07/03/2026

Law Guide Kannada

Online Guide

‘ED’ ವಂಚಕನಂತೆ ವರ್ತಿಸಬಾರದು: ಅಧಿಕಾರ ದುರುಪಯೋಗ ಬಗ್ಗೆ ಸುಪ್ರೀಂ ಆಕ್ರೋಶ, ಟೀಕಾಪ್ರಹಾರ

ನವದೆಹಲಿ: ಅಧಿಕಾರ ದುರುಪಯೋಗ ಕುರಿತಂತೆ ಜಾರಿ ನಿರ್ದೇಶನಾಲಯದ ವಿರುದ್ದ ಸುಪ್ರೀಂಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿ ಟೀಕಾಪ್ರಹಾರ ನಡೆಸಿದೆ.

ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗದೇ ಇದ್ದರೂ ಜಾರಿ ನಿರ್ದೇಶನಾಲಯವು ವರ್ಷಗಟ್ಟಲೆ ವಿಚಾರಣೆ ಇಲ್ಲದೆ ಅವರಿಗೆ ಶಿಕ್ಷೆ ವಿಧಿಸುವಲ್ಲಿ ಯಶಸ್ವಿಯಾಗುತ್ತಿದೆ. ಇಡಿಯ ವರ್ಚಸ್ಸಿಗೆ ಆತಂಕ ಎದುರಾಗಿದ್ದು, ಈ ಸಂವಿಧಾನಿಕ ಸಂಸ್ಥೆ ಒಬ್ಬ ವಂಚಕನಂತೆ ವರ್ತಿಸಬಾರದು ಎಂದು ಸಂಸ್ಥೆಯ ಅಧಿಕಾರ ದುರುಪಯೋಗದ ಬಗ್ಗೆ ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ಚಾಟಿ ಬೀಸಿತು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ವಿನೋದ್ ಚಂದ್ರನ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ರೀತಿ ಆಕ್ರೋಶ ವ್ಯಕ್ತಪಡಿಸಿದೆ.

ಹಾಗೆಯೇ ಇನ್ನೊಂದು ಪ್ರತ್ಯೇಕ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಉಜ್ವಲ್ ಭುಯಾನ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ನ್ಯಾಯಪೀಠವೂ ಸಹ ಇ.ಡಿ. ವಿರುದ್ಧ ಕಿಡಿಕಾರಿದೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿ ದಾಖಲಾಗುವ ಪ್ರಕರಣಗಳಲ್ಲಿ ಆರೋಪಿಗಳ ಬಂಧನ, ಶೋಧ ಹಾಗೂ ವಶಕ್ಕೆ ಪಡೆಯುವ ಇಡಿ ಅಧಿಕಾರವನ್ನು ಎತ್ತಿಹಿಡಿದ್ದ ಸುಪ್ರೀಂ ಕೋರ್ಟ್ 2022ರ ಜುಲೈ ತೀರ್ಪುನ್ನು ಪ್ರಶ್ನಿಸಿ, ಮೇಲ್ಮನವಿ ಸಲ್ಲಿಸಲಾಗಿತ್ತು. ಆರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಉಜ್ಜಲ್ ಭೂಯಾನ್ ಹಾಗೂ ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು ವಿಚಾರಣೆ ನಡೆಸಿದೆ. ಈ ವೇಳೆ, ‘ನೀವು ವಂಚಕನಂತೆ ವರ್ತಿಸಲು ಸಾಧ್ಯವಿಲ್ಲ’ ಎಂದು ಇಡಿಯನ್ನು ಪೀಠವು ತರಾಟೆಗೆ ತೆಗೆದುಕೊಂಡಿದೆ.

ವಿಜಯ್ ಮದನ್ ಲಾಲ್ ಚೌಧರಿ ವಿರುದ್ಧ ಭಾರತ ಒಕ್ಕೂಟ ಪ್ರಕರಣದ ವಿರುದ್ಧ ಮರು ಪರಿಶೀಲನಾ ಅರ್ಜಿಯನ್ನು ಆಲಿಸಿದ ನ್ಯಾಯಪೀಠ, ಇಡಿಯ ವರ್ಚಸ್ಸಿಗೆ ಆತಂಕ ಎದುರಾಗಿದೆ. ಸುಮಾರು 5000 ಪ್ರಕರಣಗಳಲ್ಲಿ ಶೇಕಡಾ 10ಕ್ಕಿಂತ ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ಆಗುತ್ತಿದೆ. ಇಡಿ ವಂಚಕನಂತೆ ವರ್ತಿಸಬಾರದು. ಅದು ಕಾನೂನು ಚೌಕಟ್ಟಿನ ಒಳಗೆ ಕಾರ್ಯ ಮಾಡಬೇಕು. ಕಾನೂನು ಜಾರಿ ಅಧಿಕಾರಿಗಳು ಮತ್ತು ಕಾನೂನು ಉಲ್ಲಂಘಿಸುವವರ ನಡುವೆ ವ್ಯತ್ಯಾಸವಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.