01/08/2026

Law Guide Kannada

Online Guide

ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ‘ದೀಕ್ಷಾರಂಭ–2026’ ಕಾರ್ಯಕ್ರಮ

ಯಾವುದೇ ಶಿಕ್ಷಣ ಸಂಸ್ಥೆಯ ಪ್ರಗತಿಗೆ ವಿದ್ಯಾರ್ಥಿಗಳು ಹಾಗೂ ಪೋಷಕರ ಸಹಕಾರ ಅತ್ಯವಶ್ಯಕವಾಗಿದೆ ಎಂದು ಪ್ರೊ. ಸುರೇಶ್ ಹೇಳಿದರು.

ನಗರದ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‘ದೀಕ್ಷಾರಂಭ–2026’ ನೂತನ ವಿದ್ಯಾರ್ಥಿಗಳ ಓರಿಯಂಟೇಷನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಕಾಲೇಜುಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಮೂಲಭೂತ ಸೌಕರ್ಯಗಳಿಗೂ ಆದ್ಯತೆ ನೀಡಬೇಕಿದೆ ಎಂದು ಹೇಳಿದರು. ಪೋಷಕರು ತಿಂಗಳಿಗೊಮ್ಮೆ ಕಾಲೇಜಿಗೆ ಭೇಟಿ ನೀಡಿ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಬೇಕು. ಜೆಎಸ್‌ಎಸ್ ಕಾನೂನು ಕಾಲೇಜಿನ ಅನುಭವಿ ಉಪನ್ಯಾಸಕರು ಹಾಗೂ ಸಮೃದ್ಧ ಗ್ರಂಥಾಲಯದ ಸೌಲಭ್ಯವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಎಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ವಕೀಲ ಶಿವಪ್ರಸಾದ್ ಮಾತನಾಡಿ, ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಈ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಉನ್ನತ ನ್ಯಾಯಾಲಯಗಳಲ್ಲಿ ಯಶಸ್ವಿಯಾಗಿ ವಕೀಲರಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಮುಖ್ಯ ಅತಿಥಿಯಾಗಿದ್ದ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕರು ಹಿರಿಯ ವಕೀಲರು ಆದ ಎಚ್ ಎನ್ ವೆಂಕಟೇಶ್ ಮಾತನಾಡಿ, ದೀಕ್ಷಾರಂಭ ಎಂದರೆ ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಪಯಣವಾಗಿದೆ. ಜೆಎಸ್‌ಎಸ್ ಕಾನೂನು ಕಾಲೇಜು ತನ್ನದೇ ಆದ ಶೈಕ್ಷಣಿಕ ಪರಂಪರೆ ಮತ್ತು ಮಾನ್ಯತೆ ಹೊಂದಿರುವ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ವಿದ್ಯಾರ್ಥಿಗಳು ಜ್ಞಾನಾರ್ಜನೆ ಮೂಲಕ ಸಂಸ್ಥೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದಿವಂಗತ ಪ್ರೊ. ಅಜ್ಜಪ್ಪ ಅವರ ಸ್ಮರಣಾರ್ಥ ‘ಲಾ ಗೈಡ್’ ವತಿಯಿಂದ ₹1 ಲಕ್ಷ ದತ್ತಿ ನಿಧಿ ಸ್ಥಾಪಿಸಿ, ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ಪ್ರತಿ ವರ್ಷ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡುವ ಉದ್ದೇಶದಿಂದ ಸಂಸ್ಥೆಗೆ ₹1 ಲಕ್ಷ ದೇಣಿಗೆಯನ್ನು ನೀಡಲಾಯಿತು.

ಪ್ರೊ. ಬೆಟ್‌ಸೂರ್ ಮಾತನಾಡಿ, ಜೆಎಸ್‌ಎಸ್ ಮಹಾ ವಿದ್ಯಾಪೀಠವು ದೇಶ ವಿದೇಶಗಳಲ್ಲಿ 382ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಕಾನೂನು ಕಾಲೇಜಿಗೆ ಇನ್ನಷ್ಟು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಪ್ರೊ. ಜಗದೀಶ್ ನಿರೂಪಿಸಿದರು. ಪ್ರಾಂಶುಪಾಲೆ ಶ್ರೀಮತಿ ವಾಣಿ ವಂದನಾರ್ಪಣೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಅತಿಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು


 

Copyright © All rights reserved. | Newsphere by AF themes.