ಅಂಗವೈಕಲ್ಯ ಪ್ರಮಾಣಪತ್ರ ನಕಲಿಯಾಗಿದ್ರೆ ಆರಂಭದಿಂದಲೇ ನೇಮಕಾತಿ ಅಮಾನ್ಯ – ಹೈಕೋರ್ಟ್
ಚೆನ್ನೈ: ನಕಲಿ ಅಂಗವೈಕಲ್ಯ ಪ್ರಮಾಣಪತ್ರಗಳ ಮೂಲಕ ಆದ್ಯತಾ ಕೋಟಾದಲ್ಲಿ ಸರ್ಕಾರಿ ಉದ್ಯೋಗ ಪಡೆದ ನೇಮಕಾತಿಗಳು ಆರಂಭದಿಂದಲೇ ಅಮಾನ್ಯವಾಗಿದ್ದು, ಅಂತಹ ನೇಮಕಾತಿಗಳನ್ನು ರದ್ದುಪಡಿಸುವುದು ಕಾನೂನುಬದ್ಧವಾಗಿದೆ. ಜೊತೆಗೆ, ಈ ಅಕ್ರಮಗಳಿಗೆ ಕಾರಣರಾದ ಅಧಿಕಾರಿಗಳ ಪಾತ್ರದ ಕುರಿತೂ ಸಮಗ್ರ ತನಿಖೆ ನಡೆಸಿ, ನೇಮಕಾತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಬಿ. ಪುಗಳೇಂಧಿ ಅವರ ಏಕಸದಸ್ಯ ಪೀಠವು, ನಕಲಿ ಅಂಗವೈಕಲ್ಯ ಗುರುತಿನ ಚೀಟಿ ಮತ್ತು ಪ್ರಮಾಣಪತ್ರಗಳನ್ನು ಬಳಸಿ ದೈಹಿಕ ಅಂಗವೈಕಲ್ಯ ಹೊಂದಿದವರ ಆದ್ಯತಾ ಕೋಟಾದಡಿ ಸರ್ಕಾರಿ ಉದ್ಯೋಗ ಪಡೆದ ನೇಮಕಾತಿಗಳು ಆರಂಭದಿಂದಲೇ ಅಮಾನ್ಯವಾಗಲಿವೆ. ಅಂತಹವರು ಯಾವುದೇ ಸಮಾನತೆಯ ಹಕ್ಕು ಅಥವಾ ಕಾನೂನುಬದ್ಧ ಹಕ್ಕನ್ನು ಪ್ರತಿಪಾದಿಸಲು ಸಾಧ್ಯವಿಲ್ಲ. ಇಂತಹ ನೇಮಕಾತಿಗಳು ಸರ್ಕಾರಕ್ಕೆ ಮಾತ್ರವಲ್ಲದೆ ನಿಜವಾದ ಅಂಗವಿಕಲ ಅಭ್ಯರ್ಥಿಗಳು ಹಾಗೂ ಇತರ ಆದ್ಯತಾ ವರ್ಗದ ಅರ್ಹ ಅಭ್ಯರ್ಥಿಗಳಿಗೂ ಅನ್ಯಾಯ ಮಾಡಿವೆ ಎಂದು ಅಭಿಪ್ರಾಯಪಟ್ಟಿತು.
ಏನಿದು ಕೇಸ್
ತಿರುನೆಲ್ವೇಲಿ ಜಿಲ್ಲೆಯ ವಿವಿಧ ಪಟ್ಟಣ ಪಂಚಾಯಿತಿಗಳು ಮತ್ತು ಪುರಸಭೆಗಳಲ್ಲಿ ಸ್ವಚ್ಛತಾ ಕಾರ್ಮಿಕರು, ಓವರ್ ಹೆಡ್ ಟ್ಯಾಂಕ್ ಅಪರೇಟರ್ ಗಳು, ವಾಚ್ಮನ್ಗಳು ಎಲೆಕ್ನಿಷಿಯನ್ ಗಳು ಹಾಗೂ ಜೂನಿಯರ್ ಅಸಿಸ್ಟೆಂಟ್ಗಳು ಸೇರಿದಂತೆ ಹಲವು ಹುದ್ದೆಗಳಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ (Employment Exchange) ಮೂಲಕ ದೈಹಿಕ ಅಂಗವೈಕಲ್ಯ ಹೊಂದಿದವರ ಆದ್ಯತಾ ಕೋಟಾದಡಿ ಅಭ್ಯರ್ಥಿಗಳನ್ನು ಶಿಫಾರಸು ಮಾಡಿ ನೇಮಕ ಮಾಡಲಾಗಿತ್ತು. ನಂತರ, ವೈದ್ಯರೊಬ್ಬರ ಸಹಿ ಮತ್ತು ಆಸ್ಪತ್ರೆಯ ಮುದ್ರೆಯನ್ನು ನಕಲಿ ಮಾಡಿ ರಾಷ್ಟ್ರೀಯ ಅಂಗವೈಕಲ್ಯ ಗುರುತಿನ ಚೀಟಿಗಳನ್ನು ನೀಡಲಾಗಿದೆ ಎಂಬ ದೂರು ಬಂದಿದ್ದು ಈ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ತನಿಖೆಯನ್ನು ಬಳಿಕ ಸಿಬಿ-ಸಿಐಡಿಗೆ ವರ್ಗಾಯಿಸಲಾಯಿತು. 28 ಪಟ್ಟಣ ಪಂಚಾಯಿತಿಗಳು ಮತ್ತು ಪುರಸಭೆಗಳಲ್ಲಿ ಒಟ್ಟು 103 ಮಂದಿ ಈ ಕೋಟಾದಡಿ ನೇಮಕಗೊಂಡಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಅವರಲ್ಲಿ ಕೇವಲ 25 ಮಂದಿ ಮಾತ್ರ ನಿಜವಾದ ಅಂಗವಿಕಲರು ಎಂದು ದೃಢಪಟ್ಟಿತು.
ಸಾರ್ವಜನಿಕ ನಿಧಿಗೆ ವಂಚನೆ ಎಸಗಿ ಪಡೆದ ಸರ್ಕಾರಿ ನೇಮಕಾತಿಯು ಆರಂಭದಿಂದಲೇ ಅಮಾನ್ಯವಾಗಿದೆ. ಅಂಗವೈಕಲ್ಯ ಹೊಂದಿದವರ ಪ್ರಗತಿಗಾಗಿ ರಾಜ್ಯವು ವಿಶೇಷ ರಕ್ಷಣೆಯನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿದೆ. ಆದ್ದರಿಂದ ದೈಹಿಕ ಅಂಗವೈಕಲ್ಯ ಇಲ್ಲದ ವ್ಯಕ್ತಿಗಳು ನಕಲಿ ಅಂಗವೈಕಲ್ಯ ಗುರುತಿನ ಚೀಟಿ ಹಾಗೂ ಪ್ರಮಾಣಪತ್ರಗಳ ಮೂಲಕ ಅಂಗವಿಕಲರಿಗಾಗಿ ಮೀಸಲಾದ ಹುದ್ದೆಗಳನ್ನು ಪಡೆದು ಯಾವುದೇ ಕಾನೂನುಬದ್ದ ಹಕ್ಕು ಅಥವಾ ಸಮಾನತೆಯ ಹಕ್ಕನ್ನು ಕೇಳಲು ಸಾಧ್ಯವಿಲ್ಲ. ಸುಮಾರು ಎಂಟು ವರ್ಷಗಳ ಕಾಲ ಇಂತಹ ಹುದ್ದೆಗಳಲ್ಲಿ ಮುಂದುವರಿದಿರುವುದು ಸರ್ಕಾರಕ್ಕೆ ಮಾತ್ರವಲ್ಲದೆ ನಿಜವಾದ ಅಂಗವಿಕಲರು ಹಾಗೂ ಇತರ ಆದ್ಯತಾ ವರ್ಗದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಸಿದುಕೊಂಡಿರುವ ಗಂಭೀರ ವಂಚನೆ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿತು.
ತನಿಖೆಗೆ ಆದೇಶ
ಈ ಅಕ್ರಮಗಳು ಮುಖ್ಯವಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲೇ ನಡೆದಿರುವ ಸಾಧ್ಯತೆ ಇದೆ. ಆದ್ದರಿಂದ ತಮಿಳುನಾಡು ಸರ್ಕಾರದ ಕಾರ್ಮಿಕ ಕಲ್ಯಾಣ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಸಮಿತಿಯನ್ನು ರಚಿಸಿ ಸಮಗ್ರ ತನಿಖೆ ನಡೆಸಲು ಆದೇಶಿಸಿತು.
ಸಿಬಿ-ಸಿಐಡಿ ತನಿಖೆಯನ್ನು ಫಲಾನುಭವಿಗಳಿಗೆ ಮಾತ್ರ ಸೀಮಿತಗೊಳಿಸದೆ, ಉದ್ಯೋಗ ವಿನಿಮಯ ಕಚೇರಿ ಅಧಿಕಾರಿಗಳ ಪಾತ್ರವನ್ನೂ ಪರಿಶೀಲಿಸುವಂತೆ ನಿರ್ದೇಶಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಅಕ್ರಮಗಳು ಮರುಕಳಿಸದಂತೆ ಉದ್ಯೋಗ ವಿನಿಮಯ ಕಚೇರಿಯ ಶಿಫಾರಸು ವ್ಯವಸ್ಥೆಯನ್ನು ಸಮಗ್ರವಾಗಿ ಪರಿಶೀಲಿಸಿ, ಕಠಿಣ ಆಡಳಿತಾತ್ಮಕ ಮತ್ತು ಮೇಲ್ವಿಚಾರಣಾ ಕ್ರಮಗಳನ್ನು ಜಾರಿಗೆ ತರಲು ಸರ್ಕಾರಕ್ಕೆ ಸೂಚಿಸಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
