23/04/2026

Law Guide Kannada

Online Guide

20 ವರ್ಷಗಳ ನಿರಂತರ ಸೇವೆ: ಅಕ್ರಮ ನೇಮಕಾತಿ ಆಧಾರದ ಮೇಲೆ ಸೇವೆಯಿಂದ ವಜಾಗೊಳಿಸಲು ಸಾಧ್ಯವಿಲ್ಲ- ಹೈಕೋರ್ಟ್

ಭೂಪಾಲ್: ಉದ್ಯೋಗಿಯ ವಿರುದ್ಧ ಮೋಸ ಅಥವಾ ತಪ್ಪು ಮಾಹಿತಿಯ ಆರೋಪಗಳಿಲ್ಲದಿದ್ದಲ್ಲಿ ಎರಡು ದಶಕಗಳಿಗಿಂತ ಹೆಚ್ಚು ಸೇವೆ ಸಲ್ಲಿಸಿರುವ ಉದ್ಯೋಗಿಯನ್ನು, ಅಕ್ರಮ ನೇಮಕಾತಿಯ ಆಧಾರದ ಮೇಲೆ ಸೇವೆಯಿಂದ ವಜಾಗೊಳಿಸಲು ಸಾಧ್ಯವಿಲ್ಲ, ಎಂದು ಮಧ್ಯ ಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ.

ಅರ್ಜಿದಾರರಾದ ಭಗ್ಚಾನದೀನ್ ಅವರು 2017ರಲ್ಲಿ ತಮ್ಮನ್ನು ಸೇವೆಯಿಂದ ತೆಗೆದುಹಾಕಿದ ಕ್ರಮವನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣವನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ವಿವೇಕ್ ರುಸಿಯಾ ಮತ್ತು ಪುದೀಪ್ ಮಿತ್ತಲ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಉದ್ಯೋಗದಾತರ ಆಡಳಿತಾತ್ಮಕ ದೋಷಗಳನ್ನು ಬಹಳ ವರ್ಷಗಳ ನಂತರ ಉದ್ಯೋಗಿಗೆ ಶಿಕ್ಷೆ ವಿಧಿಸಲು ಬಳಸಲಾಗುವುದಿಲ್ಲ, ವಿಶೇಷವಾಗಿ ಆ ನೇಮಕಾತಿಯು ಆ ಕಾಲದಲ್ಲಿ ಪ್ರಚಲಿತದಲ್ಲಿದ್ದ ನಿಯಮಾವಳಿಗಳ ಪ್ರಕಾರ ನಡೆದಿದ್ದರೆ ಹಲವಾರು ವರ್ಷಗಳ ನಂತರ ಉದ್ಯೋಗಿಯನ್ನು ಸೇವೆಯಿಂದ ವಜಾ ಗೊಳಿಸುವಂತಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣದ ವಿವರ
ಅರ್ಜಿದಾರರನ್ನು 1995ರಲ್ಲಿ ಜವಾನ (ಪಿಯೋನ್) ಹುದ್ದೆಗೆ ನೇಮಕ ಮಾಡಲಾಗಿತ್ತು. ಈ ನೇಮಕಾತಿ ಸಂದರ್ಶನ ಹಾಗೂ ಆ ಸಮಯದಲ್ಲಿ ಜಾರಿಗೆ ಇದ್ದ ಅನುಕಂಪದ ನೇಮಕಾತಿ ನೀತಿಯ ಪ್ರಕಾರ ನಡೆದಿತ್ತು. ಅವರ ಮಾವ ಆರೋಗ್ಯ ಹಾಗೂ ವೈಯಕ್ತಿಕ ಕಾರಣಗಳಿಂದ ಸ್ವಯಂ ನಿವೃತ್ತಿ ಪಡೆದ ಸಂದರ್ಭದಲ್ಲಿ, ತಮ್ಮ ಅವಲಂಬಿತ ಕುಟುಂಬ ಸದಸ್ಯರಾಗಿ ಅರ್ಜಿದಾರರನ್ನು ನೇಮಕ ಮಾಡುವಂತೆ ಮನವಿ ಮಾಡಿದ್ದರು.

