ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ ಬಳಿಕವೂ ಮಹಿಳೆ ಗರ್ಭಿಣಿ: ವೈದರ ನಿರ್ಲಕ್ಷ್ಯವಲ್ಲ- ಹೈಕೋರ್ಟ್ ಸ್ಪಷ್ಟನೆ
ಭೂಪಾಲ್: ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ ಬಳಿಕವೂ ಮಹಿಳೆ ಗರ್ಭಿಣಿಯಾದ ಮಾತ್ರಕ್ಕೆ ಅದು ವೈದ್ಯರ ಲೋಪವಲ್ಲ. ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ ವಿಫಲವಾದರೆ ವೈದ್ಯರ ನಿರ್ಲಕ್ಷ್ಯವೆಂದು ಹೇಳಲಾಗದು ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ.
ಲೇಡಿ ಕಿಶ್ವರ್ ಎಂಬ ಮಹಿಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಆಶಿಶ್ ಶೂತಿ ಅವರಿದ್ದ ಪೀಠವು, ಸಂತಾನನಿರೋಧಕ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ಮಹಿಳೆ ಗರ್ಭಿಣಿಯಾದಳು ಎಂಬ ಒಂದೇ ಕಾರಣಕ್ಕೆ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ವೈದ್ಯರು ಶಸ್ತ್ರಚಿಕಿತ್ಸೆ ಮಾಡುವಾಗ ಅಗತ್ಯವಾದ ಕೌಶಲ್ಯ ಮತ್ತು ಎಚ್ಚರಿಕೆಯನ್ನು ವಹಿಸಿರಲಿಲ್ಲ ಎಂಬುದಕ್ಕೆ ಸಾಕ್ಷ್ಯ ಇರಬೇಕು ಎಂದು ಹೇಳಿದೆ.
ಏನಿದು ಪ್ರಕರಣ…?
ಮಹಿಳೇ ಲೇಡಿ ಕಿಶ್ವರ್ ಗೆ ಐದು ಮಕ್ಕಳಿದ್ದು, 2004ರ ಮಾರ್ಚ್ 17ರಂದು ಅವರು ಶಿವಪುರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಂತಾನನಿರೋಧಕ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದರೆ ಶಸ್ತ್ರಚಿಕಿತ್ಸೆಯಾದ ಕೆಲವು ವಾರಗಳ ನಂತರ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತು. ಅವರು ಅದೇ ವೈದ್ಯರನ್ನು ಹಲವು ಬಾರಿ ಭೇಟಿ ಮಾಡಿದರೂ ಸಮಸ್ಯೆ ಪರಿಹಾರವಾಗಲಿಲ್ಲ. ನಂತರ ಮತ್ತೊಬ್ಬ ವೈದ್ಯರನ್ನು ಭೇಟಿ ಮಾಡಿದಾಗ ಅಲ್ಟ್ರಾ ಸೌಂಡ್ ಮಾಡಿಸಿಕೊಳ್ಳುವಂತೆ ಸಲಹೆ ನೀಡಲಾಯಿತು. 2004ರ ಜುಲೈ 4ರಂದು ಬಂದ ಅಲ್ಪಾ ಸೌಂಡ್ ವರದಿಯಲ್ಲಿ ಅವರು ಮತ್ತೆ ಗರ್ಭಿಣಿಯಾಗಿರುವ ವಿಚಾರ ತಿಳಿದಿದೆ. ನಂತರ ಅವರು 2004ರ ಅಕ್ಟೋಬರ್ 25ರಂದು ಆರನೇ ಮಗುವಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ವೈದ್ಯರ ನಿರ್ಲಕ್ಷ್ಯದಿಂದಲೇ ಶಸ್ತ್ರಚಿಕಿತ್ಸೆ ವಿಫಲವಾಗಿ ತಾನು ಗರ್ಭಿಣಿಯಾಗಿದ್ದೇನೆ ಎಂದು ಆರೋಪಿಸಿ, ಮಹಿಳೆ ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ವೈದ್ಯರ ವಿರುದ್ಧ ₹1.5 ಲಕ್ಷ ಪರಿಹಾರ ಕೋರಿ ದಾವೆ ಹೂಡಿದ್ದರು.
ಈ ದಾವೆಯ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯವು 2006ರಲ್ಲಿ ಆ ದಾವೆಯನ್ನು ತಿರಸ್ಕರಿಸಿತು. ನಂತರ ಮಹಿಳೆ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದರು.
ಈ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್, ಮಹಿಳೆಯೇ ಹಾಜರುಪಡಿಸಿದ ವೈದ್ಯಕೀಯ ಸಾಕ್ಷ್ಯಗಳಲ್ಲಿ ಪ್ರಮುಖ ಮಾಹಿತಿ ದೊರೆಯಿತು.
2004ರ ಜುಲೈ 4ರಂದು ಮಹಿಳೆಗೆ ಸುಮಾರು 22 ವಾರಗಳ ಗರ್ಭಧಾರಣೆ ಇತ್ತು ಎಂದು ಸೋನೋಗ್ರಫಿ ನಡೆಸಿದ ವೈದ್ಯರು ಸಾಕ್ಷ್ಯ ನೀಡಿದ್ದರು. 22 ವಾರಗಳನ್ನು ಹಿಂದಕ್ಕೆ ಲೆಕ್ಕ ಹಾಕಿದರೆ, ಆಕೆಯ ಗರ್ಭಧಾರಣೆ 2004ರ ಮಾರ್ಚ್ 17ರಂದು ಸಂತಾನನಿರೋಧಕ ಶಸ್ತ್ರಚಿಕಿತ್ಸೆ ಮಾಡಿಸುವುದಕ್ಕಿಂತ ಮುಂಚೆಯೇ ಆಗಿತ್ತು ಎಂಬುದು ತಿಳಿಯುತ್ತದೆ. ