ದೋಷಾರೋಪ ನಿಗದಿ ವಿಳಂಬಕ್ಕೆ ಸುಪ್ರೀಂ ಅಸಮಾಧಾನ: ಏಕರೂಪ ಮಾರ್ಗಸೂಚಿಗೆ ನ್ಯಾಯಪೀಠ ಒತ್ತು
ನವದೆಹಲಿ: ಕೆಲವೊಂದು ಪ್ರಕರಣಗಳಲ್ಲಿ ದೋಷಾರೋಪ ನಿಗದಿಗೆ ಮೂರರಿಂದ ನಾಲ್ಕು ವರ್ಷ ತಗುಲುತ್ತಿದ್ದು, ದೋಷಾರೋಪ ನಿಗದಿ ಮಾಡುವಲ್ಲಿ ವಿಳಂಬ ಮಾಡುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಈ ಸಂಬಂಧ ಇಡೀ ದೇಶಕ್ಕೆ ಮಾರ್ಗಸೂಚಿಗಳನ್ನು ಏಕರೂಪ ಮಾರ್ಗಸೂಚಿ ಜಾರಿ ಮಾಡಬೇಕು ಎಂದು ಒಲವು ತೋರಿದೆ.
ಕಳ್ಳತನ ಹಾಗೂ ಕೊಲೆ ಯತ್ನ ಪ್ರಕರಣದಲ್ಲಿ 2024ರ ಆಗಸ್ಟ್ ನಿಂದ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದೇನೆ. 2024ರ ಸೆಪ್ಟೆಂಬರ್ ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರೂ, ಇನ್ನೂ ದೋಷಾರೋಪ ನಿಗದಿ ಮಾಡಲಿಲ್ಲ. ಹೀಗಾಗಿ ಜಾಮೀನು ನೀಡಬೇಕು ಎಂದು ಕೋರಿ ಅರುಣ್ ಕುಮಾರ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಹಾಗೂ ಎನ್.ವಿ ಅಂಜಾರಿಯಾ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.
ದೋಷಾರೋಪ ಪಟ್ಟಿ ಸಲ್ಲಿಸಿದ ಕೂಡಲೇ ದೋಷಾರೋಪ ನಿಗದಿ ಮಾಡಬೇಕು. ಆದರೆ ದೇಶದಾದ್ಯಂತ ಪ್ರಕರಣಗಳಲ್ಲಿ ದೋಷಾರೋಪ ನಿಗದಿಯಲ್ಲಿ ವಿಳಂಬ ನಡೆಯುತ್ತಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಪ್ರಕಾರ ಮೊದಲ ವಿಚಾರಣೆ ನಡೆದ 60 ದಿನಗಳಲ್ಲಿ ದೋಷಾರೋಪ ನಿಗದಿ ಮಾಡಬೇಕು. ದೇಶದಾದ್ಯಂತ ಏಕರೂಪ ನ್ಯಾಯಾಂಗ ಪದ್ಧತಿ ಇರಬೇಕು ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು.
ಸಕಾಲಿಕವಾಗಿ ದೋಷಾರೋಪ ನಿಗದಿ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಇಡೀ ದೇಶಕ್ಕೆ ಅನ್ವಯವಾಗುವಂತೆ ಮಾರ್ಗಸೂಚಿಗಳನ್ನು ಹೊರಡಿಸುವ ಪಸ್ತಾಪವನ್ನೂ ಮುಂದಿಟ್ಟಿದ ನ್ಯಾಯಪೀಠವು, ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ಸ್ಥಗಿತಕ್ಕೆ ದೋಷಾರೋಪ ನಿಗದಿಯಲ್ಲಾಗುತ್ತಿರುವ ವಿಳಂಬವೇ ಕಾರಣ. ಶಾಸನಬದ್ಧ ನಿಯಮದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ದೇಶದಾದ್ಯಂತ ಕೆಲವು ನಿರ್ದೇಶನಗಳನ್ನು ಹೊರಡಿಸುವ ಅಗತ್ಯವಿದೆ ಎಂದು ತಿಳಿಸಿತು.
