27/07/2026

Law Guide Kannada

Online Guide

ಪೂರ್ವಾನುಮತಿಯಿಲ್ಲದೇ ಕೋರ್ಟ್ ಕಲಾಪದ ವೀಡಿಯೋ ಹಂಚಿಕೊಳ್ಳುವಂತಿಲ್ಲ- ಸುಪ್ರೀಂ ನಿರ್ಬಂಧ

ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಲಯದ ಕಲಾಪಗಳ ವಿಡಿಯೋವನ್ನು ಅನಿಯಂತ್ರಿತವಾಗಿ ಪ್ರಸಾರ ಮಾಡುವುದನ್ನು ಚೀಲದಿಂದ ಹೊರಬಂದ ರಾಕ್ಷಸ ಎಂದು ಕರೆದಿರುವ ಸುಪ್ರೀಂಕೋರ್ಟ್ , ನ್ಯಾಯಾಲಯದ ಕಲಾಪಗಳ ಆಡಿಯೋ-ವಿಡಿಯೋ ರೆಕಾರ್ಡಿಂಗ್ಗಳನ್ನು ಸಂಬಂಧಪಟ್ಟ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಸಾಮಾಜಿಕ ಜಾಲತಾಣಗಳು ಅಥವಾ ಇತರ ಡಿಜಿಟಲ್ ವೇದಿಕೆಗಳಲ್ಲಿ ಹಂಚಿಕೊಳ್ಳುವಂತಿಲ್ಲ ಎಂದು ನಿರ್ಬಂಧ ವಿಧಿಸಿದೆ.

ನ್ಯಾಯಾಲಯದ ಕಲಾಪಗಳ ನೇರಪ್ರಸಾರ ಮತ್ತು ವೀಡಿಯೋ ಪ್ರಸಾರವನ್ನು ನಿರ್ಬಂಧಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಯಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರಿದ್ದ ಪೀಠವು ಈ ಮಧ್ಯಂತರ ಆದೇಶ ಹೊರಡಿಸಿದೆ.

ಸಂಬಂಧಿತ ಹೈಕೋರ್ಟ್ಗಳ ರಿಜಿಸ್ಟ್ರಾರ್ ಜನರಲ್ ಅಥವಾ ಸುಪ್ರೀಂ ಕೋರ್ಟ್ ಪ್ರಧಾನ ಕಾರ್ಯದರ್ಶಿಯ ಪೂರ್ವಾನುಮತಿ ಇಲ್ಲದೆ ನ್ಯಾಯಾಂಗ ಪ್ರಕ್ರಿಯೆಗಳ ಆಡಿಯೋ-ವಿಡಿಯೋ ದಾಖಲೆಗಳನ್ನು ಮಾರ್ಪಡಿಸುವುದು, ಪ್ರಸಾರ ಮಾಡುವುದು, ಪೋಸ್ಟ್ ಮಾಡುವುದು, ಮರು-ಪೋಸ್ಟ್ ಮಾಡುವುದು ಅಥವಾ ಅಪ್ ಲೋಡ್ ಮಾಡುವುದು ಅಥವಾ ಹಣಗಳಿಸುವುದನ್ನು ಮಾಡುವಂತಿಲ್ಲ. ೀ ರೀತಿ ಮಾಡಿದರೇ ಕ್ರಮ ಕೈಗೊಳ್ಳುವುದಾಗಿ ನ್ಯಾಯಪೀಠವು ಎಚ್ಚರಿಕೆ ನೀಡಿದೆ.

ನ್ಯಾಯಾಲಯದ ಕೊಠಡಿಗಳಲ್ಲಿನ ಆಯ್ದ ಮತ್ತು ಸಂದರ್ಭವಿಲ್ಲದ ಮಾಹಿತಿ ಪ್ರಸಾರವು ನ್ಯಾಯಾಲಯಗಳ ಘನತೆ ಹಾಗೂ ನ್ಯಾಯ ವಿತರಣಾ ವ್ಯವಸ್ಥೆಯ ಮೇಲಿನ ಸಾರ್ವಜನಿಕ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡುತ್ತಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.

ಈ ಮಧ್ಯೆ ನ್ಯಾಯಾಲಯದ ಕಲಾಪಗಳ ಕುರಿತು ಪತ್ರಕರ್ತರು ನಡೆಸುವ ಸುದ್ದಿ ವರದಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದ್ದು, ಈ ಆದೇಶವನ್ನು ತಮಾಷೆಯಾಗಿ ಪರಿಗಣಿಸಬಾರದು ಎಂದೂ ತಿಳಿಸಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.