ವಕೀಲರ ಪುತ್ರಿ ಈಗ ‘ಹೈಕೋರ್ಟ್ ನ್ಯಾಯಮೂರ್ತಿ’: ಹೇಮಾ ಕುಲಕರ್ಣಿ ಅವರ ಹಿನ್ನೆಲೆ, ವೃತ್ತಿಸೇವೆಯ ಹಾದಿ ಹೀಗಿತ್ತು
ಕಲಬುರಗಿ: ಕರ್ನಾಟಕ ಹೈಕೋರ್ಟ್ಗೆ ಆರು ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಕೇಂದ್ರ ಕಾನೂನು ಸಚಿವಾಲಯ ನೇಮಿಸಿ ಅಧಿಸೂಚನೆ ಹೊರಡಿಸಿದ್ದು, ನಿನ್ನೆ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಲೋಕಭವನದ ಗಾಜಿನ ಮನೆಯಲ್ಲಿ ನಿನ್ನೆ ನಡೆದ ಸರಳ ಸಮಾರಂಭದಲ್ಲಿ ಹೇಮಾ ಕುಲಕರ್ಣಿ, ರಾಘವೇಂದ್ರ ಸೀತಾರಾಂ ಶ್ರೀವತ್ಸ, ಸುಬ್ರಹ್ಮಣ್ಯ ರಂಗರಾವ್, ತಡಗವಾಡಿ ಪ್ರಕಾಶ್ ವಿವೇಕಾನಂದ, ಬಕ್ಕೇಶ್ವರ ಪ್ರಮೋದ್ ಮತ್ತು ಹೊಂಬೇಗೌಡ ಶಾಂತಿಭೂಷಣ್ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಮಾಣ ವಚನ ಬೋಧಿಸಿದರು.
ಹೇಮಾ ಕುಲಕರ್ಣಿ ಹೆಚ್ಚುವರಿ ನ್ಯಾಯಮೂರ್ತಿ: ಸೇಡಂ ಜನರಲ್ಲಿ ಮನೆ ಮಾಡಿದ ಸಂತಸ
ಇನ್ನು ಸೇಡಂನ ಹೇಮಾ ಕುಲಕರ್ಣಿ ಅವರು ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕರಾಗಿರುವುದು ಸೇಡಂ ಜನರಲ್ಲಿ ಸಂತಸ ಮೂಡಿದೆ. ಪ್ರಸ್ತುತ ಕಲಬುರ್ಗಿಯಲ್ಲಿ ನೆಲೆಸಿರುವ ಹೇಮಾ ಕುಲಕರ್ಣಿ ಅವರು ಮೂಲತಃ ಸೇಡಂನವರು. ತಂದೆ ವೆಂಕಟ ಸುರೇಂದ್ರ ಕುಲಕರ್ಣಿ ಸೇಡಂನಲ್ಲಿ ಖ್ಯಾತ ವಕೀಲರಾಗಿದ್ದರು. ಅವರ ಐದು ಜನ ಮಕ್ಕಳಲ್ಲಿ ನಾಲ್ವರು ಪುತ್ರಿಯರು. ಹೇಮಾ ಕುಲಕರ್ಣಿ ಅವರು . ನಾಲ್ಕನೇ ಪುತ್ರಿಯಾಗಿದ್ದಾರೆ.
