07/03/2026

Law Guide Kannada

Online Guide

7 ವರ್ಷ ವಕೀಲಿಗೆ ಅನುಭವ ಹೊಂದಿದ ನ್ಯಾಯಾಂಗ ಅಧಿಕಾರಿಗಳೂ ಡಿಸ್ಟ್ರಿಕ್ಟ್ ಜಡ್ಜ್ ನೇರ ನೇಮಕಾತಿಗೆ ಅರ್ಹರು..

ನವದೆಹಲಿ: 7 ವರ್ಷದ ವಕೀಲಿಕೆ ಅನುಭವ ಹೊಂದಿರುವ ನ್ಯಾಯಾಂಗ ಅಧಿಕಾರಿಗಳೂ ಸಹ ಡಿಸ್ಟ್ರಿಕ್ಟ್ ಜಡ್ಜ್ ನೇರ ನೇಮಕಾತಿಗೆ ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ

ಏಳು ವರ್ಷ ಯಾವುದೇ ‘ವಕೀಲರ ಸಂಘ’ದ ಸದಸ್ಯರಾಗಿರುವ ನ್ಯಾಯಾಂಗ ಅಧಿಕಾರಿಗಳು ಕೂಡ ನೇರ ನೇಮಕಾತಿ ಮೂಲಕ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಅರ್ಹರು ಎಂದು ಘೋಷಿಸುವಂತೆ ಕೋರಿ ಅರ್ಜಿದಾರರು ಮನವಿ ಸಲ್ಲಿಸಿದ್ದರು.

ರೆಜನೀಶ್ ಕೆ.ವಿ ವಿರುದ್ಧ ಕೆ ದೀಪಾ ಮತ್ತಿತರರು ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್, ಅರವಿಂದ್ ಕುಮಾರ್, ಸತೀಶ್ ಚಂದ್ರ ಶರ್ಮಾ ಹಾಗೂ ಕೆ ವಿನೋದ್ ಚಂದ್ರನ್ ಅವರಿದ್ದ ಸಾಂವಿಧಾನಿಕ ಪೀಠ ಈ ಮಹತ್ವದ ತೀರ್ಪು ನೀಡಿದೆ.

ನ್ಯಾಯಾಂಗ ಸೇವೆಗಳ ಸದಸ್ಯರಿಗೆ ಅನ್ಯಾಯವಾಗಿದೆ ಎಂದು ನಾವು ಅಭಿಪ್ರಾಯಪಡುತ್ತಿದ್ದೇವೆ. ಇದರಿಂದಾಗಿ ನೇರ ನೇಮಕಾತಿ ಮೂಲಕ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಅವರು ಆಯ್ಕೆಯಾಗದಂತಾಗಿದೆ. ಅದ್ದರಿಂದ ನ್ಯಾಯಾಂಗ ಸೇವೆಗೂ ಮುನ್ನ ಏಳು ವರ್ಷ ವಕೀಲಿಕೆ ಅನುಭವ ಹೊಂದಿರುವ ನ್ಯಾಯಾಂಗ ಅಧಿಕಾರಿಗಳೂ ‘ವಕೀಲರ ವರ್ಗ’ದಡಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಅರ್ಹರು ಎಂದು ನ್ಯಾಯಪೀಠ ತೀರ್ಪು ನೀಡಿದೆ.

ದೇಶದ ವಿವಿಧ ಹೈಕೋರ್ಟ್ಗಳು ಅಥವಾ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದ ಪ್ರಕರಣಗಳನ್ನು ಹೊರತುಪಡಿಸಿ ಭವಿಷ್ಯದ ನೇಮಕಾತಿಗಳಿಗೆ ಈ ತೀರ್ಪು ಅನ್ವಯಿಸಲಿದೆ. ಬದಲಿಗೆ, ಈ ಹಿಂದಿನ ಆಯ್ಕೆ ಪ್ರಕ್ರಿಯೆಗಳಿಗೆ ತೀರ್ಪು ಅನ್ವಯವಾಗದು . “ವಿಚಾರಣಾ ನ್ಯಾಯಾಲಯಗಳಲ್ಲಿ ನ್ಯಾಯಾಂಗ ಸೇವೆಗೂ ನೇಮಕಗೊಳ್ಳುವ ಮೊದಲು ಏಳು ವರ್ಷಗಳ ಕಾಲ ವಕೀಲಿಕೆಯ ಅನುಭವ ಹೊಂದಿರುವ ನ್ಯಾಯಾಂಗ ಅಧಿಕಾರಿಗಳು ನೇರ ನೇಮಕಾತಿ “ಪ್ರಕ್ರಿಯೆಯಲ್ಲಿ ಜಿಲ್ಲಾ ನ್ಯಾಯಾಧೀಶರು ಇಲ್ಲವೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ’ ಎಂದು ಸಾಂವಿಧಾನಿಕ ಪೀಠ ಸ್ಪಷ್ಟಪಡಿಸಿದೆ.

ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಇರಬೇಕಾದ ಅರ್ಹತೆಯನ್ನು ಅರ್ಜಿ ಸಲ್ಲಿಸುವ ಸಮಯದಲ್ಲಿ ಗಮನಿಸಬೇಕು. ಅಲ್ಲದೆ, ನ್ಯಾಯಾಧೀಶರು ಮತ್ತು ವಕೀಲರಾಗಿ ಏಳು ವರ್ಷಗಳ ಸಂಯೋಜಿತ ಅನುಭವ ಹೊಂದಿರುವ ನ್ಯಾಯಾಂಗ ಅಧಿಕಾರಿಗಳೂ ಸಹ ನೇರ ನೇಮಕಾತಿ ಮೂಲಕ ಜಿಲ್ಲಾ ನ್ಯಾಯಾಧೀಶರಾಗಲು ಅರ್ಹರಾಗಿರುತ್ತಾರೆ. ಅಂತಹ ನೇಮಕಾತಿಗಳಲ್ಲಿ ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಅನ್ವಯವಾಗುವಂತೆ ವಕೀಲರ ಮತ್ತು ನ್ಯಾಯಾಂಗ ಅಧಿಕಾರಿಗಳ ಕನಿಷ್ಠ ವಯೋಮಿತಿಯು 35 ವರ್ಷಗಳಾಗಿರಬೇಕು ಎಂದು ನ್ಯಾಯಪೀಠ ಹೇಳಿದೆ.

ನ್ಯಾಯಾಂಗ ಅಧಿಕಾರಿಗಳು ವಕೀಲರ ವರ್ಗದಡಿ ಅರ್ಜಿ ಸಲ್ಲಿಸುವುದನ್ನು ಈ ಹಿಂದೆ ನಿರ್ಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ‘ಧೀರಜ್ ಮೋರ್ ಪ್ರಕರಣ”ಕ್ಕೆ ಸಂಬಂಧಿಸಿದಂತೆ 2020ರಲ್ಲಿ ತ್ರಿಸದಸ್ಯ ಪೀಠ ನೀಡಿದ್ದ ತೀರ್ಪು ಸದ್ರಿ ಸುಪ್ರೀಂ ಕೋರ್ಟ್ನ ಸಂವಿಧಾನಿಕ ನ್ಯಾಯಪೀಠದ ತೀರ್ಪಿನ ಮೂಲಕ ರದ್ದುಗೊಂಡಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.