19/06/2026

Law Guide Kannada

Online Guide

ವಕೀಲರ ವಿರುದ್ಧ ಕ್ರಿಮಿನಲ್ ಅಸ್ತ್ರ ಆಘಾತಕಾರಿ: ವಕೀಲಿಕೆ ಘನತೆ ಕುಗ್ಗಿಸಲು ಸಾಧ್ಯವಿಲ್ಲ- ಹೈಕೋರ್ಟ್

ಬೆಂಗಳೂರು: ‘ದಾವೆದಾರರ ಪರವಾಗಿ ಹಾಜರಾಗುವ ವಕೀಲರ ವಿರುದ್ಧ ಎದುರು ಪಕ್ಷದ ಅತೃಪ್ತ ದಾವೆದಾರರು ಕ್ರಿಮಿನಲ್ ಕಾನೂನನ್ನು ಬೆದರಿಕೆಯ ಅಸ್ತ್ರವಾಗಿ ಬಳಸುವ ಮೂಲಕ ವಕೀಲಿಕೆಯ ಘನತೆ ಕುಗ್ಗಿಸಲು ಮುಂದಾದರೆ ಅಂತಹ ಕುಕೃತ್ಯಕ್ಕೆ ಸುತಾರಾಂ ಅವಕಾಶ ನೀಡುವುದಿಲ್ಲ. ಅತೃಪ್ತ ಎದುರು ಪಕ್ಷಗಾರರ ಇಂತಹ ಪ್ರವೃತ್ತಿ ಆಘಾತಕಾರಿಯಾದದ್ದು ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.

‘ನನ್ನ ವಿರುದ್ಧ ನಗರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಸೀಮಾ ದಾಖಲಿಸಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ವಕೀಲ ಪ್ರದೀಪ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಅರ್ಜಿದಾರ ಪ್ರದೀಪ್ ಅವರ ವಿರುದ್ಧ ದಾಖಲಿಸಿರುವ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ಮತ್ತು ಎಫ್ಐಆರ್ ರದ್ದುಗೊಳಿಸಿತು.

‘ದಾವೆದಾರರ ಪರವಾಗಿ ಹಾಜರಾಗುವ ವಕೀಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಅವರು ನ್ಯಾಯಿಕ ವಿಚಾರಣೆಯಲ್ಲಿ ಪ್ರತಿನಿಧಿಸದೆ ಹಿಂದೆ ಸರಿಯುವಂತೆ ಮಾಡುವ ಅತೃಪ್ತ ಎದುರು ಪಕ್ಷಗಾರರ ಪ್ರವೃತ್ತಿ ಆಘಾತಕಾರಿಯಾದದ್ದು’ ಎಂದು ನ್ಯಾಯಪೀಠ ಕಿಡಿಕಾರಿತು.

ಪ್ರಕರಣದ ಪ್ರತಿವಾದಿಯಾಗಿರುವ ಎಚ್.ಸೀಮಾ ಅವರ ಎದುರುದಾರರನ್ನು ಪ್ರತಿನಿಧಿಸುತ್ತಿದ್ದ ಪ್ರದೀಪ್ ವಿರುದ್ಧ ಸುಳ್ಳು ಆರೋಪ ಹೊರಿಸಿದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ‘ಸಾರ್ವಜನಿಕ ಸೇವಕರು ಈ ರೀತಿಯಲ್ಲಿ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಹೋಗುವ ಅನಿಷ್ಟ ಪ್ರವೃತ್ತಿಯು, ವೃತ್ತಿಪರ ಜವಾಬ್ದಾರಿಗಳನ್ನು ನಿರ್ಭೀತವಾಗಿ ನಿರ್ವಹಿಸುವ ವಕೀಲ ವೃಂದದ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು. ವೃತ್ತಿಪರ ಜವಾಬ್ದಾರಿಗಳನ್ನು ನಿರ್ವಹಿಸುವ ಮತ್ತು ನ್ಯಾಯಾಲಯಗಳಲ್ಲಿ ಪಕ್ಷಗಳನ್ನು ಪ್ರತಿನಿಧಿಸುವ ವಕೀಲರನ್ನು ಕ್ರಿಮಿನಲ್ ವಿಚಾರಣೆಗಳಿಗೆ ಎಳೆತಂದು ಅವರನ್ನು ಆರೋಪಿಗಳನ್ನಾಗಿ ಬಿಂಬಿಸಿರುವ ಸೀಮಾ ಅವರು ಭವಿಷ್ಯದಲ್ಲಿ ಇಂತಹ ಯಾವುದೇ ನಡವಳಿಕೆಯನ್ನು ಪುನರಾವರ್ತನೆ ಮಾಡಿದರೆ ಕಟ್ಟುನಿಟ್ಟಾದ ನ್ಯಾಯಾಂಗ ಪರಿಶೀಲನೆಗೆ ಅರ್ಹವಾಗುತ್ತಾರೆ’ ಎಂದು ಎಚ್ಚರಿಕೆ ನೀಡಿತು.

