05/03/2026

Law Guide Kannada

Online Guide

ಜಾಗದ ಮೇಲೆ ಶಾಶ್ವತ ನಿರ್ಬಂಧಕಾಜ್ಞೆ ಕೋರಿ ಸಲ್ಲಿಸಿದ್ದ ದಾವೆ ವಜಾ: ಸಿವಿಲ್ ಕೋರ್ಟ್ ಮಹತ್ವದ ಆದೇಶ

ದಕ್ಷಿಣ ಕನ್ನಡ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಅತ್ತಾವರ ಗ್ರಾಮದ ಸರ್ವೆ ನಂ. 278/2ಬಿ ಯಲ್ಲಿನ 33 ಸೆಂಟ್ಸ್ ಜಾಗದ ಮೇಲೆ ಶಾಶ್ವತ ನಿರ್ಬಂಧಕಾಜ್ಞೆ ಕೋರಿ ಸಲ್ಲಿಸಿದ ದಾವೆಯನ್ನು ಮಂಗಳೂರು ಪ್ರಧಾನ ಸಿವಿಲ್ ನ್ಯಾಯಾಲಯವು ವಜಾಗೊಳಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಶಾಖೆಯು ಶಾಶ್ವತ ನಿರ್ಬಂಧಕಾಜ್ಞೆಗಾಗಿ ಸಲ್ಲಿಸಿದ ದಾವೆಯನ್ನು ನ್ಯಾಯಾಲುಯ ಖರ್ಚು ಸಹಿತ ವಜಾಗೊಳಿಸಿದೆ. ಮಂಗಳೂರು ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ರಾಮಲಿಂಗಪ್ಪ ಅವರು ಓ.ಎಸ್.ನಂ. 750/2020 ದಾವೆಯಲ್ಲಿ ನೀಡಿದ ತೀರ್ಪು, ಭೂಮಿಯ ಮಾಲೀಕತ್ವ, ಕಂದಾಯ ದಾಖಲೆಗಳ ಕಾನೂನು ಮೌಲ್ಯ ಮತ್ತು ನಿರ್ಬಂಧಕಾಜ್ಞೆಯ ದಾವೆಗಳ ಕುರಿತಂತೆ ಪ್ರಮುಖ ಕಾನೂನು ತತ್ತ್ವಗಳನ್ನು ಪುನರ್ ದೃಢೀಕರಿಸಿದೆ.

ನ್ಯಾಯಾಲಯವು ಕರ್ನಾಟಕ ಭೂ ಕಂದಾಯ ಅಧಿನಿಯಮದ ಕಲಂ 133 ರ ಅಡಿಯಲ್ಲಿ ಕಂದಾಯ ದಾಖಲೆಗಳ ಪ್ರಾಮಾಣಿಕತೆಯ ಬಗ್ಗೆ ಮಹತ್ವದ ಅವಲೋಕನ ಮಾಡಿದೆ. ಕಂದಾಯ ದಾಖಲೆಗಳಲ್ಲಿ ಇರುವ ನಮೂದನೆಗಳು ಪೂರ್ವಭಾವನೆಯಾಗಿ ಸತ್ಯವಾಗಿರುತ್ತವೆ, ಆದರೆ ಅವು ಅಂತಿಮ ಮಾಲೀಕತ್ವದ ಸಾಕ್ಷ್ಯವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಪ್ರಕರಣದಲ್ಲಿ, ವಾದಿ ಸಂಘವು ಪಹಣಿ ಪತ್ರಿಕೆಗಳು ಮತ್ತು ಖಾತಾ ದಾಖಲೆಗಳನ್ನು ಅವಲಂಬಿಸಿದರೂ, ಅವುಗಳಿಗೆ ಮೂಲ ಆಧಾರವಾದ ಮೈಸೂರು ವಿಭಾಗಾಧಿಕಾರಿಗಳ ಆದೇಶ (DPR 24/56-57) ಅನ್ನು ಹಾಜರುಪಡಿಸಲು ವಿಫಲವಾಯಿತು. ಕೇವಲ ಕಂದಾಯ ದಾಖಲೆಗಳ ಆಧಾರದ ಮೇಲೆ ಮಾಲೀಕತ್ವ ಸ್ಥಾಪಿಸಲಾಗುವುದಿಲ್ಲ ಎಂಬುದು ನ್ಯಾಯಾಲಯದ ಪ್ರಮುಖ ನಿರ್ಣಯವಾಗಿದೆ.

