PTCL ಕಾಯ್ದೆ: ಮಂಜೂರಾತಿ ಷರತ್ತು ಉಲ್ಲಂಘಿಸಿ ನಡೆದ ಮೊದಲ ಮಾರಾಟವೇ ಅಸಿಂಧುಗೊಂಡರೆ ನಂತರದ ಎಲ್ಲ ಮಾರಾಟ ಪ್ರಕ್ರಿಯೆಗಳೂ ರದ್ದು
ಬೆಂಗಳೂರು : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಪಿಟಿಸಿಎಲ್) ಕಾಯ್ದೆಯಡಿ ಮಂಜೂರಾತಿ ಷರತ್ತು ಉಲ್ಲಂಘಿಸಿ ನಡೆದ ಮೊದಲ ಮಾರಾಟವೇ ಅಸಿಂಧುಗೊಂಡರೆ ನಂತರದ ಎಲ್ಲ ಮಾರಾಟ ಪ್ರಕ್ರಿಯೆಗಳೂ ರದ್ದಾಗಲಿವೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಎಸ್.ಕೆ. ಜಯರಾಮ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಎಸ್ ಸಿ-ಎಸ್ಟಿ ಸಮುದಾಯದವರಿಗೆ ಮಂಜೂರಾದ ಭೂಮಿಯ ಮೂಲ ಮಂಜೂರಾತಿ ಷರತ್ತುಗಳನ್ನು ಉಲ್ಲಂಘಿಸಿ ಮಾಡಿದ ಮೊದಲ ಮಾರಾಟವೇ ಅಸಿಂಧುಗೊಂಡರೇ ನಂತರ ನಡೆಯುವ ಎಲ್ಲ ಮಾರಾಟ ಪ್ರಕ್ರಿಯೆಗಳೂ ರದ್ದುಗೊಳ್ಳುತ್ತವೆ ಎಂದು ಸ್ಪಷ್ಟಪಡಿಸಿದೆ.
ಏನಿದು ಪ್ರಕರಣ
1947ರಲ್ಲಿ ಬೆಂಗಳೂರು ಪೂರ್ವ ತಾಲೂಕಿನ ಖಾಜಿ ಸೋನ್ನೆನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 143ರಲ್ಲಿ 6 ಎಕರೆ 15 ಗುಂಟೆ ಭೂಮಿಯನ್ನು ಪರಿಶಿಷ್ಟ ಜಾತಿಗೆ ಸೇರಿದ ಟಿ. ಪೂಜಪ್ಪ ಎಂಬುವರಿಗೆ ಸರ್ಕಾರ ಮಂಜೂರು ಮಾಡಿತ್ತು. ಪೂಜಪ್ಪ ನಿಧನದ ನಂತರ ಆತನ ಪತ್ನಿ ಹಾಗೂ ಅಪ್ರಾಪ್ತ ಪುತ್ರರು 1956ರ ಅಕ್ಟೋಬರ್ 25ರಂದು ಪೂಜಪ್ಪನಿಗೆ ಮಂಜೂರಾಗಿದ್ದ ಜಮೀನಿನಲ್ಲಿ 3 ಎಕರೆ 26 ಗುಂಟೆ ಜಮೀನನ್ನು ಬಸಮ್ಮ ಎಂಬವರಿಗೆ ಮಾರಾಟ ಮಾಡಿದ್ದರು. ಈ ನಡುವೆ ಹಲವು ಸುತ್ತಿನ ಮಾರಾಟದ ಬಳಿಕ ಇದೇ ಜಮೀನನ್ನು ಪದ್ಮಾವತಿ ಎಂಬುವರು ಖರೀದಿಸಿದ್ದರು. ಆನಂತರ ಅದನ್ನು ಅರ್ಜಿದಾರ ಜಯರಾಮ್ ಎಂಬುವವರಿಗೆ 1988ರ ಸೆಪ್ಟೆಂಬರ್ 22ರಂದು ಪದ್ಮಾವತಿ ಅವರು ಮಾರಾಟ ಮಾಡಿದ್ದರು.
ಆದರೆ, ಈ ಮಾರಾಟ ಪ್ರಕ್ರಿಯೆಯು (ಬಸಮ್ಮ ಎಂಬುವರಿಗೆ ಮಾರಾಟ) ಪಿಟಿಸಿಎಲ್ ಕಾಯ್ದೆಯ ಪ್ರಕಾರ ಜಮೀನು ಮಂಜೂರಾತಿ ಸಂದರ್ಭದಲ್ಲಿ ಸರ್ಕಾರ ವಿಧಿಸಿದ್ದ ಷರತ್ತುಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು, ಜಮೀನನ್ನು ಪೂಜಪ್ಪ ಅವರ ವಾರಸುದಾರರಿಗೆ ಹಿಂದಿರುಗಿಸುವಂತೆ ಆದೇಶ ಹೊರಡಿಸಿದ್ದರು.
