ಲಿಖಿತ ಹೇಳಿಕೆ ಸಲ್ಲಿಸದ ಮಾತ್ರಕ್ಕೆ ಪಾಟೀ ಸವಾಲಿನ ಹಕ್ಕು ನಿರಾಕರಿಸುವಂತಿಲ್ಲ – ಸುಪ್ರೀಂ ಕೋರ್ಟ್
ನವದೆಹಲಿ: ವ್ಯಾಜ್ಯದಲ್ಲಿ ಎದುರುದಾರರು ಲಿಖಿತ ಹೇಳಿಕೆ ಸಲ್ಲಿಸದ ಮಾತ್ರಕ್ಕೆ ಪಾಟೀ ಸವಾಲಿನ ಹಕ್ಕು ನಿರಾಕರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದೆ.
ಅನ್ವಿತ ಆಟೋ ಟೆಕ್ ವರ್ಕ್ಸ್ ವಿರುದ್ಧ ಅರೋಶ್ ಮೋಟರ್ಸ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ. ವ್ಯಾಜ್ಯದಲ್ಲಿ ಎದುರುದಾರರು ಲಿಖಿತ ಹೇಳಿಕೆಯನ್ನು ಸಲ್ಲಿಸಿಲ್ಲ ಎಂದ ಮಾತ್ರಕ್ಕೆ ಅವರಿಗೆ ಪಾಟೀ ಸವಾಲಿನ ಹಕ್ಕನ್ನು ನಿರಾಕರಿಸಲಾಗದು ಎಂದು ಅಭಿಪ್ರಾಯ ತಿಳಿಸಿದೆ.
ಪ್ರತಿವಾದವನ್ನು ಒಂದು ಲಕ್ಷ ರೂ. ದಂಡದೊಂದಿಗೆ ಸ್ವೀಕರಿಸಲು ಆದೇಶಿಸಿದ ನ್ಯಾಯಪೀಠವು ಇದರ ಜೊತೆಗೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ (ಕಮರ್ಷಿಯಲ್ ಕೋರ್ಟ್) ನೀಡಿದ ಆದೇಶವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಬದಿಗಿರಿಸಿತು.
ಪಾಟೀ ಸವಾಲಿನ ಮುಖ್ಯ ಉದ್ದೇಶ ಸತ್ಯವನ್ನು ಹೊರಗೆಡಹುವುದು ಮತ್ತು ಸಾಕ್ಷಿದಾರನ ವಿಶ್ವಾಸಾರ್ಹತೆಯನ್ನು ಪರೀಕ್ಷಿಸುವುದು. ಪ್ರತಿವಾದವನ್ನು ಮಂಡಿಸಿಲ್ಲ ಎಂಬ ಕಾರಣಕ್ಕೆ ಸಾಕ್ಷಿದಾರರನ್ನು ಪಾಟೀ ಸವಾಲಿಗೆ ಒಳಪಡಿಸುವ ಎದುರುದಾರರ ಹಕ್ಕು ಮೊಟಕುಗೊಳ್ಳುವುದಿಲ್ಲ. ಇಂತಹ ಸಂದರ್ಭದಲ್ಲಿ ಪಾಟೀ ಸವಾಲು ಎದುರುದಾರರ ಕೊನೆಯ ಪ್ರತಿರಕ್ಷೆಯ ಹಕ್ಕಾಗಿರುತ್ತದೆ ಎಂದು ನ್ಯಾಯಪೀಠ ಹೇಳಿದೆ. ಬಹುತೇಕ ಕಮರ್ಷಿಯಲ್ ವ್ಯಾಜ್ಯಗಳಲ್ಲಿ ಶಾಸನಬದ್ಧ ಕಾಲಮಿತಿಯೊಳಗೆ ಲಿಖಿತ ಹೇಳಿಕೆ ಸಲ್ಲಿಸದ ಕಾರಣಕ್ಕೆ ಪ್ರತಿವಾದವನ್ನು ಶೂನ್ಯ ಎಂದು ಪರಿಗಣಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಎದುರುದಾರರಿಗೆ ದಾವೆಯ ವಿರುದ್ಧ ಪ್ರತಿವಾದ ಇಲ್ಲ ಎಂದು ಪರಿಗಣಿಸಲಾಗುತ್ತದೆ.
ಬಾಬಾಸಾಹೆಬ್ ರಾವ್ ಸಾಹೆಬ್ ಕೊಬರ್ನೆ (2022) ಮತ್ತು ಪ್ರಕಾಶ್ ಕಾರ್ಪೊರೇಟ್ಸ್ (2022) ಪ್ರಕರಣಗಳಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಉಲ್ಲೇಖಿಸಿದ ನ್ಯಾಯಪೀಠ ವಾದಪತ್ರವನ್ನು ದಂಡದೊಂದಿಗೆ ಸ್ವೀಕರಿಸಲು ಆದೇಶ ನೀಡಿದೆ. ಹಾಗೆಯೇ, ಸೂಕ್ತ ವಿಚಾರಣೆ ನಡೆಸಿ ಇತ್ಯರ್ಥಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿ ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಕಳುಹಿಸಲು ಆದೇಶಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
