತ್ಯ ಅಂಶಗಳನ್ನು ಕನಿಷ್ಠ ಉಚ್ಚ ನ್ಯಾಯಾಲಯವು ಅರ್ಥ ಮಾಡಿಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು ಸುಪ್ರೀಂಕೋರ್ಟ್ ನ್ಯಾಯಪೀಠ ಚಾಟಿ ಬೀಸಿತು.
ಹೈಕೋರ್ಟ್ ನ್ಯಾಯಾಧೀಶರು ಪ್ರಕರಣವನ್ನು ನಿರ್ವಹಿಸಿದ ರೀತಿಗೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ ,ಇಂತಹ ನ್ಯಾಯಾಂಗ ಅತಿಕ್ರಮಣವು ಪುನರಾವರ್ತನೆಯಾಗದಂತೆ ನೋಡಿಕೊಳ್ಳಿ. ಸಂಬಂಧಿತ ನ್ಯಾಯಾಧೀಶರನ್ನು ಕ್ರಿಮಿನಲ್ ನ್ಯಾಯ ನಿರ್ಣಯದಿಂದ ತಕ್ಷಣವೇ ಹಿಂದೆಗೆದುಕೊಳ್ಳಿ. ಅವರು ಹುದ್ದೆಯಿಂದ ಕೆಳಗಿಳಿಯುವವರೆಗೆ ಯಾವುದೇ ಕ್ರಿಮಿನಲ್ ವಿಷಯಗಳನ್ನು ಅವರಿಗೆ ನಿಯೋಜಿಸಬಾರದು ಎಂದು ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ನಿರ್ದೇಶನ ನೀಡಿತು.

ಹೆಚ್ಚುವರಿಯಾಗಿ ಸಂಬಂಧಿಸಿದ ನ್ಯಾಯಾಧೀಶರನ್ನು ಅನುಭವಿ ಹಿರಿಯ ನ್ಯಾಯಾಧೀಶರೊಂದಿಗೆ ವಿಭಾಗೀಯ ಪೀಠದಲ್ಲಿ ಕೂಡಿಸುವಂತೆ ಮತ್ತು ಭವಿಷ್ಯದಲ್ಲಿ ಏಕನ್ಯಾಯಾಧೀಶರಾಗಿ ಅವರಿಗೆ ಯಾವುದೇ ಕ್ರಿಮಿನಲ್ ಪ್ರಕರಣವನ್ನು ನಿಯೋಜಿಸಬಾರದು ಎಂದು ನ್ಯಾಯಪೀಠ ಆದೇಶಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.