ತಂದೆಯ ಆಸ್ತಿಯಲ್ಲಿ ಮಕ್ಕಳಿಗೆ ಜನ್ಮಸಿದ್ಧ ಹಕ್ಕಿದೆಯೋ..? ಇಲ್ಲವೋ..? ಮಹತ್ವದ ತೀರ್ಪು ಪ್ರಕಟಿಸಿದ ಹೈಕೋರ್ಟ್
ಬೆಂಗಳೂರು: ಕುಟುಂಬದ ಆಸ್ತಿ ಮತ್ತು ವಾರಸುದಾರರ ಹಕ್ಕುಗಳ ಕುರಿತು ದೇಶದ ಮೂಲೆ ಮೂಲೆಗಳಲ್ಲೂ ಜಗಳ ವಿವಾದಗಳು ನಡೆಯುತ್ತಲೇ ಇವೆ. ಆಸ್ತಿಗಾಗಿ ಹೆತ್ತ ತಂದೆ ತಾಯಿಯನ್ನೇ ಕೊಲೆ ಮಾಡುವ ದುರಂತ ಪರಿಸ್ಥಿತಿ ಇಂದಿನ ಸಮಾಜದಲ್ಲಿದೆ. ಈ ಮಧ್ಯೆ ‘ತಾತ-ಮುತ್ತಾತರಿಂದ ಬಂದ ಆಸ್ತಿಯಾದ್ದರಿಂದ ನನಗೂ ಹುಟ್ಟಿನಿಂದಲೇ ಪಾಲು ಸಿಗುತ್ತದೆ’ ಎಂಬ ನಂಬಿಕೆ ಹಲವರಲ್ಲಿದೆ. ಹೀಗಾಗಿ ತಂದೆಯ ಆಸ್ತಿಯಲ್ಲಿ ಮಕ್ಕಳಿಗೆ ಜನ್ಮಸಿದ್ಧ ಹಕ್ಕಿದೆಯೇ ?ಇಲ್ಲವೇ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣವೊಂದರ ವಿಚಾರಣೆ ನಡೆಸಿದ ಹೈಕೋರ್ಟ್ ತಂದೆಗೆ ತಾತನಿಂದ ವಾರಸುದಾರರಾಗಿ ಬಂದ ಪ್ರತಿಯೊಂದು ಆಸ್ತಿಯಲ್ಲೂ ಮಕ್ಕಳಿಗೆ ಜನ್ಮಸಿದ್ಧ ಹಕ್ಕು ಇರುವುದಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ. ತಾತನ ಸ್ವಯಂ ಸಂಪಾದಿತ ಆಸ್ತಿ ವಾರಸುದಾರರ ಮೂಲಕ ತಂದೆಗೆ ಬಂದರೂ ಅದು ಸ್ವಯಂಚಾಲಿತವಾಗಿ ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ. ಹೀಗಾಗಿ, ಅಂತಹ ಆಸ್ತಿಯಲ್ಲಿ ಮಕ್ಕಳಿಗೆ ಹುಟ್ಟಿನಿಂದಲೇ ಪಾಲು ಸಿಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
‘ಉಷಾ ಎನ್. ಸ್ವಾಮಿ ವಿರುದ್ಧ ಎಂ. ವೆಂಕಟಸ್ವಾಮಿ ಮತ್ತು ಇತರರು’ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಹಾಗೂ ಟಿ.ಎಂ. ನಾದಾಫ್ ಅವರಿದ್ದ ವಿಭಾಗೀಯ ಪೀಠವು ಈ ತೀರ್ಪು ಪ್ರಕಟಿಸಿದೆ. ನೀಡಿದೆ. ಈ ಪ್ರಕರಣದಲ್ಲಿ ಉಷಾ ಎನ್. ಸ್ವಾಮಿ ಅವರು ತಮ್ಮ ತಾತನ ಆಸ್ತಿಯಲ್ಲಿ ಸಮಾನ ಪಾಲು ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ತಾತನ ನಿಧನದ ಬಳಿಕ ಆಸ್ತಿ ತಮ್ಮ ತಂದೆಗೆ ಬಂದಿರುವುದರಿಂದ ಅದು ಪಿತ್ರಾರ್ಜಿತ ಆಸ್ತಿಯಾಗಿದ್ದು, ತಾವು ಸಹದಾಯಾದಿಯಾಗಿರುವ ಕಾರಣ ಜನ್ಮಸಿದ್ಧ ಹಕ್ಕು ಹೊಂದಿದ್ದೇವೆ ಎಂದು ಅವರು ವಾದಿಸಿದ್ದರು.ಆದರೆ, ಈ ವಾದವನ್ನು ಹೈಕೋರ್ಟ್ ನ್ಯಾಯಪೀಠವು ತಿರಸ್ಕರಿಸಿದೆ.
