24/07/2026

Law Guide Kannada

Online Guide

ಕಕ್ಷಿದಾರರ ವೃತ್ತಿಪರ ಶುಲ್ಕ ವಸೂಲಿಗೆ ರಿಟ್ ಅರ್ಜಿ ಸಾಧ್ಯವಿಲ್ಲ: ಸಿವಿಲ್ ಕೋರ್ಟ್ ಅನ್ನೇ ಆಶ್ರಯಿಸಿ – ಹೈಕೋರ್ಟ್

ಚೆನ್ನೈ: ರಿಟ್ ಅಧಿಕಾರವು ಅಸಾಧಾರಣ ಸಾರ್ವಜನಿಕ ಕಾನೂನು ಪರಿಹಾರವಾಗಿದೆ. ಹೀಗಾಗಿ ವಕೀಲರು ಕಕ್ಷಿದಾರರಿಂದ ತಮ್ಮ ವೃತ್ತಿಪರ ಶುಲ್ಕವನ್ನು ವಸೂಲಿ ಮಾಡಲು ಸಿವಿಲ್ ನ್ಯಾಯಾಲಯವನ್ನೇ ಆಶ್ರಯಿಸಬೇಕು. ರಿಟ್ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.

ಸುನಿತ್ ಕುಮಾರ್ ಅಗರ್ವಾಲ್ ಎಂಬುವವರು ಪಂಜಾಬ್ ನ್ಯಾಷನಲ್ ಬ್ಯಾಂಕಿನ ಪ್ಯಾನೆಲ್ ವಕೀಲರಾಗಿದ್ದು, ತಮ್ಮ ಬಾಕಿ ವೃತ್ತಿಪರ ಶುಲ್ಕ ಮತ್ತು ವೆಚ್ಚಗಳಾದ 6,80,412 ರೂ. ನಂತರ ಮೇಲ್ಮನವಿಯಲ್ಲಿ 10,00,628 ರೂ.ಗೆ ಹೆಚ್ಚಿಸಲಾದ ಮೊತ್ತವನ್ನು ಪಾವತಿಸುವಂತೆ ಬ್ಯಾಂಕಿಗೆ ನಿರ್ದೇಶನ ನೀಡುವಂತೆ ರಿಟ್ ಅರ್ಜಿ ಸಲ್ಲಿಸಿದ್ದರು. ಏಕಸದಸ್ಯ ನ್ಯಾಯಮೂರ್ತಿಯವರು ಆ ಅರ್ಜಿಯನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ಅವರು ಮೇಲ್ಮನವಿ ಸಲ್ಲಿಸಿದ್ದರು.

ಈ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಧರ್ಮಾಧಿಕಾರಿ ಹಾಗೂ ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರಿದ್ದ ವಿಭಾಗೀಯ ಪೀಠವು, ವಕೀಲರ ಬಾಕಿ ವೃತ್ತಿಪರ ಶುಲ್ಕದ ಪಾವತಿಗೆ ಸಂಬಂಧಿಸಿದ ವಿವಾದಗಳು ಸಾರ್ವಜನಿಕ ಕಾನೂನಿನ ವ್ಯಾಪ್ತಿಗೆ ಬರುವುದಿಲ್ಲ. ಅವು ಖಾಸಗಿ ನಾಗರಿಕ (ಸಿವಿಲ್) ಸ್ವರೂಪದ ವಿವಾದಗಳಾಗಿವೆ. ಆದ್ದರಿಂದ, ಕಕ್ಷಿದಾರರಿಂದ ಬಾಕಿ ವೃತ್ತಿಪರ ಶುಲ್ಕವನ್ನು ವಸೂಲಿ ಮಾಡಿಕೊಳ್ಳಲು ವಕೀಲರು ರಿಟ್ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.

