ವಿಚ್ಚೇದಿತ ಪತ್ನಿಆರ್ಥಿಕವಾಗಿ ಸಬಲ: ಜೀವನಾಂಶ ಒದಗಿಸಲು ಆದೇಶಿಸಲು ಹೈಕೋರ್ಟ್ ನಿರಾಕರಣೆ
ಅಲಹಬಾದ್: ತಮ್ಮನ್ನು ತಾವೇ ಪೋಷಿಸಿಕೊಳ್ಳುವಷ್ಟು ಆರ್ಥಿಕವಾಗಿ ಸಮರ್ಥರಾಗಿದ್ದಾರೆ ಎಂಬ ಕಾರಣ ನೀಡಿ ವಿಚ್ಚೇದಿತ ಪತ್ನಿಗೆ ಪತಿಯು ಜೀವನಾಂಶ ಒದಗಿಸುವುದಕ್ಕೆ ಅಲಹಬಾದ್ ಹೈಕೋರ್ಟ್ ನಿರಾಕರಿಸಿದೆ.
ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಬದಲಿಸಿದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಸೌರಭ್ ಲವಣ್ಯ ಅವರಿದ್ದ ನ್ಯಾಯಪೀಠವು, ಆರ್ಥಿಕ ಸಾಮರ್ಥ್ಯವು ಆಕೆಯ ಜೀವನ ನಿರ್ವಹಣೆಗೆ ಸಾಕಾಗಿದೆ. ಹೀಗಾಗಿ ಜೀವನಾಂಶ ಒದಗಿಸಲಾಗದು ಎಂದು ತೀರ್ಪು ನೀಡಿದೆ.
ಟಿಸಿಎಸ್ ಸಾಫ್ಟ್ವೇರ್ ಎಂಜಿನಿಯರ್ ಉದ್ಯೋಗದಲ್ಲಿ ಇರುವ ಅರ್ಜಿದಾರರು ಮಾಸಿಕ ರೂ. 73,000/-ವೇತನ ಪಡೆಯುತ್ತಿದ್ದಾರೆ ಮತ್ತು 80 ಲಕ್ಷ ರೂ. ಮೌಲ್ಯದ ಫ್ಲ್ಯಾಟ್ ಗೆ ಬಂಡವಾಡ ಹೂಡಿದ್ದಾರೆ ಎಂಬ ಅಂಶಗಳನ್ನು ಪರಿಗಣಿಸಿ ಮಹಿಳಾ ಸಾಫ್ಟ್ ವೇರ್ ಎಂಜಿನಿಯರ್ ಗೆ ಜೀವನಾಂಶ ನೀಡುವಂತೆ ಪತಿಗೆ ನಿರ್ದೇಶಿಸಲಾಗಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ನ್ಯಾಯಪೀಠ ರದ್ದು ಪಡಿಸಿದೆ.
ಪತ್ನಿಗೆ ಮಾಸಿಕ ರೂ. 15000/- ಜೀವನಾಂಶ ನೀಡಬೇಕೆಂಬ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ ನ್ಯಾಯಪೀಠ, ಅವರ ಮಗುವಿನ ಪಾಲನೆಗೆ ತಿಂಗಳಿಗೆ ರೂ. 25000/- ನೀಡಬೇಕು ಎಂದು ನೀಡಿದ್ದ ನಿರ್ದೇಶವನ್ನು ಎತ್ತಿಹಿಡಿದೆ.
ಪತ್ನಿ ಆದಾಯ ಗಳಿಸುತ್ತಿದ್ದರೆ ಅದು ಜೀವನಾಂಶ ಪಡೆಯಲು ಸಂಪೂರ್ಣ ಅಡ್ಡಿಯಾಗದು ಎಂದಿದ್ದರೂ ವೈವಾಹಿಕ ಜೀವನದ ಸಂದರ್ಭದಲ್ಲಿ ಇದ್ದ ಜೀವನ ಮಟ್ಟಕ್ಕೆ ಆ ಆದಾಯ ಸಾಕಾಗುತ್ತದೆಯೇ ಎಂಬ ಪ್ರಶ್ನೆ ಇದೆ. ಸದರಿ ಪರಿಸ್ಥಿತಿಯಲ್ಲಿ ಅರ್ಜಿದಾರರಿಗೆ ಸಾಕಷ್ಟು ಆದಾಯ ಇದೆ ಎಂಬುದು ಕಂಡುಬರುತ್ತದೆ. ಆಕೆಯ ಮಾಸಿಕ ಆದಾಯ ಮತ್ತು ಫ್ಲ್ಯಾಟ್ ಕೊಳ್ಳಲು ಹೊಂದಿರುವ ಆರ್ಥಿಕ ಸಾಮರ್ಥ್ಯವು ಆಕೆಯ ಜೀವನ ನಿರ್ವಹಣೆಗೆ ಸಾಕಾಗಿದೆ ಎಂದು ಮನಗಂಡು ನ್ಯಾಯಪೀಠ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಬದಲಿಸಿ ತೀರ್ಪು ಪ್ರಕಟಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