ಈ ವಿಷಯದಲ್ಲಿ ಕೋರ್ಟ್ಗೆ ಬಿಹಾರ ಸರ್ಕಾರದ ವಕೀಲ ಅವರೊಂದಿಗೆ ಸೇರಿ ಅಮಿಕಸ್ ಕ್ಯೂರಿಯಾಗಿ ಸಹಾಯ ಮಾಡಬೇಕು ಎಂದು ಹಿರಿಯ ವಕೀಲ ಸಿದ್ದಾರ್ಥ್ ಲೂದ್ರಾ ಅವರನ್ನು ನ್ಯಾಯಪೀಠ ಕೇಳಿಕೊಂಡಿತು.
ಅಟಾರ್ನಿ ಜನರಲ್ ಹಾಗೂ ಸಾಲಿಸಿಟರ್ ಜನರಲ್ ಅವರ ಬೆಂಬಲವನ್ನೂ ಕೇಳಿದ ನ್ಯಾಯಪೀಠ, ದೋಷಾರೋಪ ನಿಗದಿಯಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಲು ದೇಶದಾದ್ಯಂತ ನಿರ್ದೇಶನ ನೀಡುವ ಬಗ್ಗೆ ಪರಿಗಣಿಸಿ ಎಂದು ಹೇಳಿತು.
ಕ್ರಿಮಿನಲ್ ಪ್ರಕರಣವೊಂದರ ವಿಚಾರಣೆ ವೇಳೆ, ಎರಡು ವರ್ಷದಿಂದ ಜೈಲಿನಲ್ಲಿ ಇದ್ದರೂ ಇನ್ನೂ ದೋಷಾರೋಪ ನಿಗದಿ ಮಾಡದಿರುವುದರ ಬಗ್ಗೆ ಆರೋಪಿ ಪರ ವಕೀಲರು ಕೋರ್ಟ್ ಗಮನಕ್ಕೆ ತಂದರು. ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳಲ್ಲಿ ಹೀಗೆ ಯಾಕೆ ನಿರಂತರವಾಗಿ ವಿಳಂಬವಾಗುತ್ತಿದೆ ಎಂದು ಕೋರ್ಟ್ ಪ್ರಶ್ನಿಸಿತು.
‘ದೇಶದಾದ್ಯಂತ ದೋಷಾರೋಪ ನಿಗದಿ ಮಾಡುವುದಕ್ಕೆ ಮೂರು-ನಾಲ್ಕು ವರ್ಷ ತಗುಲುವುದು ನಮ್ಮ ಗಮನಕ್ಕೆ ಬಂದಿದೆ. ಸೆಕ್ಷನ್ 251 (ಬಿ) ಪ್ರಕಾರ ಮೊದಲ ವಿಚಾರಣೆ ನಡೆದ 60 ದಿನಗಳಲ್ಲಿ ದೋಷಾರೋಪ ನಿಗದಿ ಮಾಡಬೇಕು. ಉದಾಹರಣೆಗೆ ನಾವು ಈಗ ನೋಟಿಸ್ ನೀಡಲು ಆದೇಶಿಸಿದ ಪ್ರಕರಣದಲ್ಲಿ ಮೂವರು ಆರೋಪಿಗಳಿದ್ದಾರೆ. 2023ರಲ್ಲಿ ಚಾರ್ಜ್ಶೀಟ್ ಸಲ್ಲಿಸಿದ್ದರೂ, 2025ರವರೆಗೂ ಆರೋಪ ನಿಗದಿ ಮಾಡಿಲ್ಲ. ಮೂವರೂ ಜೈಲಿನಲ್ಲಿದ್ದಾರೆ’ ಎಂದು ನ್ಯಾಯಪೀಠ ಹೇಳಿತು. ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್)ಯಲ್ಲಿ ಸಮಯ ನಿಗದಿ ಮಾಡಲಾಗಿದೆ. ಬಾಕಿ ಇರುವ ಎಲ್ಲಾ ಪ್ರಕರಣಗಳ ಬಗ್ಗೆ ನಮಗೊಂದು ಮಾರ್ಗಸೂಚಿ ಬೇಕು’ ಎಂದು ಕೋರ್ಟ್ ಹೇಳಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
