23/04/2026

Law Guide Kannada

Online Guide

ಮಾನವೀಯ ಸಮಸ್ಯೆಗಳಿಗೆ ಪರಿಹಾರ: ‘ಬುಲ್ಡೋಜರ್ ತೀರ್ಪಿನ ಬಗ್ಗೆ ಶ್ಲಾಘಿಸಿದ CJI ಬಿ.ಆರ್.ಗವಾಯಿ

ನವದೆಹಲಿ: ಸುಪ್ರೀಂ ಕೋರ್ಟ್ ನೀಡಿದ ‘ಬುಲ್ಡೋಜರ್ ತೀರ್ಪು ಮಾನವೀಯ ಸಮಸ್ಯೆಗಳಿಗೆ ಪರಿಹಾರ ತಂದುಕೊಟ್ಟ ಹಿನ್ನೆಲೆಯಲ್ಲಿ ಈ ತೀರ್ಪು ಬಗ್ಗೆ ತಮಗೆ ಅಪಾರ ತೃಪ್ತಿ ನೀಡಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಸಂತಸ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ ವಕೀಲರ ಶೈಕ್ಷಣಿಕ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ ಬುಲ್ಡೋಜರ್ ತೀರ್ಪಿನ ಬಗ್ಗೆ ಶ್ಲಾಘಿಸಿದ ಸಿಜೆಐ ಗವಾಯಿ, “ಅಪರಾಧಿ ಅಥವಾ ಆರೋಪಿಯ ಕುಟುಂಬದ ಸದಸ್ಯ ಎನ್ನುವ ಕಾರಣಕ್ಕೆ ನಿರಪರಾಧಿಗಳಿಗೆ ಕಿರುಕುಳ ನೀಡುವ ಅನ್ಯಾಯವನ್ನು ತಡೆಯುವ ನಿಟ್ಟಿನಲ್ಲಿ ಈ ತೀರ್ಪು ನೀಡಲಾಯಿತು. ಈ ತೀರ್ಪು ಮಾನವೀಯ ಸಮಸ್ಯೆಗಳಿಗೆ ಪರಿಹಾರ ತಂದುಕೊಟ್ಟಿದೆ. ಆದ್ದರಿಂದ ಇದು ನಮಗಿಬ್ಬರಿಗೂ ಅಪಾರ ತೃಪ್ತಿಯನ್ನು ನೀಡಿದೆ. ಅದೇ ವೇಳೆ, ತೀರ್ಪಿನ ಶ್ಲಾಘನೀಯ ನಿರೂಪಣೆಗಾಗಿ ಸಮಾನ ಗೌರವ ನ್ಯಾಯಮೂರ್ತಿ ವಿಶ್ವನಾಥನ್ ಅವರಿಗೆ ಸಲ್ಲುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ನ್ಯಾಯಮೂರ್ತಿಯ ಅಧಿಕಾರಾವಧಿಯು ದೀರ್ಘವಾಗಿರುವುದಕ್ಕಿಂತ ಆ ವೇಳೆ ಮಾಡುವ ಕಾರ್ಯದ ಗುಣಮಟ್ಟವೇ ಮುಖ್ಯ. ಅಲ್ಪಾವಧಿ ಅಧಿಕಾರ ವಹಿಸಿಕೊಂಡಿದ್ದರೂ, ಉ.ಯು. ಲಲಿತ್ ಮತ್ತು ಸಂಜೀವ್ ಖನ್ನಾ ಅವರಂತಹ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಛಾಪು ಮೂಡಿಸಿದ್ದಾರೆ. ನ್ಯಾಯಾಂಗದ ಆಡಳಿತ ಅಧಿಕಾರಾವಧಿಯಲ್ಲಿನ ದಕ್ಷತೆಯೇ ನಿರ್ಣಾಯಕ” ಎಂದರು.

ದೇಶದಾದ್ಯಂತ ನ್ಯಾಯಾಂಗ ಮೂಲಸೌಕರ್ಯ ಸುಧಾರಣೆ, ಹೈಕೋರ್ಟ್ಗಳಲ್ಲಿ ನೇಮಕಾತಿ ಪ್ರಕ್ರಿಯೆ ತ್ವರಿತಗೊಳಿಸುವುದು ಹಾಗೂ ನ್ಯಾಯ ವಿತರಣಾ ವ್ಯವಸ್ಥೆ ಬಲಪಡಿಸುವುದಕ್ಕೆ ಆದ್ಯತೆ ನೀಡುವುದಾಗಿ ಸಿಜೆಐ ಗವಾಯಿ ತಿಳಿಸಿದರು.

ಇದಲ್ಲದೆ, ಸುಪ್ರೀಂ ಕೋರ್ಟ್ ನಲ್ಲಿ ಯುವ ವಕೀಲರಿಗೆ ಹೆಚ್ಚಿನ ಅವಕಾಶ ಒದಗಿಸುವ ಮೂಲಕ ನ್ಯಾಯಾಂಗದ ಭವಿಷ್ಯ ಬಲಪಡಿಸಲು ಪ್ರಯತ್ನಿಸಲಾಗುತ್ತದೆ.. “ಯುವ ವಕೀಲರಿಗೆ ಸಿಗುವ ಅನುಭವ ಹೈಕೋರ್ಟ್ ಮಟ್ಟದಲ್ಲಿ ಅವರ ದಕ್ಷತೆಯನ್ನು ವೃದ್ಧಿಸಲು ನೆರವಾಗಲಿದೆ” ಎಂದು ಬಿಆರ್ ಗವಾಯಿ ವಿಶ್ವಾಸ ವ್ಯಕ್ತಪಡಿಸಿದರು.

2024ರ ನವೆಂಬರ್ 13ರಂದು, ನ್ಯಾಯಮೂರ್ತಿಗಳಾದ ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು ‘ಬುಲ್ಲೋಝರ್ ನ್ಯಾಯ’ ಕ್ರಮವನ್ನು ಕಾನೂನುಬಾಹಿರವೆಂದು ಘೋಷಿಸಿ, ದೇಶಾದ್ಯಂತ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಜಾರಿಗೊಳಿಸಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.