19/06/2026

Law Guide Kannada

Online Guide

ಹೈಕೋರ್ಟ್ನ ನೂತನ ಕಟ್ಟಡ ನಿರ್ಮಾಣ: ಶೀಘ್ರವೇ ಟರ್ಫ್ ಕ್ಲಬ್ ಜಮೀನು ಮಂಜೂರು

ಬೆಂಗಳೂರು: ಹೈಕೋರ್ಟ್’ಹೊಸ ಕಟ್ಟಡ ನಿರ್ಮಾಣಕ್ಕಾಗಿ ಬೆಂಗಳೂರಿನ ಟರ್ಫ್ ಕ್ಲಬ್ ಜಮೀನನ್ನು ಆದಷ್ಟು ಶೀಘ್ರ ಮಂಜೂರು ಮಾಡುವ ಇಚ್ಛೆ ಹೊಂದಿದ್ದೇವೆ. ಈ ಕುರಿತಂತೆ ಟರ್ಫ್ ಕ್ಲಬ್ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಲಾಗುವುದು ಎಂದು ಹೈಕೋರ್ಟ್ ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಈ ಸಂಬಂಧ ಅಫಜಲಪೂರ ಕ್ಷೇತ್ರದ ಮಾಜಿ ಶಾಸಕ ಹಣಮಂತರಾವ್ ದೇಸಾಯಿ ಅವರ ಪುತ್ರ ಶರಣ ದೇಸಾಯಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸುವ ವೇಳೆ ರಾಜ್ಯ ಸರ್ಕಾರದ ಪರ ಅಡ್ವಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.

‘ನೂತನ ಹೈಕೋರ್ಟ್ ಕಟ್ಟಡ ನಿರ್ಮಾಣಕ್ಕಾಗಿ ನಗರದ ಹೃದಯಭಾಗದಲ್ಲಿರುವ ಟರ್ಫ್ ಕ್ಲಬ್ ಜಮೀನನ್ನು ಆದಷ್ಟು ಶೀಘ್ರವೇ ಮಂಜೂರು ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ .ಈ ಕುರಿತಂತೆ ಟರ್ಫ್ ಕ್ಲಬ್ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಲಾಗುವುದು’ ಎಂದು ಎಜಿ ಶಶಿಕಿರಣ್ ಶೆಟ್ಟಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ‘ಹೊಸ ಕಟ್ಟಡವು ಭವಿಷ್ಯದಲ್ಲಿ 30 ರಿಂದ 50 ವರ್ಷಗಳ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ ನಿರ್ಮಾಣವಾಗುವಂತಿರಬೇಕು’ ಎಂದು ಆಶಯವನ್ನು ಮೌಖಿಕವಾಗಿ ವ್ಯಕ್ತಪಡಿಸಿತು.

ಇದಕ್ಕೆ ಉತ್ತರಿಸಿದ ಶಶಿಕಿರಣ ಶೆಟ್ಟಿ, ‘ಪ್ರಸ್ತುತ, ಸ್ಥಳಾವಕಾಶ ಮತ್ತು ಭವಿಷ್ಯದ ಅಗತ್ಯಗಳನ್ನು ಪರಿಗಣಿಸಲಾಗುವುದು. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಫ್ಲೋರ್ ಏರಿಯಾ ರೇಷ್ಮೆ (ಎಫ್ಎಆರ್ಎ-ನೆಲದ ವಿಸ್ತೀರ್ಣದ ಅನುಪಾತ) ವಿನಾಯಿತಿ ಸೇರಿದಂತೆ ಹಲವು ಕಾನೂನು ಅಡೆತಡೆಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ’. ಹೆಚ್ಚಿನ ವಿವರಗಳನ್ನು ತಿಳಿಸಲು ಒಂದು ವಾರ ಅಥವಾ ಹತ್ತು ದಿನಗಳ ಕಾಲಾವಕಾಶ ನೀಡಬೇಕು’ ಎಂದು ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ವಿಚಾರಣೆಯನ್ನು ಜುಲೈ 13ಕ್ಕೆ ಮುಂದೂಡಿತು.

2025ರ ಅಕ್ಟೋಬರ್ 26ರಂದು ‘ಕಬ್ಬನ್ ಪಾರ್ಕ್ನಲ್ಲಿ ನಡೆದ ‘ವಾಕ್ ವಿಥ್ ಬೆಂಗಳೂರು’ ನಾಗರಿಕ ಸಂಪರ್ಕ ಕಾರ್ಯಕ್ರಮದಲ್ಲಿ ಅಂದಿನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಕರ್ನಾಟಕ ಹೈಕೋರ್ಟ್ನ ಈಗಿರುವ ಕಟ್ಟಡ, ಸ್ಥಳಾವಕಾಶದ ಕೊರತೆ ಎದುರಿಸುತ್ತಿದೆ. ಹಾಗಾಗಿ, ಈ ಕಟ್ಟಡವನ್ನು ನಗರದ ಪ್ರಮುಖ ಭಾಗದಲ್ಲಿನ ಹೊಸ ಮತ್ತು ವಿಶಾಲವಾದ ಜಾಗಕ್ಕೆ ಸ್ಥಳಾಂತರಿಸುವ ಬಗ್ಗೆ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಭರವಸೆ ನೀಡಿದ್ದ ಬಗ್ಗೆ ವರದಿಯನ್ನು ಅರ್ಜಿದಾರರು ಉಲ್ಲೇಖಿಸಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.