ಸಿವಿಲ್ ಸ್ವರೂಪದ ವಿವಾದಗಳಿಗೆ ಕ್ರಿಮಿನಲ್ ಕಾನೂನು ಪ್ರಕ್ರಿಯೆ ಸಲ್ಲದು – ಸುಪ್ರೀಂ ಕೋರ್ಟ್
ನವದೆಹಲಿ: ಸಿವಿಲ್ ಸ್ವರೂಪದ ವಿವಾದಗಳಿಗೆ ಕ್ರಿಮಿನಲ್ ಕಾನೂನು ಪ್ರಕ್ರಿಯೆಯನ್ನು ಆರಂಭಿಸಬಾರದು’ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಹೈಕೋರ್ಟ್ ನ ಆದೇಶವೊಂದನ್ನು ತಳ್ಳಿಹಾಕಿದೆ.
ಮಧ್ಯಪ್ರದೇಶದ ಕನಾಡಿಯ ಪೊಲೀಸ್ ಠಾಣೆಯಲ್ಲಿ ವಿವಿಧ ಕಲಂಗಳ ಅಡಿ ದಾಖಲಾಗಿದ್ದ ಎಫ್ ಐಆರ್ ಒಂದನ್ನು ರದ್ದುಮಾಡಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಚಂದ್ರಶೇಖರ್ ಅವರ ಪೀಠವು, ಎಫ್ಐಆರ್ ದಾಖಲಿಸಲು ಕಾರಣವಾದ ಆಡಳಿತಾತ್ಮಕ ಆದೇಶವು ಕೇವಲ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಗೆ ಅರ್ಹವಾದ ವಿವಾದಕ್ಕೆ ಸಂಬಂಧಿಸಿದೆ ಎಂದು ರಾಜ್ಯ ಸರ್ಕಾರವೇ ಒಪ್ಪಿಕೊಂಡ ಬಳಿಕ ಕ್ರಿಮಿನಲ್ ಪ್ರಕರಣವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಸೂಕ್ತ ಪರವಾನಗಿ ಇಲ್ಲದೆ ನಿವೇಶನಗಳನ್ನು ಮಾರಾಟ ಮಾಡಿದ ಹಾಗೂ ಬಡಾವಣೆಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡದ ಕಾರಣಕ್ಕೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಆದೇಶಿಸಿದ್ದರು. ನಂತರ ‘ಪ್ರಕರಣವು ತನ್ನ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕರಣವನ್ನು ವಿಲೇವಾರಿ ಮಾಡಿದ್ದರು’ ಎಂದು ಮಧ್ಯಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್ ಮುಂದೆ ಪ್ರಮಾಣಪತ್ರ ಸಲ್ಲಿಸಿತ್ತು. ಪ್ರಕರಣವು ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡುತ್ತದೆ ಎಂದೂ ರಾಜ್ಯವು ಒಪ್ಪಿಕೊಂಡಿತ್ತು.
‘ಮೂಲ ರಿಟ್ ಅರ್ಜಿಯು ಹೆಚ್ಚುವರಿ ಜಿಲ್ಲಾಧಿಕಾರಿಯ ಆದೇಶ ರದ್ದುಗೊಳಿಸಿದ್ದಕ್ಕೆ ಮಾತ್ರ ಸಂಬಂಧಿಸಿತ್ತೇ ಹೊರತು ಈಗಾಗಲೇ ದಾಖಲಾಗಿದ್ದ ಎಫ್ಐಆರ್ ರದ್ದುಗೊಳಿಸಲು ಕೋರಿಲ್ಲ’ ಎಂದು ಹೇಳುವ ಮೂಲಕ, ಪ್ರಕರಣದಲ್ಲಿ ಮಧ್ಯ ಪ್ರವೇಶಿಸಲು ಹೈಕೋರ್ಟ್ ತಿರಸ್ಕರಿಸಿತ್ತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