ಹಾಗೆಯೇ ಹೇಮಾ ಕುಲಕರ್ಣಿ ಅವರ ಶಿಕ್ಷಣಕ್ಕೆ ಬಂದರೇ ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ಪ್ರಾಥಮಿಕ ಬಾಲಭಾರತಿ, ಪ್ರೌಢ ಮತ್ತು ಪಿಯು ಶಿಕ್ಷಣ ಮಾತೃಛಾಯಾ ಕಾಲೇಜಿನಲ್ಲಿ ಓದಿದ್ದಾರೆ. ನಂತರ ಕಲಬುರಗಿಯ ವಿ.ಜಿ .ಮಹಿಳಾ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು, ಎಸ್ಎಸ್ಎಲ್ ಕಾಲೇಜಿನಲ್ಲಿ ಕಾನೂನು ಪದವಿಯನ್ನು, ಆಂಧ್ರಪ್ರದೇಶದ ನಾಗಾರ್ಜುನ ಕಾನೂನು ವಿಶ್ವವಿದ್ಯಾಲಯದಲ್ಲಿ ಎಲ್ಎಲ್ಎಂ ಅಧ್ಯಯನ ಮಾಡಿದ್ದಾರೆ.
ಭಾರತ ಸರ್ಕಾರದ ಹಿರಿಯ ಕಾನೂನು ಸಲಹೆಗಾರರು, ಕೇಂದ್ರೀಯ ವಿಶ್ವವಿದ್ಯಾಲಯ ಕಡಗಂಚಿ, ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ಮಾಧ್ಯಮಿಕ ಶಿಕ್ಷಣ, ನೌಕರರ ರಾಜ್ಯ ವಿಮಾ ನಿಗಮ, ಯುಜಿಸಿಗೆ ಕಾನೂನು ಸಲಹೆಗಾರರಾಗಿ ಹೇಮಾ ಕುಲಕರ್ಣಿ ಅವರು ಸೇವೆ ಸಲ್ಲಿಸಿದ್ದಾರೆ.
1999ರಲ್ಲಿ ಕೆ.ಅಪ್ಪಾರಾವ ಅವರ ಮಾರ್ಗದರ್ಶನದಲ್ಲಿ ಬೆಂಗಳೂರಿನಲ್ಲಿ ಹೈಕೋರ್ಟ್ ವಕೀಲ ವೃತ್ತಿಯನ್ನು ಪ್ರಾರಂಭಿಸಿದ ಹೇಮಾ ಕುಲಕರ್ಣಿ ಅವರು. ನಂತರ 2008ರಿಂದ ಕಲಬುರಗಿಯಲ್ಲಿ ಪ್ರಭಾಕರ ಯಳಸಂಗಿ ಮಾರ್ಗದರ್ಶನದಲ್ಲಿ ಹೈಕೋರ್ಟ್ ವಕೀಲರಾಗಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ
ಇನ್ನು ಇವರ ದಾಂಪತ್ಯ ಜೀವನ ನೋಡುವುದಾದರೇ 2001ರಲ್ಲಿ ಚಿಂಚೋಳಿ ತಾಲ್ಲೂಕಿನ ಗಾರಂಪಳ್ಳಿಯ ಲಕ್ಷ್ಮಿಕಾಂತ ಕುಲಕರ್ಣಿ ಅವರ ಜೊತೆಗೆ ಹೇಮಾ ಕುಲಕರ್ಣಿ ಅವರ ವಿವಾಹವಾಗಿದ್ದು, ಪ್ರಸ್ತುತ ಕಲಬುರಗಿಯಲ್ಲಿ ನೆಲೆಸಿರುವ ಲಕ್ಷ್ಮೀಕಾಂತ ಕುಲಕರ್ಣಿ ಅವರು ಹೈಕೋರ್ಟ್ ವಕೀಲರಾಗಿದ್ದಾರೆ. ಸೇಡಂ ಮೂಲದ ಹೇಮಾ ಹೈಕೋರ್ಟ್ ನ್ಯಾಯಮೂರ್ತಿಯಾಗುತ್ತಿದ್ದಂತೆ ಸೇಡಂನಲ್ಲಿ ಸಂತಸ ಮನೆ ಮಾಡಿದೆ. ಸೇಡಂನ ವಕೀಲರು ಹೇಮಾ ಅವರನ್ನು ಅಭಿನಂದಿಸಿ ಸತ್ಕರಿಸಿದ್ದಾರೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