ತಂದೆಗೆ ತನ್ನ ತಂದೆಯಿಂದ ಬಂದ ಆಸ್ತಿ ಎಂಬ ಕಾರಣಕ್ಕೆ ಮಾತ್ರ ಅದು ಸ್ವಯಂ ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ. ಆ ಆಸ್ತಿ ಮೂಲತಃ ಸ್ವಯಂ ಸಂಪಾದಿತ ಆಗಿದ್ದರೆ, ಅದು ವಾರಸುದಾರರ ಮೂಲಕ ಮಗನಿಗೆ ಬಂದರೂ ಕೂಡ ಮಗನ ವೈಯಕ್ತಿಕ ಆಸ್ತಿಯಾಗಿಯೇ ಉಳಿಯುತ್ತದೆ. ಇಂತಹ ಆಸ್ತಿಯಲ್ಲಿ ಮಕ್ಕಳಿಗೆ ಜನ್ಮಸಿದ್ಧ ಹಕ್ಕು ಇರುವುದಿಲ್ಲ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.
ಒಬ್ಬ ವ್ಯಕ್ತಿ ತನ್ನ ಸ್ವಂತ ಆದಾಯ ಅಥವಾ ಪರಿಶ್ರಮದಿಂದ ಸಂಪಾದಿಸಿದ ಆಸ್ತಿಯನ್ನು ಸ್ವಯಂ ಸಂಪಾದಿತ ಆಸ್ತಿ (Self-acquired Property) ಎಂದು ಕರೆಯಲಾಗುತ್ತದೆ. ಅಂತಹ ವ್ಯಕ್ತಿ ನಿಧನರಾದ ಬಳಿಕ ಆಸ್ತಿ ಅವರ ಮಗನಿಗೆ ವಾರಸುದಾರರಾಗಿ ಬಂದರೂ, ಅದು ಮಗನ ವೈಯಕ್ತಿಕ ಆಸ್ತಿಯಾಗಿಯೇ ಉಳಿಯುತ್ತದೆ. ಕೇವಲ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಆಸ್ತಿ ವರ್ಗಾವಣೆಯಾಯಿತು ಎಂಬ ಕಾರಣಕ್ಕೆ ಅದು ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಈ ಪ್ರಕರಣದಲ್ಲಿ ತಾತನೇ ಆಸ್ತಿಯನ್ನು ಸ್ವತಃ ಖರೀದಿಸಿದ್ದರಿಂದ ಅದು ಅವರ ಸ್ವಯಂ ಸಂಪಾದಿತ ಆಸ್ತಿ ಆಗಿತ್ತು. ಬಳಿಕ ಕುಟುಂಬದ ಒಪ್ಪಂದ (Family Arrangement) ಅಥವಾ ಹಂಚಿಕೆಯ ಮೂಲಕ ತಂದೆಗೆ ಬಂದ ಕಾರಣ, ಆ ಆಸ್ತಿ ತಂದೆಯ ವೈಯಕ್ತಿಕ ಆಸ್ತಿಯಾಗಿಯೇ ಮುಂದುವರಿಯುತ್ತದೆ. ಹೀಗಾಗಿ, ಅಂತಹ ಆಸ್ತಿಯಲ್ಲಿ ಮಕ್ಕಳಿಗೆ ಜನ್ಮಸಿದ್ಧ ಪಾಲು ಅಥವಾ ಹಕ್ಕು ಇರುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