ಪ್ರತಿವಾದಿಗಳು ಹಾಜರುಪಡಿಸಿದ ದಾಖಲೆಗಳು ಮತ್ತು ಗ್ರಾಮ ಕರಣಿಕರರ ವರದಿ ಪ್ರಕಾರ. ವಿವಾದಿತ ಭೂಮಿ ಮೂಲತಃ ಸರ್ಕಾರಿ ಸಾರ್ವಜನಿಕ ಆಸ್ತಿ (ಪೊರಂಬೊಕು) ಆಗಿತ್ತು. ನಂತರದ ಕಂದಾಯ ನಮೂದನೆಗಳು ಮೂಲ ದಾಖಲೆಗಳ ಪರಿಶೀಲನೆಯಿಲ್ಲದೆ ಯಾಂತ್ರಿಕವಾಗಿ ಮಾಡಲ್ಪಟ್ಟವು ಎಂಬುದನ್ನು ನ್ಯಾಯಾಲಯ ಗಮನಿಸಿದೆ. ವಾದಿಯು ಸ್ವಾಧೀನಾನುಭವದಲ್ಲಿದ್ದು, ಮಾಲೀಕತ್ತ ವಿವಾದದಲ್ಲಿಲ್ಲದಿದ್ದರೆ, ಕೇವಲ ಶಾಶ್ವತ ನಿರ್ಬಂಧಕಾಜ್ಞೆ ಕೋರಿ ದಾವೆ ಸಲ್ಲಿಸಬಹುದು. ಆದರೆ, ಮಾಲೀಕತ್ವ ವಿವಾದದಲ್ಲಿದ್ದರೆ ಅಥವಾ ಪ್ರತಿವಾದಿ ಮಾಲೀಕತ್ವವನ್ನು ನಿರಾಕರಿಸಿದರೆ, ವಾದಿಯು ಕಡ್ಡಾಯವಾಗಿ ಮಾಲೀಕತ್ವ ಘೋಷಣೆಯ ಪರಿಹಾರವನ್ನು Declaration) ಜೊತೆಗೆ ನಿರ್ಬಂಧಕಾಜ್ಞೆಯನ್ನು ಕೋರುವಂತಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ

ಈ ಪ್ರಕರಣದಲ್ಲಿ, ವಾದಿಯ ಮಾಲೀಕತ್ವವನ್ನು ಪ್ರತಿವಾದಿಗಳು ಸ್ಪಷ್ಟವಾಗಿ ಅಲ್ಪಗಳೆದಿದ್ದರಿಂದ, ವಾದಿಯು ಘೋಷಣಾತ್ಮಕ ಪರಿಹಾರವನ್ನು ಕೇಳದೇ ಕೇವಲ ನಿರ್ಬಂಧಕಾಜ್ಞೆ ಕೋರಿ ಸಲ್ಲಿಸಿದ ದಾವೆ ತಾಂತ್ರಿಕವಾಗಿ ದೋಷಪೂರ್ಣ ಎಂದು ನ್ಯಾಯಾಲಯ ತೀರ್ಮಾನಿಸಿತು. 1ನೇ ಪ್ರತಿವಾದಿ ಸಂಸ್ಥೆ ಸರ್ಕಾರದ ನಿರ್ದೇಶನದಂತೆ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳುವ ಸಂಸ್ಥೆಯಾಗಿದ್ದರಿಂದ, ಸರ್ಕಾರಿ ಭೂಮಿಯ ಮೇಲೆ ಸರ್ಕಾರದ ಪರ ಕಾರ್ಯನಿರ್ವಹಿಸುವ ಸಂಸ್ಥೆಯ ವಿರುದ್ಧ ಕೇವಲ ನಿರ್ಬಂಧಕಾಜ್ಞೆ ಕೋರಿ ದಾವೆ ಸಲ್ಲಿಸುವುದು ಕಾನೂನುಬದ್ದವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.