24/07/2026

Law Guide Kannada

Online Guide

ಜಡ್ಜ್ ಗಳ ನಿವೃತ್ತಿ ವಯಸ್ಸು 61ಕ್ಕೆ ಏರಿಸುವ ಕುರಿತು ಪರಿಗಣಿಸಿ – ಸುಪ್ರೀಂ

ನವದೆಹಲಿ: ಜಿಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 60 ರಿಂದ 61 ವರ್ಷಕ್ಕೆ ಏರಿಸುವ ಕುರಿತು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಹತ್ವದ ನಿರ್ದೇಶನ ನೀಡಿದೆ.

ಇದು ಅಂತಿಮ ತೀರ್ಪಿನವರೆಗೆ ತಾತ್ಕಾಲಿಕ ಕ್ರಮವಾಗಿದ್ದು, ರಾಷ್ಟ್ರವ್ಯಪ್ತಿ ಏಕರೂಪವಾಗಿ 62 ವರ್ಷಕ್ಕೆ ವಿಸ್ತರಿಸುವ ಬಗ್ಗೆಯೂ ನ್ಯಾಯಾಲಯ ಪರಿಶೀಲನೆ ನಡೆಸುತ್ತಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಆಲ್ ಇಂಡಿಯಾ ಜನ್ಮಸ್ ಅಸೋಸಿಯೇಷನ್ ವಿರುದ್ಧ ಭಾರತ ಒಕ್ಕೂಟ (W.P.(C) No.1022/1989) ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್ಮಲ್ಯ ಭಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರನ್ನೊಳಗೊಂಡ ಪೀಠವು, ದೇಶದಾದ್ಯಂತ ಜಿಲ್ಲಾ ನ್ಯಾಯಾಂಗದ ಸದಸ್ಯರ ನಿವೃತ್ತಿ ವಯಸ್ಸನ್ನು 62 ವರ್ಷಗಳಿಗೆ ಏಕರೂಪವಾಗಿ ಹೆಚ್ಚಿಸಬೇಕೇ ಎಂಬ ಪ್ರಮುಖ ಪ್ರಶ್ನೆ ಪರಿಶೀಲನೆಯಲ್ಲಿದೆ. ಜಿಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 61 ವರ್ಷಗಳಿಗೆ ಹೆಚ್ಚಿಸುವ ಬಗ್ಗೆ, ಸಂಬಂಧಿತ ಹೈಕೋರ್ಟ್ಗಳೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಿ ಎಂದು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿತು.

ಸುಪ್ರೀಂ ಕೋರ್ಟ್ ಈ ವಿಷಯದ ಬಗ್ಗೆ ಶೀಘ್ರದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದೆ. ಆದರೆ ಅಂತಿಮ ತೀರ್ಪು ಬರುವವರೆಗೆ, ಹಿಂದಿನ ಮಧ್ಯಂತರ ಆದೇಶವನ್ನು ಪರಿಷ್ಕರಿಸಿ, ರಾಜ್ಯ ಕೇಂದ್ರಾಡಳಿತ ಪ್ರದೇಶ ಸರ್ಕಾರ ಹಾಗೂ ಸಂಬಂಧಿತ ಹೈಕೋರ್ಟ್ ಎರಡೂ ಒಪ್ಪಿಗೆ ನೀಡಿದಲ್ಲಿ ಮಾತ್ರ. ನಿವೃತ್ತಿಗೆ ಬರುವ ಜಿಲ್ಲಾ ನ್ಯಾಯಾಧೀಶರು 61 ವರ್ಷ ವಯಸ್ಸಿನವರೆಗೆ ಸೇವೆಯಲ್ಲಿ ಮುಂದುವರಿಯಬಹುದು ಎಂದು ಸ್ಪಷ್ಟಪಡಿಸಿದೆ.

“ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಂಬಂಧಿತ ಹೈಕೋರ್ಟ್ಳೊಂದಿಗೆ ಸಮಾಲೋಚಿಸಿ ಈ ವಿಷಯದ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಅವರು ಒಪ್ಪಿಗೆ ನೀಡಿದಲ್ಲಿ, ಅಂತಿಮ ತೀರ್ಪಿಗೆ ಒಳಪಟ್ಟಂತೆ ಜಿಲ್ಲಾ ನ್ಯಾಯಾಂಗದ ಸದಸ್ಯರಿಗೆ 61 ವರ್ಷ ವಯಸ್ಸಿನವರೆಗೆ ಸೇವೆ ಮುಂದುವರಿಸಲು ಅವಕಾಶ ನೀಡಬೇಕು. ಹಿಂದಿನ ಷರತ್ತುರಹಿತ ಮುಂದುವರಿಕೆ ಕುರಿತ ಮಧ್ಯಂತರ ಆದೇಶವನ್ನು ಪರಿಷ್ಕರಿಸಲಾಗಿದೆ. ರಾಜ್ಯ ಸರ್ಕಾರ ಮತ್ತು ಹೈಕೋರ್ಟ್ ಎರಡೂ ಒಪ್ಪಿಗೆ ನೀಡಿದರೆ ಮಾತ್ರ 60 ವರ್ಷಗಳ ನಂತರ ಸೇವೆ ಮುಂದುವರಿಸಲು ಅವಕಾಶ ಇರುತ್ತದೆ. ನಿವೃತ್ತಿ ವಯಸ್ಸು ಹೆಚ್ಚಿಸುವ ನಿರ್ಧಾರ ಕೈಗೊಂಡರೆ, ಅದು 01.04.2026 ರಿಂದ ಜಾರಿಗೆ ಬರಲಿದೆ.

ಹಿಂದಿನ ತೀರ್ಪುಗಳಲ್ಲಿ ಜಿಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 62 ವರ್ಷಗಳಿಗೆ ಹೆಚ್ಚಿಸುವ ಮನವಿಯನ್ನು, ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 62 ವರ್ಷವಾಗಿರುವುದರಿಂದ ಹುದ್ದೆಯ ಕ್ರಮದಲ್ಲಿ ವ್ಯತ್ಯಾಸ ಉಂಟಾಗುತ್ತದೆ ಎಂಬ ಕಾರಣದಿಂದ ತಿರಸ್ಕರಿಸಲಾಗಿತ್ತು. ಈ ಕುರಿತು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, “ಜಿಲ್ಲಾ ನ್ಯಾಯಾಧೀಶರೂ 62 ವರ್ಷಕ್ಕೆ ನಿವೃತ್ತರಾದರೆ ಅದರಲ್ಲಿ ಸಮಸ್ಯೆಯೇನು?” ಎಂದು ಪ್ರಶ್ನಿಸಿದರು.

ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಹೈಕೋರ್ಟ್ ಗಳು ಎರಡು ವಾರಗಳೊಳಗೆ ತಮ್ಮ ಪ್ರಮಾಣಪತ್ರಗಳನ್ನು (Affidavits) ಸಲ್ಲಿಸಬೇಕು. ಅವುಗಳನ್ನು ನ್ಯಾಯಾಲಯದ ಅಮಿಕಸ್ ಕ್ಯೂರಿ ಹಿರಿಯ ವಕೀಲ ಸಿದ್ಧಾರ್ಥ್ ಭಟ್ನಾಗರ್ ಅವರಿಗೆ ಸಲ್ಲಿಸಿ, ಅವರು ಸಂಗ್ರಹಿಸಿ ನ್ಯಾಯಾಲಯದ ಮುಂದೆ ಮಂಡಿಸಲಿದ್ದಾರೆ ಎಂದು ನ್ಯಾಯಪೀಠ ಸೂಚಿಸಿತು.

