6 ತಿಂಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸದಿದ್ರೆ ಅಮಾನತು ರದ್ದು- ಹೈಕೋರ್ಟ್
ಬೆಂಗಳೂರು: ಇಲಾಖಾ ವಿಚಾರಣೆಗೆ ಸಂಬಂಧಿಸಿದಂತೆ 6 ತಿಂಗಳಲ್ಲಿ ಆರೋಪಪಟ್ಟಿ ಸಲ್ಲಿಸದಿದ್ದರೆ ಅಮಾನತು ರದ್ದಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಹಿರಿಯ ಸಹಾಯಕರಾಗಿದ್ದ ಶಂಕರ್ ಯಮನಪ್ಪ ತಳವಾರ, ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು, ಆರು ತಿಂಗಳ ಅವಧಿ ಮುಗಿದ ಬಳಿಕವೂ ಯಾವುದೇ ಇಲಾಖಾ ವಿಚಾರಣೆಯು ಆರೋಪಪಟ್ಟಿಯ ಮೂಲಕ ಆರಂಭವಾಗದ ಕಾರಣ, ಕಾನೂನಿನ ಪ್ರಕಾರ ಅಮಾನತು ಸ್ವಯಂಚಾಲಿತವಾಗಿ ರದ್ದಾಗುವುದು ಎಂದು ಸ್ಪಷ್ಟಪಡಿಸಿದೆ.
ರಿಟ್ ಅರ್ಜಿದಾರರಿಗೆ ಸೇವಾ ನಿಯೋಜನೆ ನೀಡುವಂತೆ ಮ್ಯಾಂಡಮಸ್ ಆದೇಶ ಹೊರಡಿಸುವ ವೇಳೆ, ಯಾವುದೇ ಆರೋಪಪಟ್ಟಿ (charge sheet) ನೀಡದೆ ಅಮಾನತನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸುವ ಮೂಲಕ ನೌಕರರನ್ನು “ಚರಾಸ್ತಿ (chattels)” ಗಳಂತೆ ಪರಿಗಣಿಸಲು ಸಾಧ್ಯವಿಲ್ಲ. ಇಂತಹ ನಡೆ ಸೇವಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಟೀಕಿಸಿದೆ.
ಕರ್ನಾಟಕ ಸಿವಿಲ್ ಸರ್ವೀಸಸ್ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ತಿದ್ದುಪಡಿ ಮಾಡಲಾದ ನಿಯಮ 10(5)(b) ಅನ್ನು ವ್ಯಾಖ್ಯಾನಿಸಿದ ನ್ಯಾಯಾಲಯ, ಪ್ರಾರಂಭಿಕ ಆರು ತಿಂಗಳ ಅವಧಿ ಮುಗಿದ ದಿನಾಂಕದಿಂದಲೇ ಅಮಾನತು “ಕಾನೂನು ಬದ್ಧವಾಗಿ ರದ್ದಾದಂತಾಗಿದೆ. ದೀರ್ಘಕಾಲದ ಅಮಾನತಿನ ವಿರುದ್ಧ ಕಾನೂನಿನಲ್ಲಿ ನೀಡಿರುವ ರಕ್ಷಣಾತ್ಮಕ ಕ್ರಮಗಳು ಕೇವಲ ಆಚರಣೆಯ ವಿಧಿಗಳು ಅಲ್ಲ; ಅವು ಕಟ್ಟುನಿಟ್ಟಿನ ಕಾನೂನುಬದ್ದ ಆದೇಶಗಳಾಗಿವೆ ಎಂದು ತಿಳಿಸಿತು.
ವಿಚಾರಣೆ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು , ಮಂಡಳಿಯ ಈ ನಡೆ ಕಾನೂನು ಪ್ರಭುತ್ವದ ಬಗ್ಗೆ ಗಂಭೀರ ನಿರ್ಲಕ್ಷ್ಯವನ್ನು ತೋರಿಸುತ್ತದೆ. ನಿಯಮ 10(5)(b) ಇದರ ಬಾಧ್ಯತೆಯ ಸ್ವರೂಪವನ್ನು ಕಡೆಗಣಿಸಿ, ಕೇವಲ ಆರು ತಿಂಗಳ ಅವಧಿ ಮುಗಿದ ಕೂಡಲೇ, ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳದಿದ್ದರೆ ಅಮಾನತು ಸ್ವಯಂ ರದ್ದಾಗುತ್ತದೆ ಎಂಬ ಸ್ಪಷ್ಟ ನಿಯಮವನ್ನು ಮಂಡಳಿ ಕೇವಲ ಔಪಚಾರಿಕತೆಯಂತೆ ನೋಡಿಕೊಂಡಿದೆ ಎಂದರು.
