02/05/2026

Law Guide Kannada

Online Guide

ಮಹಿಳಾ ದಿನ ಆಚರಿಸಿದ್ದಕ್ಕೆ ಅಮಾನತು : ವಕೀಲರ ಸಂಘಕ್ಕೆ ಹೈಕೋರ್ಟ್ ಛೀಮಾರಿ

ಬೆಂಗಳೂರು: ‘ಸಂಘದ ಪೂರ್ವಾನುಮತಿ ಪಡೆಯದೆ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಿದ್ದಾರೆಂಬ ಕಾರಣಕ್ಕೆ ನಾಲ್ವರು ಮಹಿಳಾ ವಕೀಲರನ್ನು ಸಂಘದ ಸದಸ್ಯತ್ವದಿಂದ ಅಮಾನತುಗೊಳಿಸಿದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ವಕೀಲರ ಸಂಘಕ್ಕೆ ಹೈಕೋರ್ಟ್ ತರಾಟೆ ತೆಗೆದುಕೊಂಡು ಛೀಮಾರಿ ಹಾಕಿದೆ.

‘ಸರೋಜಮ್ಮ ಸೇರಿದಂತೆ ನಾಲ್ವರು ಮಹಿಳಾ ವಕೀಲರು ಕೆ.ಆರ್.ಪೇಟೆ ಕೋರ್ಟ್ ಸಂಕೀರ್ಣದಲ್ಲಿ 2026ರ ಮಾರ್ಚ್ 9ರಂದು ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಮಹಿಳಾ ದಿನ ಆಚರಿಸಿದ್ದರು. ಈ ಕಾರ್ಯಕ್ರಮ ನಡೆಸುವ ಮುನ್ನ ಅರ್ಜಿದಾರರು ಸಂಘದ ಅನುಮತಿ ಪಡೆದಿಲ್ಲ. ಈ ಮೂಲಕ ಸಂಘ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ’ ಎಂಬ ಕಾರಣ ನೀಡಿ ಕೆ.ಆರ್.ಪೇಟೆ ವಕೀಲರ ಸಂಘ ಅರ್ಜಿದಾರರನ್ನು ಆರು ತಿಂಗಳ ಕಾಲ ಸಂಘದ ಸದಸ್ಯತ್ವದಿಂದ ಅಮಾನತು ಮಾಡಿ 2026ರ ಮಾರ್ಚ್ 6ರಂದು ಆದೇಶಿಸಿತ್ತು.

ಈ ಅಮಾನತು ಆದೇಶ ಪ್ರಶ್ನಿಸಿ ಹಿರಿಯ ವಕೀಲೆ ನ್.ಡಿ.ಸರೋಜಮ್ಮ, ಎಂ.ಎನ್.ವಾಣಿ, ಕೆ.ಮಂಜುಳಾ ಹಾಗೂ ಎಚ್.ಆರ್.ರಮ್ಯಾ ಅವರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠವು ವಕೀಲರ ಸಂಘದ ಅಮಾನತು ಆದೇಶಕ್ಕೆ ತಡೆ ನೀಡಿ ಚಾಟಿ ಬೀಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹೈಕೋರ್ಟ್ ವಕೀಲ ಎಂ.ಎಸ್.ನಾಗರಾಜ ಅವರು, ‘ಸಂಘದ ಪದಾಧಿಕಾರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂಬ ಕಾರಣಕ್ಕೆ ದಂಡಿಸಲಾಗಿದೆ. ಅರ್ಜಿದಾರರನ್ನು ನ್ಯಾಯಾಲಯಕ್ಕೆ ಹಾಜರಾಗದಂತೆ ತಡೆಯಲಾಗುತ್ತಿದೆ. ಶೌಚಾಲಯ ಬಳಕೆಗೂ ನಿರಾಕರಿಸಲಾಗಿದೆ’ ಎಂದು ಆರೋಪಿಸಿದರು.

ಈ ಮಾತು ಆಲಿಸಿದ ನ್ಯಾಯಪೀಠವು ಕೆ.ಆರ್.ಪೇಟೆ ವಕೀಲರ ಸಂಘದ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡಿತು. ‘ಯಾರು ಸಂಘದ ಕಾರ್ಯದರ್ಶಿ? ಏನಾಗಿದೆ ಅವರಿಗೆ? ಇನ್ನು ಮುಂದೆ ಸಂಘದ ಕಾರ್ಯದರ್ಶಿಯೇ ಪ್ರತಿ ವರ್ಷ ತನ್ನ ಸ್ವಂತ ಖರ್ಚಿನಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸುವಂತೆ ಆದೇಶಿಸಲಾಗುವುದು’ ಎಂದು ಕ್ಲಾಸ್ ತೆಗೆದುಕೊಂಡಿತು.

‘ಮಹಿಳಾ ವಕೀಲರು ಮಹಿಳಾ ದಿನಾಚರಣೆ ಏಕೆ ಆಚರಿಸಬಾರದು’ ಎಂದು ಪ್ರಶ್ನಿಸಿದ ನ್ಯಾಯಪೀಠ, ‘ಸಂಘ ಮತ್ತು ಪದಾಧಿಕಾರಿಗಳು ಈ ರೀತಿಯ ಪ್ರತೀಕಾರದ ಚಟುವಟಿಕೆಗಳಿಂದ ದೂರವಿರಬೇಕು. ಸದಸ್ಯತ್ವದಿಂದಲೇ ಅಮಾನತುಗೊಳಿಸುವುದು ಮಹಿಳಾ ವಕೀಲರಿಗೆ ಮಾಡುವ ಅಪಮಾನ ಎಂದು ಅಸಮಾಧಾನ ವ್ಯಕ್ತಪಡಿಸಿತು.

‘ಮೇಲ್ನೋಟಕ್ಕೆ ಲಭ್ಯವಿರುವ ಸಾಕ್ಷ್ಯಗಳನ್ನು ಗಮನಿಸಿದರೆ ಕೆ.ಆರ್.ಪೇಟೆ ವಕೀಲರ ಸಂಘದ ಪದಾಧಿಕಾರಿಗಳ ಈ ಕ್ರಮ ದ್ವೇಷದಿಂದ ಕೂಡಿರುವಂತೆ ಕಂಡು ಬರುತ್ತದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ ಅಮಾನತು ಆದೇಶಕ್ಕೆ ತಡೆ ನೀಡಿ ‘ಸಂಘದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಮುಂದಿನ ವಿಚಾರಣೆಯವರೆಗೆ ಅರ್ಜಿದಾರರಿಗೆ ನಿರಾಕರಿಸದಂತೆ ಪದಾಧಿಕಾರಿಗಳು ನೋಡಿಕೊಳ್ಳತಕ್ಕದ್ದು’ ಎಂದು ಆದೇಶಿಸಿತು.

ಅರ್ಜಿಗೆ ಸಂಬಂಧಿಸಿದಂತೆ ಮಂಡ್ಯ ಸಹಕಾರ ಸಂಘಗಳ ಉಪ ನಿಬಂಧಕರು, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಹಾಗೂ ಕೆ.ಆರ್.ಪೇಟೆ ವಕೀಲರ ಸಂಘಕ್ಕೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.