04/08/2026

Law Guide Kannada

Online Guide

ರಸ್ತೆಗಳಲ್ಲಿ ಪಾದಾಚಾರಿ ಮಾರ್ಗ: ಕೇಂದ್ರಕ್ಕೆ ಮಹತ್ವದ ನಿರ್ದೇಶನ ನೀಡಿದ ಸುಪ್ರೀಂ

ನವದೆಹಲಿ : ಸುರಕ್ಷಿತ ಪಾದಚಾರಿ ಮಾರ್ಗದಲ್ಲಿ ನಡೆಯುವುದು ಮೂಲಭೂತ ಹಕ್ಕು ಎಂದು ಇತ್ತೀಚೆಗೆ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಇದೀಗ ರಸ್ತೆ ಇರುವಲ್ಲೆಲ್ಲ ಪಾದಚಾರಿ ಮಾರ್ಗ ಬೇಕು. ಪ್ರತಿ ರಸ್ತೆಯಲ್ಲೂ ಪಾದಚಾರಿಗಳಿಗೆ ಮೀಸಲಾದ ಪ್ರತ್ಯೇಕ ಹಾಗೂ ಅತಿಕ್ರಮಣ ಮುಕ್ತ ಸ್ಥಳವಿದೆ ಎಂಬುದನ್ನು ಖಾತರಿಪಡಿಸಿ ಎಂದು ಕೇಂದ್ರಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಪಾದಚಾರಿ ಮಾರ್ಗದ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರ ಪೀಠವು, ‘ದೊಡ್ಡ ಪ್ರಮಾಣದ ವೆಚ್ಚ ಅಥವಾ ನಿರ್ಮಾಣಗಳನ್ನು ಮಾಡದೇ, ಪಾದಚಾರಿಗಳಿಗೆಂದೇ ಸರಿಯಾದ ಪಥ ಇರುವಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಎರಡು ವಾರಗಳಲ್ಲಿ ಸೂಚನೆ ನೀಡಬೇಕು’ ಎಂದು ಕೇಂದ್ರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಾಗರಾಜ್ ಅವರಿಗೆ ನಿರ್ದೇಶಿಸಿತು

ಪಾದಚಾರಿ ಮಾರ್ಗವು ಅತಿಕ್ರಮಣ ಆಗಬಾರದು ಅಥವಾ ಅಲ್ಲಿಗೆ ವಾಹನಗಳು ಬರಬಾರದು. ಹಗ್ಗ ಅಥವಾ ಇನ್ನಾವುದೇ ಸಾಧನಗಳನ್ನು ಬಳಸಿಕೊಂಡೂ ಇದನ್ನು ಸಾಧಿಸಬಹುದು. ತಮಗಾಗಿಯೇ ಪ್ರತ್ಯೇಕ ಪಥ ಇದೆ. ಅಲ್ಲಿ ವಾಹನಗಳು ಬರುವ ಆತಂಕ ಇಲ್ಲ ಎಂದು ಪಾದಚಾರಿಗಳಿಗೆ ವಿಶ್ವಾಸ ಬರಬೇಕು’ ಎಂದು ಸೂಚಿಸಿದ ನ್ಯಾಯಪೀಠವು ವಿಚಾರಣೆಯನ್ನು ಎರಡು ವಾರ ಮುಂದೂಡಿಕೆ ಮಾಡಿತು.

ಸುರಕ್ಷಿತ ಪಾದಚಾರಿ ಮಾರ್ಗದಲ್ಲಿ ನಡೆಯುವುದು ಮೂಲಭೂತ ಹಕ್ಕು
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜೂನ್ 19ರಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪೊಂದನ್ನ ನೀಡಿತ್ತು.’ಪ್ರತ್ಯೇಕ, ಸುಸ್ಥಿತಿಯಲ್ಲಿರುವ ಪಾದಚಾರಿ ಪಥದಲ್ಲಿ ನಡೆದಾಡುವ ನಾಗರಿಕರ ಹಕ್ಕು ಅತ್ಯಂತ ಪ್ರಮುಖವಾದದ್ದು. ವಾಹನಗಳ ಸಂಚಾರಕ್ಕಿಂತಲೂ ಹೆಚ್ಚು ಆದ್ಯತೆ ಇದಕ್ಕಿದೆ’ ಎಂದು ಅದು ಹೇಳಿತ್ತು.

ಸುರಕ್ಷಿತ ನಡಿಗೆಯು ಜೀವಿಸುವ ಹಕ್ಕಿನ ಭಾಗ ಎಂದು ಪರಿಗಣಿಸಿ ಪಾದಚಾರಿ ಮಾರ್ಗಗಳನ್ನು ಗುರುತಿಸುವುದು, ನಿರ್ಮಾಣ, ನಿರ್ವಹಣೆ, ರಕ್ಷಣೆ ಮತ್ತು ಪಾದಚಾರಿಗಳಿಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಒದಗಿಸುವುದು ನಗರಾಭಿವೃದ್ಧಿ ಪ್ರಾಧಿಕಾರಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯಿತಿಗಳ ಜವಾಬ್ದಾರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.