ಅರ್ಜಿದಾರರ ಪರ ವಕೀಲರು, ನೇಮಕಾತಿ 10 ಜೂನ್ 1994ರ ನೀತಿಯ ಪ್ರಕಾರ ಸಂಪೂರ್ಣವಾಗಿ ಕಾನೂನುಬದ್ಧವಾಗಿ ನಡೆದಿದೆ ಎಂದು ವಾದಿಸಿದರು. ಅವರು ಸರಿಯಾದ ಆಯ್ಕೆ ಪ್ರಕ್ರಿಯೆಗೊಳಗಾಗಿ 22 ವರ್ಷಗಳಿಗೂ ಹೆಚ್ಚು ಕಾಲ ಯಾವುದೇ ದೂರು ಇಲ್ಲದೆ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು. ನಂತರದ 03 ಜನವರಿ 1995ರ ಸರ್ಕ್ಯುಲರ್ ಅನ್ನು ಹಿಂದಿನ ದಿನಾಂಕದಿಂದ (retrospective) ಅನ್ವಯಿಸಿ ನೇಮಕಾತಿಯನ್ನು ಅಮಾನ್ಯಗೊಳಿಸಲಾಗುವುದಿಲ್ಲ ಎಂದೂ ವಾದಿಸಿದರು.

ಇನ್ನೊಂದೆಡೆ, ಸರ್ಕಾರವು ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಹಿನ್ನೆಲೆಯಲ್ಲಿ ನಡೆದ ಪರಿಶೀಲನೆ ಆಧರಿಸಿ ನೇಮಕಾತಿಯಲ್ಲಿ ಅಕ್ರಮತೆಗಳಿವೆ ಎಂದು ಹೇಳಿ ಸೇವೆಯಿಂದ ತೆಗೆದುಹಾಕುವ ಕ್ರಮವನ್ನು ಸಮರ್ಧಿಸಿತು. ವಿಶೇಷವಾಗಿ, ಅರ್ಜಿದಾರರ ಮಾವನನ್ನು ವೈದ್ಯಕೀಯವಾಗಿ ಅಸಮರ್ಥ (medically unfit) ಎಂದು ಘೋಷಿಸಿರುವ ದಾಖಲೆ ಇಲ್ಲವೆಂದು ಸರ್ಕಾರ ವಾದಿಸಿತು.

ಆದರೆ ನ್ಯಾಯಾಲಯವು, ಈ ವಿಷಯವು ಈಗಾಗಲೇ ನಿರ್ಧಾರಗೊಂಡಿರುವ ವಿಷಯವಾಗಿದ್ದು, ಹಿಂದಿನ ತೀರ್ಪುಗಳಲ್ಲಿ ಸ್ಪಷ್ಟವಾಗಿದೆ ಎಂದು ಹೇಳಿತು. ನ್ಯಾಯಾಲಯವು ಅಕ್ರಮ (illegal)” ಮತ್ತು “ಅಕ್ರಮತೆ (irregular)” ನೇಮಕಾತಿಗಳ ನಡುವಿನ ವ್ಯತ್ಯಾಸವನ್ನು ವಿವರಿಸಿತು.

ಕಾನೂನು ನಿಯಮಗಳಿಗೆ ವಿರುದ್ಧವಾಗಿ ನಡೆದ ನೇಮಕಾತಿಗಳನ್ನು ರದ್ದು ಪಡಿಸಬಹುದದು.ಆದರೆ ಕೇವಲ ಪ್ರಕ್ರಿಯಾತ್ಮಕ ದೋಷ (procedural irregularity) ಇರುವ ನೇಮಕಾತಿಗಳನ್ನು ಬಹಳ ವರ್ಷಗಳ ನಂತರ ವಿಶೇಷವಾಗಿ ಉದ್ಯೋಗಿಯ ತಪ್ಪಿಲ್ಲದಿದ್ದಲ್ಲಿ, ರದ್ದು ಪಡಿಸಲಾಗುವುದಿಲ್ಲ.

ಹಿಂದಿನ ತೀರ್ಪನ್ನು ಉಲ್ಲೇಖಿಸಿ ನ್ಯಾಯಾಲಯವು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ.
“ಅರ್ಜಿದಾರರ ನೇಮಕಾತಿ ಅಕ್ರಮವಾಗಿರಲಿಲ್ಲ ಅಥವಾ ಆರಂಭದಿಂದಲೇ ಅಮಾನ್ಯವಾಗಿರಲಿಲ್ಲ; ಹೆಚ್ಚಾದರೆ ಅದು ಕೇವಲ ಒಂದು ಅಕ್ರಮತೆಯನ್ನು ಹೊಂದಿತ್ತು. ಅವರು ಸುಮಾರು 25 ವರ್ಷಗಳ ಸೇವೆ

