23/04/2026

Law Guide Kannada

Online Guide

8.82 ಲಕ್ಷಕ್ಕೂ ಹೆಚ್ಚು ಡಿಕ್ರಿ ಅಮಲ್ದಾರಿ ಪ್ರಕರಣಗಳ ಅರ್ಜಿಗಳು ಬಾಕಿ: ಸುಪ್ರೀಂ ಬೇಸರ, ಮತ್ತೆ 6 ತಿಂಗಳ ಗಡುವು

ನವದೆಹಲಿ: ದೇಶದಾದ್ಯಂತ ವಿವಿಧ ನ್ಯಾಯಾಲಯಗಳು ಡಿಕ್ರಿ ಅಮಲ್ದಾರಿ ಪ್ರಕರಣಗಳ ನ್ಯಾಯ ತೀರ್ಮಾನದಲ್ಲಿ ವಿಳಂಬ ಧೋರಣೆ ತೋರುತ್ತಿರುವುದಕ್ಕೆ ಹಾಗೂ ನ್ಯಾಯಾಲಯಗಳ ಕಾರ್ಯ ಕ್ಷಮತೆಗೆ ಸುಪ್ರೀಂಕೋರ್ಟ್ ಬೇಸರ ವ್ಯಕ್ತಪಡಿಸಿದೆ.

ದೇಶದ ವಿವಿಧ ನ್ಯಾಯಾಲಯಗಳಲ್ಲಿ 8.82 ಲಕ್ಷಕ್ಕೂ ಹೆಚ್ಚು ಡಿಕ್ರಿ ಅಮಲ್ದಾರಿ ಪ್ರಕರಣಗಳ ಅರ್ಜಿಗಳು ಬಾಕಿ ಇರುವುದು ಅತ್ಯಂತ ನಿರಾಶಾದಾಯಕ ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಪಂಕಜ್ ಮಿಥಲ್ ಅವರ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ತಮಿಳುನಾಡಿನಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಉಂಟಾಗಿದ್ದ ಜಮೀನಿನ ಕುರಿತ ಸಿವಿಲ್ ವಿವಾದದ ವಿಚಾರಣೆ ವೇಳೆ ಪೀಠವು ದೇಶದಾದ್ಯಂತ ಬಾಕಿ ಇರುವ ಡಿಕ್ರಿ ಅಮಲ್ದಾರಿ ಅರ್ಜಿಗಳ ಬಗ್ಗೆ ಮಾಹಿತಿ ಕೇಳಿತ್ತು.
ಸಿವಿಲ್ ವಿವಾದಗಳಲ್ಲಿ ನ್ಯಾಯಾಲಯಗಳು ಹೊರಡಿಸಿದ ಆದೇಶಗಳನ್ನು ಜಾರಿಗೊಳಿಸುವಂತೆ ಕೋರಿ ಡಿಕ್ರಿ ಹೊಂದಿರುವವರು ಈ ಅರ್ಜಿಗಳನ್ನು ಸಲ್ಲಿಸಿರುತ್ತಾರೆ. ‘ಎಲ್ಲ ಹೈಕೋರ್ಟ್ ಗಳು ಮುಂದಿನ ಆರು ತಿಂಗಳೊಳಗೆ ಈ ಅರ್ಜಿಗಳ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ತನ್ನ ವ್ಯಾಪ್ತಿಯ ಸಿವಿಲ್ ನ್ಯಾಯಾಲಯಗಳಿಗೆ ಸೂಚಿಸಬೇಕು’ ಎಂದು ನ್ಯಾಯಪೀಠ ಮಾರ್ಚ್ 6ರಂದು ನಿರ್ದೇಶನ ನೀಡಿತ್ತು.

‘ಈ ವಿಷಯದಲ್ಲಿ ಯಾವುದೇ ವಿಳಂಬ ಆಗಬಾರದು. ಒಂದು ವೇಳೆ ವಿಳಂಬ ಆದರೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರಾಗುತ್ತಾರೆ’ ಎಂದು ಪೀಠ ಸೂಚನೆ ನೀಡಿತ್ತು.

ಈ ಕುರಿತು ಮಾಹಿತಿ ಬಂದಿದ್ದು, ‘ಮಾರ್ಚ್ 6ರಿಂದ ಆರು ತಿಂಗಳಲ್ಲಿ ಈ ರೀತಿಯ ಒಟ್ಟು 3,38,685 ಅರ್ಜಿಗಳನ್ನು ತೀರ್ಮಾನಿಸಿ ವಿಲೇವಾರಿ ಮಾಡಲಾಗಿದೆ. ಆದರೆ ಇನ್ನೂ 8,82,578 ಅರ್ಜಿಗಳು ಬಾಕಿಯಿವೆ. ‘ಆದೇಶ ನೀಡಿದ ನಂತರ ಅದನ್ನು ಜಾರಿಗೊಳಿಸಲು ಹಲವು ವರ್ಷಗಳೇ ಬೇಕು ಎನ್ನುವುದು ಅರ್ಥಹೀನ ಮತ್ತು ನ್ಯಾಯದ ಅಣಕವಲ್ಲವೇ’ ಎಂದು ಪೀಠವು ಗರಂ ಆಗಿದೆ.