ಈ ಸಂಬಂಧ ಉಪ ವಿಭಾಗಾಧಿಕಾರಿ, ವಿಶೇಷ ಜಿಲ್ಲಾಧಿಕಾರಿಗಳು ಹಾಗೂ ಹೈಕೋರ್ಟ್ನಲ್ಲಿ ಹಲವು ವರ್ಷಗಳ ವ್ಯಾಜ್ಯ ನಡೆದು ಅಂತಿಮವಾಗಿ ಮತ್ತೆ ಪ್ರಕರಣವನ್ನು ಹೊಸದಾಗಿ ಪರಿಗಣಿಸುವಂತೆ ಹೈಕೋರ್ಟ್, ಉಪ ವಿಭಾಗಾಧಿಕಾರಿಗಳಿಗೆ ವರ್ಗಾಯಿಸಿತ್ತು. ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸಿದ್ದ ಉಪ ವಿಭಾಗಾಧಿಕಾರಿಗಳು, ಜಮೀನನ್ನು ಪೂಜಪ್ಪ ಅವರ ವಾರಸುದಾರರ ಹೆಸರಿಗೆ ಹಿಂದಿರುಗಿಸುವಂತೆ 1998ರ ಆದೇಶವನ್ನು 2024ರಲ್ಲಿ ಎತ್ತಿ ಹಿಡಿದಿದ್ದರು.ಜೊತೆಗೆ 1988ರಲ್ಲಿ ಜಯರಾಮ್ ಅವರು ಮಾಡಿಕೊಂಡಿದ್ದ ಮಾರಾಟ ಕ್ರಯಪತ್ರವನ್ನೂ ರದ್ದುಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಈ ಆದೇಶವನ್ನು ಪ ಪ್ರಶ್ನಿಸಿ ಜಯರಾಮ್ ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿಯನ್ನು ಸಲ್ಲಿಸಿದ್ದರು. ಆದರೆ ಮೇಲ್ಮನವಿ ವಜಾಗೊಂಡಿತ್ತು. ಇದರಿಂದ, ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಆದೇಶ ರದ್ದುಕೋರಿ ಜಯರಾಮ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ಹೈಕೋರ್ಟ್ ನ್ಯಾಯಪೀಠವ ಸಹ ಜಯರಾಮ್ ಅರ್ಜಿಯನ್ನ ವಜಾಗೊಳಿಸಿದೆ. “ಯಾರೂ ಸಹ ತಮಗಿಲ್ಲದ ಹಕ್ಕು ಅಥವಾ ಮಾಲೀಕತ್ವವನ್ನು ಮತ್ತೊಬ್ಬರಿಗೆ ವರ್ಗಾಯಿಸಲು ಸಾಧ್ಯವಿಲ್ಲ’ ಎಂಬ ಕಾನೂನು ತತ್ವವನ್ನು ಉಲ್ಲೇಖಿಸಿರುವ ನ್ಯಾಯಪೀಠ, ವಿವಾದಿತ ಜಮೀನಿನ 1956ರ ಮಾರಾಟ ಪ್ರಕ್ರಿಯೆಯ ಅನಧಿಕೃತ ಎಂದು ಘೋಷಿಸಲಾಗಿದೆ. ಇದರ ಆಧಾರದಲ್ಲಿ, ನಂತರ ನಡೆದ ಎಲ್ಲ ಮಾರಾಟ ಪ್ರಕ್ರಿಯೆಗಳೂ ಶೂನ್ಯವಾಗಲಿದೆ. ಆದ್ದರಿಂದ, ಜಮೀನು ಮಂಜೂರುದಾರರಿಂದ ಹಲವು ಮಾರಾಟಗಳ ಬಳಿಕ ಅರ್ಜಿದಾರ ಜಯರಾಮ್ 1988ರ ಖರೀದಿಸಿರುವ ಪ್ರಕ್ರಿಯೆಯೂ ಕಾನೂನಿನ ಪ್ರಕಾರ ರದ್ದಾಗಲಿದೆ ಎಂದು ಸ್ಪಷ್ಟಪಡಿಸಿದೆ.
ಪಿಟಿಸಿಎಲ್ ಕಾಯ್ದೆಯ ಸೆಕ್ಷನ್ 4(1) ಪ್ರಕಾರ, ಅನುದಾನಿತ ಭೂಮಿಯ ಮಂಜೂರಾತಿ ಷರತ್ತು ಉಲ್ಲಂಘಿಸಿ ವರ್ಗಾವಣೆ ಮಾಡಿದರೆ ಅದು ಸ್ವಯಂ ಅಮಾನ್ಯವಾಗುತ್ತದೆ. ಮೊದಲ ಮಾರಾಟ ರದ್ದಾದ ಕೂಡಲೇ, ಆ ಜಮೀನಿಗೆ ಸಂಬಂಧಿಸಿದ ಎಲ್ಲ ಮುಂದಿನ ವ್ಯವಹಾರಗಳೂ ಕಾನೂನಿನ ದೃಷ್ಟಿಯಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತದೆ. ಆ ವ್ಯವಹಾರದಿಂದ ಯಾವುದೇ ಹಕ್ಕು ಅಥವಾ ಮಾಲೀಕತ್ವ ಉಂಟಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಅರ್ಜಿದಾರರ ಜಮೀನು ಮಾರಾಟ ಪ್ರಕ್ರಿಯೆ ರದ್ದುಪಡಿಸಿ ಉಪ ವಿಭಾಗಾಧಿಕಾರಿಗಳು ಹೊರಡಿಸಿರುವ ಆದೇಶದಲ್ಲಿ ಯಾವುದೇ ಕಾನೂನುಲೋಪ ಕಂಡುಬರುತ್ತಿಲ್ಲ ಎಂದು ತಿಳಿಸಿ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
