23/04/2026

Law Guide Kannada

Online Guide

ಕೋರ್ಟ್ ಕಟ್ಟಡ, ಜಡ್ಜ್ ಗಳ ನಿವಾಸಕ್ಕೆ ಆದ್ಯ ಗಮನ ನೀಡಿ, ಅನುದಾನ ಹೆಚ್ಚಿಸಿ- ಸಿಎಂ ಸುಪ್ರೀಂ ನ್ಯಾಯಮೂರ್ತಿ ಮನವಿ

ಬೆಂಗಳೂರು: ಕೋರ್ಟ್ ಕಟ್ಟಡ, ನ್ಯಾಯಾಧೀಶರ ನಿವಾಸಕ್ಕೆ ನ್ಯಾಯಾಂಗಕ್ಕೆ ಅತ್ಯಗತ್ಯ, ಹೀಗಾಗಿ ಇವುಗಳಿಗೆ ಆದ್ಯ ಗಮನ ನೀಡಬೇಕು. ಅನುದಾನವನ್ನು ಹೆಚ್ಚಿಸಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಮನವಿ ಮಾಡಿದರು.

ಬೆಂಗಳೂರಿನ ಜಿಕೆವಿಕೆಯ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ನಡೆದ ನ್ಯಾಯಾಂಗ ಅಧಿಕಾರಿಗಳ ರಾಜಮಟ್ಟದ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ನ್ಯಾಯಮೂರ್ತಿ ಅರವಿಂದ ಕುಮಾರ್, ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕುಗಳಲ್ಲಿ ನ್ಯಾಯಾಂಗ ಕಟ್ಟಡ, ನ್ಯಾಯಾಧೀಶರುಗಳ ನಿವಾಸಕ್ಕೆ ಆದ್ಯ ಗಮನ ನೀಡಬೇಕು. ಇದಕ್ಕೆ ಸರ್ಕಾರ ನೀಡುತ್ತಿರುವ ಅನುದಾನಕ್ಕೆ ಆಧ್ಯತೆ ನೀಡಿ. ಸರ್ಕಾರವು ನ್ಯಾಯಾಂಗದ ಅಭಿವೃದ್ಧಿಗೆ ನೀಡಿರುವ ಅನುದಾನ ಅತ್ಯಂತ ಕಡಿಮೆ. ಹೀಗಾಗಿ, ಹೈಕೋರ್ಟ್ನಿಂದ ಬರುವ ಪ್ರಸ್ತಾವಗಳನ್ನು ಕಡಿತಗೊಳಿಸದೇ, ತ್ವರಿತವಾಗಿ ಅನುಮೋದಿಸಲು ತಕ್ಷಣ ನಿರ್ದೇಶನ ನೀಡಬೇಕು ಎಂದು ಕೋರಿದರು.

ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳು ದೊಡ್ಡ ಪ್ರಮಾಣದಲ್ಲಿ ಆದಾಯ ಸಂಗ್ರಹಿಸುತ್ತಿವೆ. ಅದರ ಕನಿಷ್ಟ ಶೇ.75ರಷ್ಟು ಹಣವನ್ನಾದರೂ ಮರಳಿಸಿ. ರಾಜ್ಯದ ನ್ಯಾಯಾಂಗದ ಅಭಿವೃದ್ಧಿಗೆ ಸರ್ಕಾರ ನೀಡುತ್ತಿರುವ ಅನುದಾನ ಅತ್ಯಂತ ಕಡಿಮೆಯಾಗಿದೆ. ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯ ಸಂಗ್ರಹಿಸಿರುವ ಶೇ.75-80ರಷ್ಮಯ ಹಣವನ್ನಾದರೂ ಮರಳಿಸಬೇಕು ಎಂದು ಅರವಿಂದ ಕುಮಾರ್ ಅವರು ಆಗ್ರಹಿಸಿದರು.

‘ಕಳೆದ ಮೂರು ವರ್ಷಗಳಲ್ಲಿ ನ್ಯಾಯಾಲಯದ ಶುಲ್ಕ ದಂಡ ಮತ್ತು ಸ್ಟ್ಯಾಂಪ್ ಶುಲ್ಕ ಹೊರತುಪಡಿಸಿ ಜಿಲ್ಲಾ ಮತ್ತು ಹೈಕೋರ್ಟ್ 2023-24ರಲ್ಲಿ 376 ಕೋಟಿ, 2024-25ರಲ್ಲಿ 439 ಕೋಟಿ, 2025-26ರಲ್ಲಿ 470 ಕೋಟಿ ಸಂಗ್ರಹವಾಗಿದೆ. ಆದರೆ, ಸಿಬ್ಬಂದಿಗೆ ಸಂಬಳ ಹೊರತುಪಡಿಸಿ ಸರ್ಕಾರವು ನ್ಯಾಯಾಂಗಕ್ಕೆ ಕ್ರಮವಾಗಿ ನೀಡಿರುವುದು 1.03 ಕೋಟಿ, 40 ಲಕ್ಷ ಮತ್ತು 1.37 ಕೋಟಿ, 1.41 ಕೋಟಿ ಮಾತ್ರ. ಇದು ಬಿಡಿಗಾಸುವಲ್ಲ, ನಾವು ಸಂಗ್ರಹಿಸಿರುವ ಶೇ.75-80ರಷ್ಟನ್ನಾದರೂ ಮರಳಿಸಬೇಕು” ಎಂದು ಮನವಿ ಮಾಡಿದರು.

ಕಳೆದ ಎರಡು ವರ್ಷಗಳಲ್ಲಿ ಕಲಬುರ್ಗಿ, ಬೆಂಗಳೂರು, ಧಾರವಾಡ ಪೀಠಗಳಲ್ಲಿ 666 ಹುದ್ದೆಗಳ ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದು, ಅಧಿಕಾರಿಗಳು 238 ಹುದ್ದೆಗಳನ್ನು ಅನುಮೋದಿಸಿದ್ದಾರೆ. ಜಿಲ್ಲಾ ನ್ಯಾಯಾಲಯಗಳಿಗೆ 680 ಹುದ್ದೆಗಳ ಪ್ರಸ್ತಾವ ಕಳುಹಿಸಿದಾಗ ಕೇವಲ 400 ಹುದ್ದೆಗಳನ್ನು ಅನುಮೋದಿಸಲಾಗಿದೆ. ಪ್ರತಿವರ್ಷ ವ್ಯಾಜ್ಯಗಳು ಹೆಚ್ಚಾಗುತ್ತಿದ್ದು, 2023ರಲ್ಲಿ 17 ಲಕ್ಷ ಇದ್ದ ವ್ಯಾಜ್ಯಗಳ ಸಂಖ್ಯೆ 2025ರಲ್ಲಿ 22 ಲಕ್ಷಕ್ಕೆ ಏರಿಕೆಯಾಗಿದೆ. ಹೊಸ ಕಾನೂನುಗಳು ಜಾರಿಯಾಗುತ್ತಿದ್ದು, ಅವುಗಳ ಅಡಿ ನ್ಯಾಯದಾನ ಮಾಡಲು ಮೂಲಸೌಕರ್ಯ ಕಲ್ಪಿಸಲು, ನ್ಯಾಯಾಧೀಶರ ನೇಮಕಾತಿ, ಸರ್ಕಾರಿ ಅಭಿಯೋಜಕರ ನೇಮಕಾತಿ, ನ್ಯಾಯಾಲಯಗಳು ಪ್ರಸ್ತಾವ ಕಳುಹಿಸಿದಾಗ ಅಧಿಕಾರಿಗಳು ಮಂದಿಗತಿಯಲ್ಲಿ ಅಥವಾ ಅದರ ಕಡೆ ಗಮನಹರಿಸದೇ ಬೇಡಿಕೆ ಕಡಿತಗೊಳಿಸಿ. ಅನುಮೋದಿಸಿರುವ ಉದಾಹರಣೆಗಳು ಬೇಕಾದಷ್ಟಿವೆ” ಎಂದು ನ್ಯಾ. ಅರವಿಂದ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.