ಸಕ್ಷಮ ಪ್ರಾಧಿಕಾರವು ತನ್ನ ಅಧಿಕಾರವನ್ನು ಮನಬಂದಂತೆ ಬಳಸಲು ಸಾಧ್ಯವಿಲ್ಲ; ನೌಕರರನ್ನು ತನ್ನ ಚರಾಸ್ತಿಯಂತೆ ಅಥವಾ ಸಂಸ್ಥೆಯನ್ನು ವೈಯಕ್ತಿಕ ಜಾಗೀರಿನಂತೆ ಪರಿಗಣಿಸಲು ಆಗುವುದಿಲ್ಲ. ಮಂಡಳಿ ಕಾನೂನಿನ ಶಿಸ್ತಿಗೆ ಬದ್ಧವಾಗಿದೆ. ಆದ್ದರಿಂದ ನಿಯಮ 10(5)(b) ಗೆ ವಿಭಾಗೀಯ ಪೀಠಗಳು ನೀಡಿರುವ ಅರ್ಥವ್ಯಾಖ್ಯಾನವು ಅರ್ಜಿದಾರನ ಪ್ರಯೋಜನಕ್ಕೆ ಅನ್ವಯಿಸಬೇಕು ಎಂದು ನ್ಯಾಯಪೀಠವು ತಿಳಿಸಿತು.
ಸುಮಾರು 30 ತಿಂಗಳ ವಿಳಂಬಕ್ಕೆ ಸ್ಪಷ್ಟನೆ ಕೇಳಿದ ನಂತರ ಮಾತ್ರ ಕೆಐಎಡಿಬಿ 2025ರ ಏಪ್ರಿಲ್ ನಲ್ಲಿ ಆರೋಪಪಟ್ಟಿ ನೀಡಿತು. ಮಂಡಳಿ, CID ತನಿಖೆ ಬಾಕಿ ಇದೆ ಮತ್ತು ಅಪರಾಧ ಮೊಕದ್ದಮೆ ಹೂಡುವ ಅನುಮತಿ ಬೇಕಾಗಿದೆ ಎಂಬ ಕಾರಣಗಳನ್ನು ಮುಂದಿಟ್ಟಿತು.
ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಪೀಠವು ಪ್ರಾರಂಭಿಕ ಆರು ತಿಂಗಳ ಅವಧಿ ಮುಗಿದ ದಿನಾಂಕದಿಂದಲೇ ಅಮಾನತು ರದ್ದಾದಂತಾಗಿದೆ ಎಂದು ಘೋಷಿಸಿತು. ಹಾಗೂ ಆ ದಿನಾಂಕದಿಂದಲೇ ಅರ್ಜಿದಾರರಿಗೆ ಎಲ್ಲಾ ಅನುಕ್ರಮ ಸೇವಾ ಸೌಲಭ್ಯಗಳನ್ನು ನೀಢುವತೆ ಆದೇಶಿಸಿತು.
ಏನಿದು ಪ್ರಕರಣ
KIADB ಯ ಹಿರಿಯ ಸಹಾಯಕರಾಗಿದ್ದ ಅರ್ಜಿದಾರ ಶಂಕರ್ ಯಮನಪ್ಪ ತಳವಾರ ಅವರು ಹಣಕಾಸು ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ 19 ಡಿಸೆಂಬರ್ 2022ರಂದು ಅಮಾನತುಗೊಳಿಸಲ್ಪಟ್ಟಿದ್ದರು. ಎರಡು ವರ್ಷಕ್ಕಿಂತ ಹೆಚ್ಚು ಕಾಲ ಕಳೆದರೂ ಮಂಡಳಿ ಆರೋಪಪಟ್ಟಿ ಸಲ್ಲಿಸದೇ, ಇಲಾಖಾ ವಿಚಾರಣೆ ಆರಂಭಿಸಿರಲಿಲ್ಲ. ಅರ್ಜಿದಾರರು 2023ರ ಜೂನ್ನಲ್ಲಿ ಅಮಾನತು ರದ್ದುಪಡಿಸಲು ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರ ಶಂಕರ್ ಯಮನಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
