26/08/2026

Law Guide Kannada

Online Guide

ಪತ್ನಿಯು ಪತಿಯ ಮನೆ ಕೆಲಸ, ಪೋಷಕರ ನೋಡಿಕೊಳ್ಳಲು ನೇಮಕವಾದ ಉದ್ಯೋಗಿಯಲ್ಲ- ಹೈಕೋರ್ಟ್

ಬೆಂಗಳೂರು: ಹೆಂಡತಿಯು ಪತಿಯ ಮನೆಗೆಲಸದ ಸೇವಕಿ ಅಲ್ಲ. ಪೋಷಕರ ನೋಡಿಕೊಳ್ಳಲು ನೇಮಕಗೊಂಡ ಉದ್ಯೋಗಿಯಲ್ಲ. ”ಮದುವೆ ಎಂಬುದು ಪತ್ನಿಯ ಸ್ವಾತಂತ್ರ್ಯ ಮತ್ತು ಇಚ್ಛೆ ನಿಯಂತ್ರಿಸುವ ಪರವಾನಗಿಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪತ್ನಿ ಮತ್ತು ಅಪ್ರಾಪ್ತ ಮಗುವಿಗೆ ಮಾಸಿಕ 9 ಸಾವಿರ ರೂ. ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ನೆಲಮಂಗಲ ತಾಲೂಕಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಡಾ. ಚಿಲ್ಲಕೂರು ಸುಮಲತಾ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ.

‘ಪತ್ನಿಯಾದವರು ಪತಿಯ ಮನೆ ಕೆಲಸ ಮತ್ತು ಪೋಷಕರನ್ನು ನೋಡಿಕೊಳ್ಳಲು ನೇಮಕವಾದವರಲ್ಲ, ತನಗೆ ಮತ್ತು ತನ್ನ ಹೆತ್ತವರಿಗೆ ಹೆಂಡತಿ ಅಡುಗೆ ಕೆಲಸ ಮಾಡಬೇಕು ಹಾಗೂ ತನ್ನ ಅನುಮತಿಯಿಲ್ಲದೆ ತವರಿಗೆ ಹೋಗಬಾರದೆಂಬ ಪತಿಯ ಮನಸ್ಥಿತಿ ಒಪ್ಪಲಾಗದು” ಎಂದು ನ್ಯಾಯಪೀಠ ಆದೇಶಿಸಿದೆ.

ಹೆತ್ತವರನ್ನು ನೋಡಿಕೊಳ್ಳುವ ಕರ್ತವ್ಯ ಮಗ ಅಥವಾ ಮಗಳ ಮೇಲಿದೆ ಹೊರತು ಸೊಸೆ ಅಥವಾ ಅಳಿಯನ ಮೇಲಲ್ಲ. ”ಪತ್ನಿಯು ಮನೆಯ ಕೆಲಸ ಮಾಡಲು ಮತ್ತು ಪೋಷಕರನ್ನು ನೋಡಿಕೊಳ್ಳಲು ನೇಮಕಗೊಂಡ ಉದ್ಯೋಗಿಯಲ್ಲ. ಇದೆಲ್ಲವೂ ಸ್ವಯಂಪ್ರೇರಿತವಾಗಿ ಇರಬೇಕೇ ಹೊರತು ಬಲವಂತದಿಂದಲ್ಲ,’ಎಂದು ನ್ಯಾಯಪೀಠ ತಿಳಿಸಿದೆ.

ಮಹಿಳೆಯೊಬ್ಬಳು ತನ್ನ ತಂದೆ-ತಾಯಿಯ ಮನೆಗೆ ಹೋಗಲು ಪತಿಯ ಅಥವಾ ಅತ್ತೆ-ಮಾವಂದಿರ ಅನುಮತಿ ಪಡೆಯಬೇಕು ಎನ್ನುವುದು ಪತಿಯ ಸರ್ವಾಧಿಕಾರಿ ಮನಸ್ಥಿತಿ ತೋರಿಸುತ್ತದೆ. ಮದುವೆ ಎಂಬುದು ಇಬ್ಬರು ವ್ಯಕ್ತಿಗಳನ್ನು ಒಟ್ಟಿಗೆ ಸೇರಿಸುವ ಪವಿತ್ರ ಬಂಧ. ಆದರೆ, ಪ್ರೀತಿ, ವಿಶ್ವಾಸ, ಗೌರವ, ಪರಸ್ಪರ ಬೆಂಬಲ ಮತ್ತು ಇನ್ನೊಬ್ಬರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದರಿಂದ ಅವರು ಜೀವನ ಪಯಣದಲ್ಲಿ ಸಂಗಾತಿಗಳಾಗಿ ಮುಂದುವರಿಯಲಿದ್ದಾರೆ. ಮಹಿಳೆಯು ತನ್ನ ವೃತ್ತಿ, ಹಣಕಾಸಿಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ ಹೊಂದಿರುತ್ತಾಳೆ. ಗಂಡನ ಇಚ್ಛೆ ಮತ್ತು ನಿರೀಕ್ಷೆಗಳಿಗೆ ಅನುಗುಣವಾಗಿ ಬದುಕಬೇಕು ಎಂದು ಒತ್ತಾಯಿಸಬಾರದು ಎಂದು ನ್ಯಾಯಪೀಠ ತಿಳಿಸಿದೆ.

