ಹಣ ವಸೂಲಾತಿಗಾಗಿ ಸಿವಿಲ್ ದಾವೆ, ಚೆಕ್ ಬೌನ್ಸ್ ಕೇಸ್ ಎರಡನ್ನೂ ಏಕಕಾಲದಲ್ಲಿ ದಾಖಲಿಸಬಹುದೇ..?
ಬೆಂಗಳೂರು: ಹಣ ವಸೂಲಾತಿಗಾಗಿ ಸಿವಿಲ್ ವ್ಯಾಜ್ಯ ಮತ್ತು ವರ್ಗಾವಣೀಯ ಪತ್ರಗಳ ಕಾಯ್ದೆ (ಎನ್.ಐ. ಕಾಯ್ದೆ) ಸೆಕ್ಷನ್ 138 ಅಡಿಯಲ್ಲಿ ಸಲ್ಲಿಸುವ ಕ್ರಿಮಿನಲ್ ದೂರು ಎರಡನ್ನೂ ಏಕಕಾಲದಲ್ಲಿ ಮುಂದುವರಿಸಲು ಯಾವುದೇ ಅಡ್ಡಿ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟನೆ ನೀಡಿದೆ.
ತನಗೆ ಬರಬೇಕಿರುವ ಬಾಕಿ ಹಣದ ವಸೂಲಾತಿಗಾಗಿ ಸಿವಿಲ್ ದಾವೆ ಹೂಡುವ ಜೊತೆಜೊತೆಗೆ ಚೆಕ್ ಬೌನ್ಸ್ ಪ್ರಕರಣವನ್ನೂ ದಾಖಲಿಸಬಹುದು ಎಂದು ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಸಿಆರ್ಇಎಫ್ ಫೈನಾನ್ಸ್ ಲಿಮಿಟೆಡ್ ವಿರುದ್ಧ ಶ್ರೀ ಶಾಂತಿ ಹೋಮ್ಸ್ ಪ್ರೈ. ಲಿ. ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪು ಮತ್ತು ಡಿ. ಪುರುಷೋತ್ತಮ ರೆಡ್ಡಿ ವಿರುದ್ಧ ಕೆ. ಸತೀಶ್ ಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ತೀವ್ರವಾಗಿ ಅವಲಂಬಿಸಿದ ನ್ಯಾಯಪೀಠವು, ಒಂದೇ ವ್ಯಾಜ್ಯ ಕಾರಣದಿಂದ ಉಂಟಾದ ಸಿವಿಲ್ ವ್ಯಾಜ್ಯ ಮತ್ತು ಚೆಕ್ ಅಮಾನ್ಯ ಪ್ರಕರಣ ಎರಡನ್ನೂ ಏಕಕಾಲದಲ್ಲಿ ಮುಂದುವರಿಸಬಹುದಾಗಿದೆ ಎಂದು ಹೇಳಿದೆ.
ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಸೆಕ್ಷನ್ 138 ಅಡಿಯಲ್ಲಿ ಸಲ್ಲಿಸುವ ದೂರು ಚೆಕ್ ಅಮಾನ್ಯ ಕೃತ್ಯಕ್ಕೆ ದಂಡನಾತ್ಮಕ ಕ್ರಮ ಕೈಗೊಳ್ಳುವುದಕ್ಕಾಗಿ ಸಲ್ಲಿಸಿದ್ದು, ಸಿವಿಲ್ ದಾವೆಯು ಸಾಮಾನ್ಯ ಕಾನೂನಿನ ಅಡಿಯಲ್ಲಿ ಹಣ ವಸೂಲಾತಿಗಾಗಿ ಸಲ್ಲಿಸಲಾಗುತ್ತದೆ. ಎರಡೂ ಪ್ರಕರಣಗಳ ಉದ್ದೇಶಗಳು ವಿಭಿನ್ನವಾಗಿರುವುದರಿಂದ, ಅವುಗಳನ್ನು ಸಮಕಾಲೀನವಾಗಿ ಮುಂದುವರಿಸಲು ಯಾವುದೇ ಅಡಚಣೆ ಇಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ಸ್ಪಷ್ಟಪಡಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
