ಜಡ್ಜ್ ಮನೆಯಲ್ಲೇ ಮತ್ತೋರ್ವ ಜಡ್ಜ್ ರಿಂದ ಕಳ್ಳತನ: ವ್ಯವಸ್ಥೆಗೆ ಕಪ್ಪುಚುಕ್ಕೆ– ಕೋರ್ಟ್ ತೀವ್ರ ಅಸಮಾಧಾನ
ಪಟಿಯಾಲ: ಮೃತ ನ್ಯಾಯಾಧೀಶರ ಮನೆಯಲ್ಲೇ ಮತ್ತೋರ್ವ ನ್ಯಾಯಾಧೀಶರು ಕಳ್ಳತನ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದ್ದು ಈ ಸಂಬಂಧ ಆರೋಪಿ ನ್ಯಾಯಾಧೀಶರಿಗೆ ಜಾಮೀನು ನೀಡಲು ಪಟಿಯಾಲ ನ್ಯಾಯಾಲಯವು ನಿರಾಕರಿಸಿದೆ.ಅಲ್ಲದೆ ಇದು ನ್ಯಾಯಾಂಗ ವ್ಯವಸ್ಥೆಗೆ ಕಪ್ಪು ಚುಕ್ಕೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಸಿವಿಲ್ ನ್ಯಾಯಾಧೀಶ ಬಿಕ್ರಮ್ದೀಪ್ ಸಿಂಗ್ ಎಂಬುವವರ ವಿರುದ್ದವೇ ಮೃತ ಮತ್ತೊಬ್ಬ ಜಡ್ಜ್ ಅವರ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ ಗಂಭೀರ ಆರೋಪ ಕೇಳಿ ಬಂದಿದ್ದು ಪಟಿಯಾಲ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ.ಮೃತ ನ್ಯಾಯಾಧೀಶರ ಮಗ ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿಗೆ ಈ ಪ್ರಕರಣದ ತನಿಖೆಯನ್ನು ವಹಿಸಲಾಗಿದೆ.
ಕಳೆದ ವರ್ಷದ ಆಗಸ್ಟ್ 1ರಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕನ್ವಲ್ಜಿತ್ ಸಿಂಗ್ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರು ಮೃತಪಟ್ಟ ದಿನವೇ ರಾತ್ರಿ ಅವರ ನಿವಾಸಕ್ಕೆ ತೆರಳಿದ್ದ ಬಿಕ್ರಮ್ದೀಪ್ ಸಿಂಗ್, ಅಲ್ಲಿಂದ ಬೆಲೆಬಾಳುವ ಚಿನ್ನದ ಆಭರಣಗಳನ್ನು ಕದ್ದಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರಿಂದರ್ ಸಿಧು, ನ್ಯಾಯಾಂಗದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೇ ಇಂತಹ ಕೃತ್ಯ ಎಸಗಿರುವುದು ವ್ಯವಸ್ಥೆಗೆ ಕಪ್ಪುಚುಕ್ಕೆ. ಆರೋಪಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದು, ಸಹೋದ್ಯೋಗಿಯ ಮನೆಯಲ್ಲೇ ಕಳ್ಳತನ ಮಾಡಿರುವುದನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಆರೋಪಿ ನ್ಯಾಯಾಧೀಶರ ಪರ ವಕೀಲರು ಘಟನೆ ನಡೆದು ಸುಮಾರು 7 ತಿಂಗಳ ನಂತರ ದೂರು ದಾಖಲಿಸಲಾಗಿದೆ ಎಂದು ವಾದಿಸಿದ್ದರೂ, ದೂರುದಾರರು ಸಲ್ಲಿಸಿರುವ ಸಿಸಿಟಿವಿ ದೃಶ್ಯಾವಳಿಗಳು ಪ್ರಕರಣಕ್ಕೆ ಹೊಸ ತಿರುವು ನೀಡಿವೆ. ಪೆನ್ ಡ್ರೈವ್ನಲ್ಲಿರುವ ವಿಡಿಯೋದಲ್ಲಿ ಸಿವಿಲ್ ನ್ಯಾಯಾಧೀಶ ಬಿಕ್ರಮ್ ದೀಪ್ ಸಿಂಗ್ ಅವರು ಕೆಲವು ಪೆಟ್ಟಿಗೆ ಮತ್ತು ಚೀಲಗಳನ್ನು ಹಿಡಿದುಕೊಂಡು ಮೃತ ನ್ಯಾಯಾಧೀಶರ ಮನೆಯೊಳಗೆ ಹೋಗುವುದು ಮತ್ತು ಹೊರಬರುವುದು ಸ್ಪಷ್ಟವಾಗಿ ದಾಖಲಾಗಿದೆ. ಈ ಭದ್ರತಾ ಕ್ಯಾಮೆರಾ ದೃಶ್ಯಗಳೇ ಈಗ ಜಾಮೀನು ನಿರಾಕರಿಸಲು ಪ್ರಮುಖ ಕಾರಣವಾಗಿವೆ.
ಮೃತ ನ್ಯಾಯಾಧೀಶರ ಪುತ್ರ ಅಂಗದ್ ಪಾಲ್ ಸಿಂಗ್ ನೀಡಿರುವ ದೂರಿನ ಪ್ರಕಾರ, ತಂದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಾಗ ಇಡೀ ಕುಟುಂಬ ಅಲ್ಲಿಯೇ ಇತ್ತು. ಈ ಸಂದರ್ಭವನ್ನು ಬಳಸಿಕೊಂಡ ಬಿಕ್ರಮ್ದೀಪ್ ಸಿಂಗ್, ಮನೆ ಕೆಲಸದವಳು ಮತ್ತು ಮತ್ತೊಬ್ಬ ಸರ್ಕಾರಿ ಅಧಿಕಾರಿಯ ಜೊತೆ ಸೇರಿ ಮನೆಗೆ ನುಗ್ಗಿ ಪೂರ್ವಜರ ಕಾಲದ ಒಡವೆಗಳನ್ನು ದೋಚಿದ್ದಾರೆ. ಬಿಕ್ರಮ್ ದೀಪ್ ಅವರು ಮೃತ ನ್ಯಾಯಾಧೀಶರ ಸ್ನೇಹಿತರಾಗಿದ್ದರಿಂದ ಮನೆಗೆ ಬರುತ್ತಿದ್ದರು, ಆದರೆ ಆ ದಿನದ ಅವರ ನಡವಳಿಕೆ ಸಂಶಯಾಸ್ಪದವಾಗಿತ್ತು ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
