ಟ್ರಾಫಿಕ್ ರೂಲ್ ಉಲ್ಲಂಘಿಸಿದಲ್ಲದೆ ನಾನು ಜಡ್ಜ್ ಎಂದು ಸುಳ್ಳು ಹೇಳಿ ಸಂಕಷ್ಟ ತಂದಿಟ್ಟುಕೊಂಡ ವಕೀಲ
ಚಂಡಿಗಢ: ವಕೀಲರೊಬ್ಬರು ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದಲ್ಲದೆ ಪೊಲೀಸರ ಬಳಿ ತಾನು ಜಡ್ಜ್ ಎಂದು ಸುಳ್ಳು ಹೇಳಿ ನಂತರ ಈಗ ಸಂಕಷ್ಟ ತಂದಿಟ್ಟುಕೊಂಡಿದ್ದಾರೆ.
ಹೌದು ವಕೀಲ ಪ್ರಕಾಶ್ ಸಿಂಗ್ ಎನ್ನುವವರು ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ ಸಂದರ್ಭದಲ್ಲಿ ಬಚಾವಾಗಲು ತಾನೊಬ್ಬ ಜುಡೀಷಿಯಲ್ ಮ್ಯಾಜಿಸ್ಟ್ರೇಟ್ ಎಂದು ಸುಳ್ಳು ಹೇಳಿದ್ದು ಇದೀಗ ವಕೀಲ ಪ್ರಕಾಶ್ ಸಿಂಗ್ ಗೆ ಪಂಜಾಬ್ ಮತ್ತು ಹರಿಯಾಣ ವಕೀಲರ ಪರಿಷತ್ತು ನೋಟೀಸ್ ಜಾರಿಗೊಳಿಸಿದ್ದು, ಶಿಸ್ತು ಸಮಿತಿ ಮುಂದೆ ಹಾಜರಾಗಲು ತಾಕೀತು ಮಾಡಲಾಗಿದೆ.
ಪರಿಷತ್ತಿನ ಶಿಸ್ತು ಸಮಿತಿ ಮುಂದೆ ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಬೇಕು. ನಿಗದಿತ ದಿನಾಂಕದಂದು ವಿಚಾರಣೆಗೆ ಹಾಜರಾಗದೇ ಇದ್ದಲ್ಲಿ ಪ್ರಕರಣವನ್ನು ಏಕಪಕ್ಷೀಯ ಎಂದು ಘೋಷಿಲಾಗುವುದು ಎಂದು ಬಾರ್ ಕೌನ್ಸಿಲ್ ವಾರ್ನಿಂಗ್ ನೀಡಿದೆ.
ಏನಿದು ಘಟನೆ
ವಕೀಲ ಪ್ರಕಾಶ್ ಸಿಂಗ್ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದು ಈ ಸಂದರ್ಭದಲ್ಲಿ ಅವರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಪ್ರಕಾಶ್ ಸಿಂಗ್”ನೀವೇಕೆ ನನ್ನನ್ನು ತಡೆದಿರಿ. ನಾನು ನಿಮಗೆ ಲೈಸೆನ್ಸ್ ತೋರಿಸುವುದಿಲ್ಲ. ಸಬ್ ಇನ್ಸಪೆಕ್ಟರ್ ಮಾತ್ರ ನನ್ನ ಲೈಸೆನ್ಸ್ ಕೇಳಬಹುದು” ಎಂದು ಪೊಲೀಸರಿಗೆ ತಿರುಗೇಟು ನೀಡಿದ್ದರು. ಅಲ್ಲದೆ, ತಾನೊಬ್ಬ ಜೆಎಂಎಫ್ ಸಿ ಜಡ್ಜ್ (ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಫಸ್ಟ್ ಕ್ಲಾಸ್) ಎಂದು ಹೇಳಿಕೊಂಡಿದ್ದರು. ಇದಾದ ಬಳಿಕ ವಕೀಲರ ಈ ವಿಡಿಯೋ ವೈರಲ್ ಆಗಿದ್ದು, ತಕ್ಷಣ ಎಚ್ಚೆತ್ತುಕೊಂಡ ರಾಜ್ಯ ವಕೀಲರ ಪರಿಷತ್ತು ನೋಟಿಸ್ ಜಾರಿಗೊಳಿಸಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಚಂಡೀಗಡ ಪೊಲೀಸರು ವಕೀಲ ಪ್ರಕಾಶ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 170, 186 ಹಾಗು 419 ಅಡಿ ಎಫ್ ಐಆರ್ ದಾಖಲಿಸಿದ್ದು ಪ್ರಕಾಶ್ ಸಿಂಗ್ ವಶಕ್ಕೆ ಪಡೆದು ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಪೊಲೀಸರು ದಂಡ ವಿಧಿಸಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
