06/03/2026

Law Guide Kannada

Online Guide

ಅನುಕಂಪದ ಹುದ್ದೆ ಪಡೆದ ಉದ್ಯೋಗಿಗಳಿಗೆ ಶಾಕ್: ಪದೋನ್ನತಿ ಕೇಳುವ ಹಕ್ಕಿಲ್ಲ ಎಂದ ಸುಪ್ರೀಂಕೋರ್ಟ್

ನವದೆಹಲಿ: ಅನುಕಂಪದ ಆಧಾರದ ಮೇಲೆ ಹುದ್ದೆ ಪಡೆದ ಉದ್ಯೋಗಿಗಳಿಗೆ ಪದೋನ್ನತಿ ಕೇಳುವ ಹಕ್ಕು ಇಲ್ಲ. ಅನುಕಂಪದ ಮೇಲೆ ಪಡೆದ ಸೌಲಭ್ಯವನ್ನು ಉನ್ನತೀಕರಿಸಿಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಸ್ವೀಪರ್ ಆಗಿ ನೇಮಕಗೊಂಡಿದ್ದ ಇಬ್ಬರು ವ್ಯಕ್ತಿಗಳನ್ನು ಕಿರಿಯ ಸಹಾಯಕ ಹುದ್ದೆಗೆ ಬಡ್ತಿ ನೀಡುವಂತೆ ಮದ್ರಾಸ್ ಹೈಕೋರ್ಟ್ ನೀಡಿದ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರಿದ್ದ ಪೀಠವು, ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆದವರು ಬಳಿಕ, ಉನ್ನತ ಹುದ್ದೆಗೆ ಪದೋನ್ನತಿ ನೀಡಬೇಕು ಎಂದು ಕೇಳಲು ಬರುವುದಿಲ್ಲ. ಇದು ಅವರ ಹಕ್ಕೂ ಅಲ್ಲ ಅಭಿಪ್ರಾಯ ವ್ಯಕ್ತಪಡಿಸಿದೆ.

ತನ್ನ ಶ್ರಮದ ಮೇಲೆ ಹುದ್ದೆ ಪಡೆದುಕೊಂಡ ವ್ಯಕ್ತಿಯ ಹೆಸರಿನಲ್ಲಿ (ಅನುಕಂಪ) ಅವರ ಅವಲಂಬಿತರು ಪಡೆದುಕೊಂಡರೆ, ನಿಜವಾದ ವ್ಯಕ್ತಿಗೆ ಏನೆಲ್ಲಾ ಸೌಲ್ಯಭ್ಯಗಳು ಸಿಗುತ್ತವೆಯೇ ಅದನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಅನುಕಂಪದ ಹುದ್ದೆಯು ಆ ಕುಟುಂಬವು ಆರ್ಥಿಕ ನಷ್ಟ ಅನುಭವಿಸದಂತೆ ತಡೆಯುವ ಸಾಧನವಾಗಿದೆ. ಇದನ್ನೇ ತಮ್ಮ ಹಕ್ಕು ಎಂದು ಪ್ರತಿಪಾದಿಸಲು ಸಾಧ್ಯವಿಲ್ಲ. ಮೃತರ ಹೆಸರಿನಲ್ಲಿ ಅವರ ಅವಲಂಬಿತರು ಹುದ್ದೆ ಪಡೆದ ಬಳಿಕ ಬೇಡಿಕೆ ಈಡೇರಿದಂತೆ. ಅವರು ಉನ್ನತ ಹುದ್ದೆಗೆ ಬಡ್ತಿ ನೀಡಬೇಕು ಎಂದು ಕೇಳಲು ಬರುವುದಿಲ್ಲ. ಹೀಗೆ ನೀಡುತ್ತಾ ಹೋದರೆ, ಅನುಕಂಪಕ್ಕೆ ಅಂತ್ಯವೇ ಇಲ್ಲದಂತಾಗುತ್ತದೆ. ಅನುಕಂಪದ ಮೇಲೆ ಪಡೆದ ಸೌಲಭ್ಯವನ್ನು ಉನ್ನತೀಕರಿಸಿಲು ಸಾಧ್ಯವಿಲ್ಲ ಎಂದು ಪೀಠವು ತಿಳಿಸಿದೆ.

ಅನುಕಂಪದ ಆಧಾರದ ಮೇಲೆ ನೀಡಲಾದ ಹುದ್ದೆಯು ಸಾಮಾನ್ಯ ನೇಮಕಾತಿಗಳಿಗಿಂತ ಭಿನ್ನವಾಗಿರುತ್ತದೆ. ನೇಮಕಾತಿ ಸಂಪೂರ್ಣವಾಗಿ ಮಾನವೀಯ ಆಧಾರದ ಮೇಲೆ ಇರುತ್ತದೆ. ಹುದ್ದೆ ಪಡೆದವರಿಗೆ ಹೆಚ್ಚಿನ ಅರ್ಹತೆ ಇದೆ ಎಂಬ ಕಾರಣಕ್ಕೆ ಅವರನ್ನು ಉನ್ನತ ಹುದ್ದೆಗೆ ಪದೋನ್ನತಿ ನೀಡಲು ಅವಕಾಶವಿಲ್ಲ. ಅವರು ಏನೇ ಅರ್ಹತೆ ಹೊಂದಿದ್ದರೂ, ಅದು ಅನುಕಂಪದ ಆಧಾರದ ಮೇಲೆ ಪಡೆದ ಹುದ್ದೆಗೆ ಮಾತ್ರ ಸೀಮಿತವಾಗಿರುತ್ತದೆ ಸಂವಿಧಾನದ 14 ಮತ್ತು 16 ನೇ ವಿಧಿಗಳ ಪ್ರಕಾರ, ಸರ್ಕಾರಿ ಹುದ್ದೆಗಳಿಗೆ ಎಲ್ಲಾ ಆಕಾಂಕ್ಷಿಗಳಿಗೆ ಸಮಾನ ಅವಕಾಶವನ್ನು ಒದಗಿಸಬೇಕು. ಸೇವೆಯಲ್ಲಿರುವ ನೌಕರನ ಮರಣದ ನಂತರ, ಅವಲಂಬಿತ ಕುಟುಂಬ ಸದಸ್ಯರಿಗೆ ಅವರು ಅರ್ಜಿ ಸಲ್ಲಿಸಿದ ಹುದ್ದೆಗೆ ಮಾತ್ರ ನೇಮಕಾತಿ ಮಾಡಲಾಗುತ್ತದೆ. ಈ ನೇಮಕಾತಿ ಹೊಂದುವಾಗ ಯಾವುದೇ ಆಕ್ಷೇಪಣೆ ಇಲ್ಲದೆ ಹುದ್ದೆಗೆ ಸೇರಿರುತ್ತಾರೆ ಎಂದು ಪೀಠವು ಸ್ಪಷ್ಟನೆ ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.