”ಪತ್ನಿ ಮತ್ತು ಅಪ್ರಾಪ್ತ ಮಗಳ ಜೀವನಾಂಶವಾಗಿ 9 ಸಾವಿರ ಪಾವತಿಸಲು ಕೌಟುಂಬಿಕ ನ್ಯಾಯಾಲಯ ಸೂಚನೆ ‘ನೀಡಿದೆ. ಈ ಮೊತ್ತ ಪ್ರತಿ ದಿನಕ್ಕೆ 300 ರೂ.ಗಳಾಗಲಿದೆ. ಇಬ್ಬರಿಗೆ ತಲಾ 150 ರೂ.ಗಳು ಮಾತ್ರ. ಪ್ರಸ್ತುತದ ಬೆಲೆ ಏರಿಕೆ ಸಂದರ್ಭದಲ್ಲಿ ಈ ಮೊತ್ತವನ್ನು ಕಡಿಮೆ ಮಾಡ ಬೇಕೆಂಬ ಅರ್ಜಿದಾರರ ಮನವಿ ಪರಿಗಣಿಸಲಾಗದು,” ಎಂದು ಆದೇಶಿಸಿದೆ.

ಎರಡೇ ವರ್ಷಕ್ಕೆ ದಾಂಪತ್ಯ ಜೀವನದಲ್ಲಿ ಬಿರುಕು, ಡೈವೋರ್ಸ್
ನೆಲಮಂಗಲ ತಾಲೂಕಿನ ಅರ್ಜಿದಾರ ವ್ಯಕ್ತಿ ತುಮಕೂರು ತಾಲೂಕಿನ ಮಹಿಳೆಯೊಬ್ಬರನ್ನು ವಿವಾಹವಾಗಿದ್ದರು. ಆದರೆ ಈ ದಂಪತಿ ಸಂಸಾರ ನಡೆಸಿದ್ದು ಕೇವಲ ಎರಡು ವರ್ಷಗಳ ಕಾಲ. ಈ ಮಧ್ಯೆ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಆದರೆ, ಅರ್ಜಿದಾರರ ಕುಟುಂಬಸ್ಥರು ವಿನಾಕಾರಣ ಪ್ರತಿವಾದಿ ಪತ್ನಿಯನ್ನು ನಿಂದಿಸುತ್ತಿದ್ದರು. ಜೂಜಾಡುತ್ತಿದ್ದ ಪತಿ, ಹೆಚ್ಚಿನ ವರದಕ್ಷಿಣೆ ತರವಂತೆ ಕಿರುಕುಳ ನೀಡುತ್ತಿದ್ದರು. ಬಳಿಕ ಹಲವು ಬಾರಿ ಹಲ್ಲೆ ಮಾಡಿದ್ದರು. ಈ ಎಲ್ಲ ಕಾರಣದಿಂದ ದಂಪತಿ ದೂರವಾಗಿ ನೆಲೆಸಿದ್ದರು. ಬಳಿಕ ವಿಚ್ಚೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡುವೆ ಪತ್ನಿ ಮತ್ತು ಮಗಳ ಜೀವನಾಂಶಕ್ಕಾಗಿ 30 ಸಾವಿರ ರೂ. ನೀಡಬೇಕು ಎಂದು ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಪತ್ನಿಗೆ 5 ಸಾವಿರ ಹಾಗೂ ಅಪ್ರಾಪ್ತ ಪುತ್ರಿಗೆ 4 ಸಾವಿರ ಮಾಸಿಕ ಜೀವನಾಂಶ ನೀಡುವಂತೆ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೊರೆ ಹೋಗಿದ್ದರು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.