ಬಾಕಿ ಇರುವ ಡಿಕ್ರಿ ಅಮಲ್ದಾರಿ ಅರ್ಜಿಗಳ ಪರಿಣಾಮಕಾರಿ ಮತ್ತು ತ್ವರಿತ ವಿಲೇವಾರಿಗೆ ಹೈಕೋರ್ಟ್ ಗಳು ಜಿಲ್ಲಾ ನ್ಯಾಯಾಲಯಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಪೀಠ ಮತ್ತೊಮ್ಮೆ ಸೂಚನೆ ನೀಡಿದೆ.

ಕರ್ನಾಟಕ ಹೈಕೋರ್ಟ್ ಬಗ್ಗೆ ಸುಪ್ರೀಂ ಬೇಸರ ಆರು ತಿಂಗಳಲ್ಲಿ ವಿಲೇವಾರಿ ಮಾಡಿರುವ ಮತ್ತು ಬಾಕಿ ಇರುವ ಡಿಕ್ರಿ ಅಮಲ್ದಾರಿ ಅರ್ಜಿಗಳ ಬಗ್ಗೆ ಮಾಹಿತಿ ಒದಗಿಸುವಂತೆ ಸುಪ್ರೀಂಕೋರ್ಟ್ ಕರ್ನಾಟಕ ಹೈಕೋರ್ಟ್ ಗೂ ಸೂಚಿಸಿತ್ತು. ಆದರೆ ಅಗತ್ಯ ದತ್ತಾಂಶ ನೀಡುವಲ್ಲಿ ಹೈಕೋರ್ಟ್ ವಿಫಲವಾಗಿತ್ತು ಸುಪ್ರೀಂ ಕೋರ್ಟ್ ಕೇಳಿದ್ದ ಅಗತ್ಯ ದತ್ತಾಂಶಗಳನ್ನು ಕರ್ನಾಟಕ ಹೈಕೋರ್ಟ್ ಒದಗಿಸುವಲ್ಲಿ ವಿಫಲವಾಗಿದೆ ಎಂಬುದನ್ನು ನ್ಯಾಯಪೀಠ ಇದೇ ವೇಳೆ ಗಮನಿಸಿದ ನ್ಯಾಯಪೀಠವು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ‘ಆರು ತಿಂಗಳಲ್ಲಿ ವಿಲೇವಾರಿ ಮಾಡಿರುವ ಮತ್ತು ಬಾಕಿ ಇರುವ ಡಿಕ್ರಿ ಅಮಲ್ದಾರಿ ಅರ್ಜಿಗಳ ಬಗ್ಗೆ ಮಾಹಿತಿ ಒದಗಿಸುವಂತೆ ಕರ್ನಾಟಕ ಹೈಕೋರ್ಟ್ ಗೆ ಇನ್ನೊಮ್ಮೆ ಜ್ಞಾಪನೆ ಕಳುಹಿಸುವಂತೆ ಪೀಠ ಸೂಚನೆ ನೀಡಿತು. ಅಲ್ಲದೆ ನಿಗದಿತ ಅವಧಿಯಲ್ಲಿ ಏಕೆ ಮಾಹಿತಿ ನೀಡಿಲ್ಲ ಎಂಬುದರ ಕುರಿತು ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರು ಎರಡು ವಾರಗಳಲ್ಲಿ ವಿವರಣೆ ನೀಡಬೇಕು’ ಎಂದೂ ಸೂಚಿಸಿ ಪ್ರಕರಣದ ವಿಚಾರಣೆಯನ್ನು 2026ರ ಏಪ್ರಿಲ್ 10ಕ್ಕೆ ಮುಂದೂಡಿಕೆ ಮಾಡಿದೆ.

ಅಲ್ಲದೆ ‘ಮುಂದಿನ ವಿಚಾರಣೆ ವೇಳೆಗೆ ಎಲ್ಲ ಹೈಕೋರ್ಟ್ ಗಳು ಈ ಕುರಿತ ಅರ್ಜಿಗಳ ಸ್ಥಿತಿಗತಿಗೆ ಸಂಬಂಧಿಸಿದ ಪೂರ್ಣ ದತ್ತಾಂಶ ಒದಗಿಸಬೇಕು’ ಎಂದು ನಿರ್ದೇಶನ ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.