‘ವಕೀಲರು ನ್ಯಾಯಾಲಯದ ಅಧಿಕಾರಿಗಳು. ಅವರು ತಮ್ಮ ವೃತ್ತಿಪರತೆಯ ಕರ್ತವ್ಯದ ಮಿತಿಯೊಳಗೆ ಮತ್ತು ತಮ್ಮ ಕಕ್ಷಿದಾರರ ಸೂಚನೆಗಳ ಮೇರೆಗೆ ಕಾರ್ಯ ನಿರ್ವಹಿಸುತ್ತಾರೆ. ಕಾನೂನಿನ ನಾಲ್ಕು ಮೂಲೆಗಳಲ್ಲಿ ದಾವೆಯ ಸಕಾರಣಗಳನ್ನು ಪ್ರಸ್ತುತಪಡಿಸಿ ನ್ಯಾಯ ಒದಗಿಸಲು ಶ್ರಮಿಸುತ್ತಾರೆ. ಇಂತಹವರ ವಿರುದ್ಧ ಎದುರು ಪಕ್ಷದ ಅತೃಪ್ತ ದಾವೆದಾರರು ಕ್ರಿಮಿನಲ್ ಕಾನೂನನ್ನು ಬೆದರಿಕೆಯ ಅಸ್ತ್ರವಾಗಿ ಬಳಸುವ ಮೂಲಕ ವಕೀಲಿಕೆಯ ಘನತೆ ಕುಗ್ಗಿಸಲು ಮುಂದಾದರೆ ಅಂತಹ ಕುಕೃತ್ಯಕ್ಕೆ ಸುತಾರಾಂ ಅವಕಾಶ ನೀಡುವುದಿಲ್ಲ’ ಎಂದು ನ್ಯಾಯಪೀಠ ಎಚ್ಚರಿಸಿದೆ.

ಏನಿದು ಪ್ರಕರಣ..
ನಗರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೀಮಾ ಅವರ ಕೌಟುಂಬಿಕ ಕಲಹದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಪ್ರದೀಪ್ ಅವರು ಸೀಮಾ ಅವರ ಪತಿಯ ಪರ ವಕಾಲತ್ತು ವಹಿಸಿ ಪ್ರಕರಣ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸೀಮಾ ಅವರು ಪ್ರದೀಪ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 336(2) (ಸುಳ್ಳು ಅಥವಾ ನಕಲಿ ದಾಖಲೆ ಸೃಷ್ಟಿಸುವುದು), 336(3) (ವಂಚನೆ ಮಾಡುವ ಉದ್ದೇಶದಿಂದ ನಕಲಿ ದಾಖಲೆ ಅಥವಾ ಎಲೆಕ್ಟ್ರಾನಿಕ್ ದಾಖಲೆಯನ್ನು ಸೃಷ್ಟಿಸುವ ಅಥವಾ ಬದಲಾಯಿಸುವ ಗಂಭೀರ ಅಪರಾಧ) ಮತ್ತು 340ರ (ನಕಲಿ ದಾಖಲೆ ಅಥವಾ ಎಲೆಕ್ಟ್ರಾನಿಕ್ ದಾಖಲೆಗಳನ್ನು ಸೃಷ್ಟಿಸುವುದು ಮತ್ತು ಅವುಗಳನ್ನು ಅಸಲಿ ಎಂದು ಬಳಸುವುದು) ಎಫ್ಐಆರ್ ದಾಖಲಿಸಿದ್ದರು.

ಬಳಿಕ ‘ತಮ್ಮ ವಿರುದ್ಧ 2024 ಅಕ್ಟೋಬರ್ 8ರಂದು ದಾಖಲಾಗಿರುವ ಎಫ್ಐಆರ್ ಮತ್ತು ಇದಕ್ಕೆ ಸಂಬಂಧಿಸಿದಂತೆ 41ನೇ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿನ ವಿಚಾರಣೆ ರದ್ದುಪಡಿಸಬೇಕು’ ಎಂದು ಅರ್ಜಿದಾರ ಪ್ರದೀಪ್ ಅವರು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಅವರ ಪರ ಪದಾಂಕಿತ ಹಿರಿಯ ವಕೀಲ ಡಿ.ಆರ್.ರವಿಶಂಕರ್ ವಾದ ಮಂಡಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.