ನಿವೃತ್ತಿ ವಯಸ್ಸು 62ಕ್ಕೆ ಹೆಚ್ಚಿಸಲು ಮಾಡಿದ್ದ ಶಿಫಾರಸ್ಸು ಅಂಗಿಕರಿಸಿರಲಿಲ್ಲ…..

ಶೆಟ್ಟಿ ಆಯೋಗ ಜಿಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 62 ವರ್ಷಗಳಿಗೆ ಹೆಚ್ಚಿಸಲು ಶಿಫಾರಸು ಮಾಡಿದ್ದರೂ, ಸುಪ್ರೀಂ ಕೋರ್ಟ್ ಹಿಂದೆ ಅದನ್ನು ಅಂಗೀಕರಿಸಿರಲಿಲ್ಲ. ಬಳಿಕ ಎರಡನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗವೂ ಈ ಬಗ್ಗೆ ಯಾವುದೇ ಶಿಫಾರಸು ಮಾಡದ ಹಿನ್ನೆಲೆಯಲ್ಲಿ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿರಲಿಲ್ಲ. ನಂತರ ಕೆಲವು ರಾಜ್ಯಗಳಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62 ವರ್ಷಗಳಿಗೆ ಹೆಚ್ಚಿಸಲಾಯಿತು. ವಿಶೇಷವಾಗಿ ಮಧ್ಯಪ್ರದೇಶ ಸರ್ಕಾರ ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸನ್ನು 62 ವರ್ಷಗಳಿಗೆ ಹೆಚ್ಚಿಸಲು ಒಪ್ಪಿಗೆ ನೀಡಿದರೂ, 2022ರ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಒಪ್ಪಿಗೆ ನೀಡಿರಲಿಲ್ಲ.

ಇದಾದ ನಂತರ ಮಧ್ಯಪ್ರದೇಶದ ನ್ಯಾಯಾಂಗ ಅಧಿಕಾರಿಗಳು ಸುಪ್ರೀಂ ಕೋರ್ಟ್ಗೆ ಮೊರೆ ಹೋದರು. ಅದರ ಪರಿಣಾಮವಾಗಿ ಮೇ 2025ರಲ್ಲಿ, ನಿವೃತ್ತಿ ವಯಸ್ಸನ್ನು 61 ವರ್ಷಗಳಿಗೆ ಹೆಚ್ಚಿಸಲು ಯಾವುದೇ ಕಾನೂನು ಅಡ್ಡಿಯಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು.

ಇಂದಿನ ವಿಚಾರಣೆಯಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಸಲ್ಲಿಸಿದ ವರದಿಯಲ್ಲಿ, ಜಿಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 62 ವರ್ಷಗಳಿಗೆ ಹೆಚ್ಚಿಸಲು ಪೂರ್ಣ ನ್ಯಾಯಪೀಠ ನಿರ್ಣಯ ಕೈಗೊಂಡಿದೆ ನ್ಯಾಯಪೀಠ ಎಂದು ತಿಳಿಸಲಾಗಿದೆ.

ತೆಲಂಗಾಣ ರಾಜ್ಯವೂ ಇದೇ ರೀತಿಯಲ್ಲಿ ಜಿಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು ಹೆಚ್ಚಿಸಿರುವುದಾಗಿ ತಿಳಿಸಲಾಯಿತು. ಆದರೆ ಪಂಜಾಬ್ ಮತ್ತು ಹರಿಯಾಣ ಸೇರಿದಂತೆ ಕೆಲವು ರಾಜ್ಯಗಳು ಈ ಪ್ರಸ್ತಾವನೆಯನ್ನು ವಿರೋಧಿಸಿವೆ. ತಮ್ಮ ರಾಜ್ಯಗಳಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ವರ್ಷ ಅಥವಾ ಅದಕ್ಕಿಂತ ಕಡಿಮೆ ಇರುವುದರಿಂದ ಹೆಚ್ಚಳ ಅಗತ್ಯವಿಲ್ಲ ಎಂದು ಅವು ವಾದಿಸಿವೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.