04/08/2026

Law Guide Kannada

Online Guide

ನ್ಯಾಯಾಂಗದಲ್ಲಿ ‘ನಾರಿಶಕ್ತಿ’ ಅನಾವರಣ : ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯ್ತು ಹೈಕೋರ್ಟ್ ಧಾರವಾಡ ಪೀಠ

ಧಾರವಾಡ: ಮಹಿಳಾ ನ್ಯಾಯಮೂರ್ತಿ, ವಕೀಲರಿದಲೇ ಕಲಾಪ, ಒಂದು ರೀತಿಯ ಹಬ್ಬದ ವಾತಾವರಣ, ಎಲ್ಲಿ ನೋಡಿದರೂ ನಾರಿಯರ ದಂಡೇ ಕಣ್ಣಿಗೆ ಕಾಣುತ್ತಿತ್ತು. ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು ಹೈಕೋರ್ಟ್ ನ ಧಾರವಾಡ ಪೀಠ.

ಹೌದು ಧಾರವಾಡ ಹೈಕೋರ್ಟ್ ಪೀಠವು ಶನಿವಾರ ರಾಜ್ಯ ನ್ಯಾಯಾಂಗದಲ್ಲಿನ ನಾರಿಶಕ್ತಿಯ ಅನಾವರಣಕ್ಕೆ ಸಾಕ್ಷಿಯಾಯಿತು. ಸಂಪೂರ್ಣ ಮಹಿಳಾ ನ್ಯಾಯಮೂರ್ತಿಗಳು ಹಾಗೂ ಅವರ ಮುಂದೆ ಸರಕಾರದ ಕಡೆಯಿಂದ ಪೂರ್ಣ ಮಹಿಳಾ ವಕೀಲರ ತಂಡವೇ ವಾದ ಮಂಡಿಸುವ ಮೂಲಕ ಧಾರವಾಡ ಪೀಠ ಐತಿಹಾಸಿಕ ಹೆಜ್ಜೆಯೊಂದನ್ನಿರಿಸಿತು. ನ್ಯಾಯಾಂಗದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಗುರುತಿಸುವ ಸಂಕೇತವಾಗಿ ಕೈಗೊಂಡ ಈ ಪ್ರಯತ್ನ ಅತ್ಯಂತ ಯಶಸ್ವಿಯಾಯಿತು.

ಅಂದು ಇಡೀ ದಿನದ ಕಲಾಪವನ್ನು 10 ಮಹಿಳಾ ನ್ಯಾಯಮೂರ್ತಿಗಳು ಯಶ್ವಸಿಯಾಗಿ ನಡೆಸಿಕೊಟ್ಟರು. ಒಟ್ಟು 10 ಮಹಿಳಾ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ರಚನೆಯಾದ ಮೂರು ವಿಭಾಗೀಯ ಹಾಗೂ ನಾಲ್ಕು ಏಕಸದಸ್ಯ ಪೀಠಗಳಲ್ಲಿ 540 ಪ್ರಕರಣಗಳ ವಿಚಾರಣೆ ನಡೆಸಿ 185 ಪ್ರಕರಣಗಳನ್ನು ವಿಲೇವಾರಿ ಮಾಡಲಾಯಿತು.

ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾ. ಕೆ.ಜಿ ಶಾಂತಿ, ನ್ಯಾ. ಜ್ಯೋತಿ ಮೂಲಿಮನಿ ಹಾಗೂ ನ್ಯಾ. ಪಿ.ಶ್ರೀಸುಧಾ, ನ್ಯಾ. ಲಲಿತಾ ಕನ್ನೆಗಂಟಿ ಹಾಗೂ ನ್ಯಾ. ಕೆ.ಎಸ್.ಹೇಮಲೇಖಾ ನೇತೃತ್ವದ ಮೂರು ವಿಭಾಗೀಯ ಪೀಠಗಳ ಜತೆಗೆ ನ್ಯಾ. ಚೆಲ್ಲಕೂರು ಸುಮಲತಾ, ನ್ಯಾ. ತಾರಾ ವಿತಸ್ತ ಗಂಜು, ನ್ಯಾ.ಕೆ.ಬಿ.ಗೀತಾ, ನ್ಯಾ. ರಾಜೇಶ್ವರಿ ಎನ್. ಹೆಗ್ಡೆ ನೇತೃತ್ವದ ಏಕಸದಸ್ಯ ಪೀಠಗಳು ಕಲಾಪ ನಡೆಸಿದವು.ಆ ಎಲ್ಲಾ ಮಹಿಳಾ ನ್ಯಾಯಪೀಠಗಳ ವಿಶೇಷ ವಿಚಾರಣೆಯಲ್ಲಿ ರಾಜ್ಯ ಸರಕಾರದ ಪರ ಸಂಪೂರ್ಣ ಮಹಿಳಾ ಕಾನೂನು ಅಧಿಕಾರಿಗಳ ತಂಡವು ವಾದ ಮಂಡಿಸಿತು.

ಹೆಚ್ಚುವರಿ ಅಡ್ವೋಕೆಟ್ ಜನರಲ್ ಪ್ರತಿಮಾ ಹೊನ್ನಾಪುರ ನೇತೃತ್ವದ ಮಹಿಳಾ ವಕೀಲರ ತಂಡ ಬೆಂಗಳೂರಿನಿಂದ ಧಾರವಾಡಕ್ಕೆ ತೆರಳಿ. ನ್ಯಾಯಪೀಠಗಳೆದರು ಹಾಜರಾಗಿ ಸರಕಾರದ ಪರ ವಾದಸಿತು. ಸಂವಿಧಾನಿಕ ನ್ಯಾಯಾಲಯಗಳಲ್ಲಿ ಸಂಪೂರ್ಣ ಮಹಿಳಾ ಪೀಠಗಳು ರಚನೆಯಾಗುವುದೇ ಅಪರೂಪ. ಇಂತಹದ್ದರಲ್ಲಿ ಪ್ರತಿಯೊಂದು ನ್ಯಾಯಪೀಠದ ಮುಂದೆ ರಾಜ್ಯ ಸರಕಾರದ ಪರವಾಗಿ ಕೇವಲ ಮಹಿಳಾ ಅಧಿಕಾರಿಗಳೇ ಕಾಣಿಸಿ ಕೊಂಡು ವಾದ ಮಂಡಿಸಿದ್ದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಇದು ರಾಜ್ಯದ ನ್ಯಾಯಾಂಗ ಇತಿಹಾಸದಲ್ಲೇ ಅತ್ಯಂತ ಮಹತ್ವದ ಹೆಜ್ಜೆಯಾಗಿ ದಾಖಲಾಯಿತು.

ಈ ಬಗ್ಗೆ ತಮ್ಮ ಅನುಭವ ಹಂಚಿಕೊಂಡ ಹೆಚ್ಚುವರಿ ಅಡ್ವಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು, ಎಲ್ಲ ಮಹಿಳಾ ನ್ಯಾಯಮೂರ್ತಿಗಳು ಕಲಾಪದಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದು ಮಹಿಳಾ ವಕೀಲರೂ ಸಕಾರಾತ್ಮಕವಾಗಿ ಎಲ್ಲಾ ಕೋರ್ಟ್ ಕಲಾಪಗಳಲ್ಲಿ ಭಾಗವಹಿಸಿದ್ದರು. ಮಹಿಳೆಯರು ಎಷ್ಟು ಸಮರ್ಥರು ಮತ್ತು ಇನ್ನೂ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಬಲ್ಲರು ಎಂಬುದನ್ನು ತೋರಿಸಿದೆ. ನ್ಯಾಯಾಂಗ ವ್ಯವಸ್ಥೆಯ ಎಲ್ಲ ಹಂತಗಳಲ್ಲಿ ಮಹಿಳೆಯರಿಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.