ಸಲ್ಲಿಸಿದ ನಂತರ, ಆ ಅಕ್ರಮತೆ ಸ್ವಯಂ ಸರಿಯಾಗಿದೆ’
ಇದಲ್ಲದೆ, ಕರ್ನಾಟಕ ರಾಜ್ಯ ವಿರುದ್ದ ಉಮಾದೇವಿ ತೀರ್ಪಿನ ಪ್ರಕಾರ, ಬಹಳ ವರ್ಷಗಳ ನಂತರ ಸ್ಥಿರಗೊಂಡ ನೇಮಕಾತಿಗಳನ್ನು ಮರುತೆರೆಯುವುದನ್ನು ಸುಪ್ರೀಂ ಕೋರ್ಟ್ ವಿರೋಧಿಸಿದೆ ಎಂದು ನ್ಯಾಯಾಲಯ ಸೂಚಿಸಿತು.

ಮುಖ್ಯವಾಗಿ, “ಮಗನ ಮಗಳು ಸಹಾನುಭೂತಿ ನೇಮಕಾತಿಗೆ ಅರ್ಹಳಲ್ಲ” ಎಂಬ ಸರ್ಕಾರದ ವಾದವನ್ನೂ ನ್ಯಾಯಾಲಯ ತಿರಸ್ಕರಿಸಿತು. ನೀತಿಯ ಪ್ರಕಾರ, ಸಮೀಪ ಸಂಬಂಧಿಕರನ್ನು ನೇಮಕ ಮಾಡಲು ಅವಕಾಶವಿದೆ ಎಂದು ಹೇಳಿತು. ಈ ಪ್ರಕರಣದಲ್ಲಿ, ಮಾವನು ಸ್ವಯಂ ನಿವೃತ್ತಿ ಪಡೆಯುವಾಗ ಅರ್ಜಿದಾರರನ್ನು ನೇಮಕ ಮಾಡಲಾಗುತ್ತದೆ ಎಂಬ ವಿಶ್ವಾಸದ ಮೇಲೆ ಕ್ರಮ ಕೈಗೊಳ್ಳಲಾಗಿತ್ತು.

ವೈದ್ಯಕೀಯ ಪ್ರಮಾಣಪತ್ರದಂತಹ ಕ್ರಮಾತ್ಮಕ ಅವಶ್ಯಕತೆಗಳನ್ನು ಪಾಲಿಸದಿದ್ದರೆ, ಅದರ ಹೊಣೆಗಾರಿಕೆ ಉದ್ಯೋಗಿಯ ಮೇಲೆ ಹಾಕಲಾಗುವುದಿಲ್ಲ; ಅದು ಉದ್ಯೋಗದಾತರ ದೋಷವಾಗಿದ್ದು, ಅದರ ಆಧಾರದ ಮೇಲೆ ಹಲವಾರು ವರ್ಷಗಳ ನಂತರ ಉದ್ಯೋಗಿಯನ್ನು ಶಿಕ್ಷಿಸುವುದು ನ್ಯಾಯಸಮ್ಮತವಲ್ಲ ಎಂದು ಹೈಕೋರ್ಟ್ ಹೇಳಿದೆ.

ಅಂತಿಮವಾಗಿ, ನ್ಯಾಯಾಲಯವು ಅರ್ಜಿಯನ್ನು ಅಂಗೀಕರಿಸಿ 2017ರ ಸೇವೆಯಿಂದ ತೆಗೆದುಹಾಕುವ ಆದೇಶವನ್ನು ರದ್ದು ಪಡಿಸಿ, ಅರ್ಜಿದಾರರನ್ನು ಮರು ನೇಮಕ ಮಾಡಲು ಆದೇಶಿಸಿತು. ಆದರೆ, ಅವರಿಗೆ ಹಿಂದಿನ ವೇತನ (back wages) ನೀಡಲಾಗುವುದಿಲ್ಲ, ಆದರೆ ಇತರ ಎಲ್ಲಾ ಸೇವಾ ಮತ್ತು ಬಡ್ತಿ ಪ್ರಯೋಜನಗಳನ್ನು ಕಾನೂನಿನ ಪ್ರಕಾರ ನೀಡಬೇಕು ಎಂದು ಸ್ಪಷ್ಟಪಡಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.