ರಿಟ್ ಅಧಿಕಾರವು ಅಸಾಧಾರಣ ಸಾರ್ವಜನಿಕ ಕಾನೂನು ಪರಿಹಾರವಾಗಿದೆ. ಇದು ಸಂವಿಧಾನಾತ್ಮಕ ಉಲ್ಲಂಘನೆಗಳು, ಸಾರ್ವಜನಿಕ ಕರ್ತವ್ಯದ ವೈಫಲ್ಯಗಳು ಹಾಗೂ ರಾಜ್ಯದ ಅಧಿಕಾರದ ಅನಿಯಂತ್ರಿತ ಮತ್ತು ಮನಬಂದ ಬಳಕೆಯನ್ನು ತಿದ್ದುವ ಉದ್ದೇಶಕ್ಕಾಗಿ ಮಾತ್ರವವಾಗಿದೆ. ವಾಣಿಜ್ಯ ಅಥವಾ ವೃತ್ತಿಪರ ಒಪ್ಪಂದಗಳಿಂದ ಉಂಟಾಗುವ ಹಣದ ವಸೂಲಾತಿಗೆ ರಿಟ್ ಅರ್ಜಿ ಪರ್ಯಾಯ ಮಾರ್ಗವಲ್ಲ. ಒಪ್ಪಂದದ ವಿಷಯದಲ್ಲಿ ರಿಟ್ ಅಧಿಕಾರವನ್ನು ಬಳಸಬೇಕಾದರೆ, ಪ್ರತಿವಾದಿಯು ತನ್ನ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ, ಸ್ಪಷ್ಟವಾಗಿ ಮತ್ತು ಯಾವುದೇ ಸಂದೇಹವಿಲ್ಲದಂತೆ ಒಪ್ಪಿಕೊಂಡಿರಬೇಕು ಹಾಗೂ ಅದರ ಜೊತೆಗೆ ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುವಂತಹ ಸ್ಪಷ್ಟ ಮತ್ತು ಆಘಾತಕಾರಿ ಸ್ಟೇಚ್ಛಾಚಾರ ಇರಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರ ವಕೀಲರು, ತಾವು ಬ್ಯಾಂಕಿನ ಸಂಪೂರ್ಣ ತೃಪ್ತಿಗೆ ಸೇವೆ ಸಲ್ಲಿಸಿದ್ದು, ಬಾಕಿ ಮೊತ್ತ ವಿವಾದಾತೀತವಾಗಿದೆ. ಕೆಲವು ಬ್ಯಾಂಕ್ ಅಧಿಕಾರಿಗಳು ಬಾಕಿ ಹಣ ಬಿಡುಗಡೆ ಮಾಡಲು 40% ಕಮಿಷನ್ ಬೇಡಿಕೆ ಇಟ್ಟಿದ್ದರಿಂದ ಪಾವತಿ ವಿಳಂಬವಾಗಿದೆ. ಅಲ್ಲದೆ, ಬ್ಯಾಂಕ್ ಸಂವಿಧಾನದ 12ನೇ ವಿಧಿಯಡಿ “ರಾಜ್ಯ” (State) ಆಗಿರುವುದರಿಂದ ಅದು ಸ್ಟೇಚ್ಛಾಚಾರದಿಂದ ವರ್ತಿಸಲು ಸಾಧ್ಯವಿಲ್ಲ ಎಂದರು.

ಇದಕ್ಕೆ ಪ್ರತಿಯಾಗಿ ವಾದಿಸಿದ ಬ್ಯಾಂಕ್, ವಿವಾದಾತೀತ ಬಿಲ್ ಗಳನ್ನು ಈಗಾಗಲೇ ಪಾವತಿಸಲಾಗಿದೆ; ಉಳಿದ ಬಿಲ್ ಗಳು ವಿವಾದಾಸ್ಪದವಾಗಿವೆ ಎಂದು ತಿಳಿಸಿತು. ಅಲ್ಲದೆ, ಸೇವೆಯಲ್ಲಿ ಕೊರತೆ ಇರುವ ಕಾರಣ ಇದು ಖಾಸಗಿ ಒಪ್ಪಂದದ ವಿವಾದ ಎಂದು ತಿಳಿಸಿತು.

ವಾದ ಪ್ರತಿವಾದ ಆಲಿಸಿದ ನ್ಯಾಯಪೀಠವು, ಬ್ಯಾಂಕ್ ಅರ್ಜಿದಾರರ ಬೇಡಿಕೆಯನ್ನು ವಿವಾದಿಸಿರುವುದರಿಂದ, ಈ ಪ್ರಕರಣವು ಸಾರ್ವಜನಿಕ ಕಾನೂನಿನ ಸ್ವರೂಪವನ್ನು ಕಳೆದುಕೊಂಡು ಖಾಸಗಿ ನಾಗರಿಕ ವಿವಾದವಾಗಿ ಪರಿವರ್ತನೆಯಾಗಿದೆ. ಹೀಗಾಗಿ, ಏಕಸದಸ್ಯ ನ್ಯಾಯಮೂರ್ತಿಯವರು ರಿಟ್ ಅರ್ಜಿಯನ್ನು ವಜಾಗೊಳಿಸಿರುವುದು ಸರಿಯಾದ ಕ್ರಮವಾಗಿದೆ ಎಂದು ತೀರ್ಪು ನೀಡಿತು.

ಹಾಗೆಯೇ, ಅರ್ಜಿದಾರರಿಗೆ ಯಾವುದೇ ಪರಿಹಾರವಿಲ್ಲ ಎಂದು ಹೇಳಲಾಗುವುದಿಲ್ಲ. ಅವರು ತಪ್ಪು ನ್ಯಾಯಾಂಗ ವೇದಿಕೆಯನ್ನು ಆಶ್ರಯಿಸಿದ್ದಾರೆ. ಆದ್ದರಿಂದ, ತಮ್ಮ ಹಕ್ಕುಗಳನ್ನು ಸ್ಥಾಪಿಸಿ, ತಮ್ಮ ಅಹವಾಲುಗಳನ್ನು ಸಮರ್ಥ ಸಿವಿಲ್ ನ್ಯಾಯಾಲಯದ ಮುಂದೆ ಮಂಡಿಸಲು ಅವರಿಗೆ ಸ್ವಾತಂತ್ರ ನೀಡಲಾಗಿದೆ ಎಂದು ನ್ಯಾಯಪೀಠ ತಿಳಿಸಿತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.