06/03/2026

Law Guide Kannada

Online Guide

ರಮ್ಮಿ, ಅಂದರ್-ಬಾಹರ್ ಕೌಶಲದ ಆಟ, ಅವು ಜೂಜಲ್ಲ : ಹೈಕೋರ್ಟ್ ತೀರ್ಪು ಎತ್ತಿ ಹಿಡಿದ ಸುಪ್ರೀಂ

ಬೆಂಗಳೂರು: ರಮ್ಮಿ, ಅಂದರ್-ಬಾಹರ್ ಜೂಜಲ್ಲ ಅವು ಕೌಶಲದ ಆಟಳಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಕರ್ನಾಟಕ ಹೈಕೋರ್ಟ್ ನ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.

ಸಿರಸಿ ತಾಲೂಕಿನ ಭೈರುಂಬೆ ಸಮೀಪದ ರೆಸಾರ್ಟ್ ವೊಂದರಲ್ಲಿ ನಡೆದ ‘ಅಂದರ್ ಬಾಹರ್’ ಆಟದ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಧಾರವಾಡದ ಹೈಕೋರ್ಟ್ ಪೀಠದ ತೀರ್ಪನ್ನು ಎತ್ತಿ ಹಿಡಿದಿದ್ದು, ಈ ನಿರ್ಧಾರವು ಇಸ್ಪೀಟ್ ಆಟಗಳಾದ ರಮ್ಮಿ ಮತ್ತು ಅಂದರ್ ಬಾಹರ್ ಕೌಶಲದ ಆಟಗಳೇ ಹೊರತು, ಕೇವಲ ಅವಕಾಶದ ಆಟಗಳಲ್ಲ ಎಂದು ತಿಳಿಸಿದೆ.

ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಕಳೆದ ಕೆಲವು ತಿಂಗಳುಗಳ ಹಿಂದೆ ಭೈರುಂಬೆ ಬಳಿಯ ಹಾವೇರಿ ಡಾಕ್ಟರ್ ರೆಸಾರ್ಟ್ನಲ್ಲಿ ದಾಳಿ ನಡೆಸಿ, ಅಂದರ್ ಬಾಹರ್ ಆಡುತ್ತಿದ್ದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಬಂಧಿತರಾಗಿದ್ದ 20 ಜನರ ವಿರುದ್ಧ ಶಿರಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪೊಲೀಸರು ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 79 ಮತ್ತು 80 ಹಾಗೂ ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆ (BNS), 2023 ರ ಸೆಕ್ಷನ್ 112 (ಸಣ್ಣ ಸಂಘಟಿತ ಅಪರಾಧ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ವೇಳೆ ಪೊಲೀಸರು ರೂ 49.50 ಲಕ್ಷಕ್ಕೂ ಅಧಿಕ ನಗದು ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.

ಈ ಮಧ್ಯೆ ಪ್ರಕರಣ ರದ್ದು ಕೋರಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಆರೋಪಿಗಳು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಸಂಖ್ಯೆ 103057/2025 ಮತ್ತು 103022/2025 ರ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ನ್ಯಾಯಪೀಠವು, ಅಂದರ್ ಬಹಾರ್ ಆಟವು ಕೌಶಲ ಮತ್ತು ಅವಕಾಶದ ಸಂಯೋಜನೆಯಾಗಿದ್ದು, ಕೇವಲ ಅವಕಾಶದ ಆಟವಲ್ಲ ಎಂದು ತೀರ್ಮಾನಿಸಿತ್ತು. ಕೌಶಲದ ಆಟಗಳಿಗೆ ಕಾನೂನುಗಳು ಜೂಜಿನ ಅನ್ವಯಿಸುವುದಿಲ್ಲ ಎಂಬ ಕಾನೂನು ಸ್ಥಿತಿಯನ್ನು ನ್ಯಾಯಾಲಯವು ಪುನಃ ದೃಢಪಡಿಸಿತ್ತು. ಇದರ ಜೊತೆಗೆ, ಖಾಸಗಿ ರೆಸಾರ್ಟ್ ನಲ್ಲಿ ನಡೆಯುವ ಇಂತಹ ಆಟವನ್ನು ‘ಸಾಮಾನ್ಯ ಜೂಜಾಟದ ಮನೆ’ (ಕ್ಲಬ್) ಎಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಅಷ್ಟೇ ಅಲ್ಲದೆ, ಪ್ರಾಸಿಕ್ಯೂಷನ್ ಬಿಎನ್ಎಸ್ 2023 ರ ಸೆಕ್ಷನ್ 112 ಅನ್ನು ಅನ್ವಯಿಸಲು ವಿಫಲವಾಗಿದೆ, ಏಕೆಂದರೆ ಈ ಸೆಕ್ಷನ್ ಆಕರ್ಷಿತವಾಗಲು ಆರೋಪಿಗಳು ಗುಂಪು ಅಥವಾ ಗ್ಯಾಂಗ್ ನ ಸದಸ್ಯರಾಗಿರುವುದು ಮತ್ತು ಅಪರಾಧ ಹಿನ್ನೆಲೆ ಹೊಂದಿರುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿತ್ತು.

ಹೈಕೋರ್ಟ್ ಆದೇಶದಂತೆ, ಕ್ರೈಂ ಸಂಖ್ಯೆ 114/2025 ರಲ್ಲಿನ ಸಂಪೂರ್ಣ ಕ್ರಿಮಿನಲ್ ಪ್ರಕ್ರಿಯೆಗಳು ಸಂಪೂರ್ಣವಾಗಿ ರದ್ದುಗೊಂಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಸರ್ಕಾರದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠವು, ಹೈಕೋರ್ಟ್ ಆದೇಶವನ್ನೇ ಎತ್ತಿ ಹಿಡಿದಿದ್ದು, ಈ ತೀರ್ಪಿನ ಫಲವಾಗಿ, ವಶಪಡಿಸಿಕೊಂಡ ಹಣ ಮತ್ತು ವಸ್ತುಗಳನ್ನು ಹಿಂಪಡೆಯಲು ಸಂಬಂಧಪಟ್ಟ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯ ನೀಡಲಾಯಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.