19/06/2026

Law Guide Kannada

Online Guide

ಕೇಸ್ ಇತ್ಯರ್ಥಗೊಂಡ 3 ವರ್ಷಗಳ ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿಗೆ ಬಿತ್ತು ದಂಡದ ಬರೆ

ಬೆಂಗಳೂರು: ಲೋಕ ಅದಾಲತ್ ನಲ್ಲಿ ಭೂವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡ ನಂತರ ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿಗೆ 25 ಸಾವಿರ ರೂ. ದಂಡದ ಬರೆ ಬಿದ್ದಿದೆ.

2021ರ ಆಗಸ್ಟ್ 14ರಂದು ಚಿಕ್ಕಮಗಳೂರಿನ ತರೀಕೆರೆಯ ಹಿರಿಯ ಸಿವಿಲ್ ನ್ಯಾಯಾಲಯ ಲೋಕ ಅದಾಲತ್ ನಲ್ಲಿ ಇತ್ಯರ್ಥವಾಗಿದೆ ಎಂದು ಸಂಧಾನ ಅರ್ಜಿಯನ್ನು ಪುರಸ್ಕರಿಸಿ ಸಿವಿಲ್ ದಾವೆ ರದ್ದುಪಡಿಸಿ ಆದೇಶ ನೀಡಿತ್ತು. ಈ ಆದೇಶವನ್ನು ರದ್ದುಕೋರಿ ಚೇತನ್ ಕುಮಾರ್ ಎಂಬುವವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಈ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ನ್ಯಾಯಪೀಠ ಸೋಮವಾರ ವಜಾಗೊಳಿಸಿದೆ.

ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರ, ಸಂಧಾನ ಅರ್ಜಿಯನ್ನು ನ್ಯಾಯಾಲಯದ ಮುಂದೆ ಸಲ್ಲಿಕೆ ಮಾಡಿದಾಗ ಅದೇ ನ್ಯಾಯಾಲಯ ಅದನ್ನು ದಾಖಲಿಸಿಕೊಳ್ಳಬೇಕೆ ಹೊರತು ಅದನ್ನು ಲೋಕ ಅದಾಲತ್ ಗೆ ವರ್ಗಾಯಿಸಬಾರದು ಎಂದು ರೇಣುಕಾ ಪ್ರಕರಣದಲ್ಲಿ ಹೈಕೋರ್ಟ್ ಆದೇಶಿಸಿದೆ ಎಂದು ಅರ್ಜಿದಾರರು ಎಂದಿದ್ದರು. ಆದರೆ, ರೇಣುಕಾ ಪ್ರಕರಣದ ತೀರ್ಪು 2022ರಲ್ಲಿ ಬಂದಿದ್ದು, ಹಾಲಿ ಪ್ರಕರಣದ ಸಂಧಾನ 2021ರಲ್ಲಿ ನಡೆದಿದೆ. ಆದ್ದರಿಂದ, ರೇಣುಕಾ ಪ್ರಕರಣದ ತೀರ್ಪು ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿತು.

ಸಂಧಾನ ಪತ್ರದಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜಿದಾರರಲ್ಲಿ ವಿಚಾರಿಸಲಾಗಿದೆ. ಆಗ ಅರ್ಜಿದಾರರು ವಕೀಲರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ, ಇಲ್ಲಿ ಸಲ್ಲಿಸಲಾಗಿರುವ ಹಾಲಿ ಅರ್ಜಿಯು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಿದೆ. ಅರ್ಜಿದಾರರು ಸಂಧಾನ ಅರ್ಜಿಗೆ ಸಹಿ ಹಾಕಿದ್ದು, ಆನಂತರ ಅದರ ಫಲವನ್ನೂ ಪಡೆದಿದ್ದಾರೆ. ಈಗ 3 ವರ್ಷಗಳ ಬಳಿಕ ಸಂಧಾನವನ್ನು ಪ್ರಶ್ನಿಸಿದ್ದಾರೆ. ಆದ್ದರಿಂದ, 25 ಸಾವಿರ ರೂ. ದಂಡ ವಿಧಿಸಿ ಅರ್ಜಿ ವಜಾಗೊಳಿಸಲಾಗಿದೆ. ದಂಡದ ಮೊತ್ತವನ್ನು 4 ವಾರಗಳಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಬೇಕು. ಜುಲೈ 14ರೊಳಗೆ ದಂಡ ಪಾವತಿಸದಿದ್ದರೆ ಪ್ರಾಧಿಕಾರವು ಭೂಕಂದಾಯ ಹಿಂಬಾಕಿ ಎಂದು ಅದನ್ನು ವಸೂಲಿ ಮಾಡಬಹುದು ಎಂದು ನ್ಯಾಯಪೀಠ ತಿಳಿಸಿದರು.

ಅರ್ಜಿದಾರನಿಗೆ ನ್ಯಾಯಪೀಠ ಚಾಟಿ
ವಿಚಾರಣೆ ವೇಳೆ ನ್ಯಾಯಪೀಠವು ಅರ್ಜಿದಾರನಿಗೆ ಚಾಟಿ ಬೀಸಿದ್ದು, ಲೋಕ ಅದಾಲತ್ ಗೆ ಹೋಗಿ ಸಹಿ ಮಾಡಿ, ಆನಂತರ ಸಂಧಾನ ಪತ್ರದಲ್ಲಿ ವಿಚಾರ ಗೊತ್ತಿರಲಿಲ್ಲ ಎಂದರೆ ಹೇಗೆ? ಕಾನೂನು ಪ್ರಕ್ರಿಯೆ ಆರಂಭಿಸಲು ನ್ಯಾಯಾಲಯ ಮುಂದಾಗಬೇಕೆ? ಎಂದು ಪ್ರಶ್ನಿಸಿತು.

ಈ ಪ್ರಕರಣವನ್ನು ವಕೀಲರ ಪರಿಷತ್ ಗೆ ಕಳುಹಿಸಲಾಗುವುದು. ವಕೀಲರು ಸಂಧಾನದ ಬಗ್ಗೆ ನಿಮಗೆ ಮಾಹಿತಿ ನೀಡಿರಲಿಲ್ಲ ಎನ್ನುವ ವಿಚಾರ ಕುರಿತು ತನಿಖೆಗಾಗಿ ಪ್ರಕರಣವನ್ನು ಕಳುಹಿಸಲಾಗುವುದು. ರಾಜಿ ಮಾಡಿಕೊಂಡು ಇಲ್ಲಿ ಈ ರೀತಿ ವಾದಿಸುತ್ತಾರಲ್ಲಾ? ಅವರನ್ನು ಏನೆಂದುಕೊಂಡಿದ್ದಾರೆ? ಇದು ನ್ಯಾಯಾಲಯವನ್ನು ಮೀರುವ ಯತ್ನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.