ಹೆಡ್ ಮಾಸ್ಟರ್ ಗೆ ಜೈಲು ಶಿಕ್ಷೆ: ಕೆಲಸ ಕಳೆದುಕೊಳ್ಳುವ ಭೀತಿಗೆ ಸಿಲುಕಿದ ಮುಖ್ಯಶಿಕ್ಷಕ..!
ಮಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲುಶಿಕ್ಷೆಗೆ ಗುರಿಯಾದ ಮುಖ್ಯ ಶಿಕ್ಷಕ ಇದೀಗ ಕೋರ್ಟ್ ತೀರ್ಪಿನಿಂದ ನೌಕರಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಚೆಕ್ ಅಮಾನ್ಯ ಪ್ರಕರಣವೊಂದರಲ್ಲಿ ಪ್ರಾಥಮಿಕ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕನಿಗೆ ಜೈಲು ಶಿಕ್ಷೆ ವಿಧಿಸಿದ ಮಂಗಳೂರಿನ ಒಂಭತ್ತನೇ ಜೆಎಂಎಫ್ಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಬಂಟ್ವಾಳದ ಕಾವಳಕಟ್ಟೆಯಲ್ಲಿರುವ ಕಲೈ ಚಂದ್ರಮೌಳಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಚಂದ್ರಶೇಖರ್ ಎಸ್. ನಾಯಕ್ ಅವರು ಜೈಲುಶಿಕ್ಷೆಗೊಳಗಾದ ಅಪರಾಧಿ.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಕೊಡಿಯಾಲ್ ಬೈಲ್ ಶಾಖೆಯಲ್ಲಿ ಪಡೆದ ಸಾಲವೊಂದಕ್ಕೆ ನೀಡಿದ ಚೆಕ್ ಅಮಾನ್ಯಗೊಂಡಿತ್ತು. ಈ ಬಗ್ಗೆ ಬ್ಯಾಂಕ್ ಸೂಕ್ತ ಕಾನೂನು ಪ್ರಕ್ರಿಯೆಯನ್ನು ಪೂರೈಸಿದ ಬಳಿಕ ಮಂಗಳೂರಿನ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ 9ನೇ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಡಾ. ಶಿಲ್ಪಾ ಬ್ಯಾಡಗಿ ಅವರು ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಮುಖ್ಯಶಿಕ್ಷಕ ಚಂದ್ರಶೇಕರ್ ಎಸ್ ನಾಯಕ್ ಅವರಿಗೆ ರೂ. 2.42 ಲಕ್ಷ ದಂಡ ಹಾಗೂ ಒಂದು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ.
ಬ್ಯಾಂಕಿನ ಪರವಾಗಿ ಮಂಗಳೂರಿನ ನ್ಯಾಯವಾದಿ ಸುಕೇಶ್ ಕುಮಾರ್ ಶೆಟ್ಟಿ ಅವರು ವಾದ ಮಂಡಿಸಿದ್ದರು.
ಹೆಡ್ ಮಾಸ್ಟರ್ ಅವರ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪಿನಿಂದ ಚಂದ್ರಶೇಖರ್ ನಾಯಕ್ ಅವರು ತಮ್ಮ ಸರ್ಕಾರಿ ನೌಕರಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಪ್ರಕರಣದ ಹಿನ್ನೆಲೆ..
ಮಂಗಳೂರಿನ ದಿವ್ಯಶ್ರೀ ಡಿ.ಕೆ. ಎಂಬವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕೊಡಿಯಾಲ್ ಬೈಲ್ ಶಾಖೆಯಿಂದ ಪಡೆದಿದ್ದ ಸಾಲಕ್ಕೆ ಚಂದ್ರಶೇಖರ್ ಎಸ್.ನಾಯಕ್ ಅವರು ಜಾಮೀನುದಾರರಾಗಿದ್ದರು. ದಿವ್ಯಶ್ರೀ ಪಡೆದ ಸಾಲವನ್ನು ಸಕಾಲಕ್ಕೆ ತೀರಿಸದೆ ಸುಸ್ತಿಯಾಗಿದ್ದು, ಈ ಬಗ್ಗೆ ಸಾಲ ವಸೂಲಾತಿಗಾಗಿ ಸಹಕಾರಿ ಕಾಯ್ದೆಯನ್ವಯ ಬ್ಯಾಂಕ್ ಕಾನೂನು ಪ್ರಕ್ರಿಯೆಯನ್ನು ಜರುಗಿಸಲಾಗಿತ್ತು.
ಈ ಮಧ್ಯೆ, ಬ್ಯಾಂಕ್ ಅನ್ನು ಸಂಪರ್ಕಿಸಿದ ಕಾವಳಕಟ್ಟೆ ಶಾಲೆಯ ಹೆಡ್ ಮಾಸ್ಟರ್ ಚಂದ್ರಶೇಖರ್ ನಾಯಕ್ ಸಾಲದ ಮರುಪಾವತಿಗಾಗಿ ಚೆಕ್ ನೀಡಿದ್ದರು. ಈ ಚೆಕ್ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಚಂದ್ರಶೇಖರ್ ನಾಯಕ್ ವಿರುದ್ಧ ಬ್ಯಾಂಕ್ ಕಾನೂನು ಪ್ರಕ್ರಿಯೆ ಆರಂಭಿಸಿತ್ತು. ಬ್ಯಾಂಕಿನ ಪರವಾಗಿ 18 ದಾಖಲೆಗಳನ್ನು ಹಾಜರುಪಡಿಸಲಾಗಿತ್ತು. ಮೌಖಿಕ ಸಾಕ್ಷಿ ಮತ್ತು ದಾಖಲೆಗಳನ್ನು ಪರಿಶೀಲಿಸಿದ ಮಾನ್ಯ ನ್ಯಾಯಾಲಯ ಆರೋಪಿಗೆ ಶಿಕ್ಷೆ ಪ್ರಕಟಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
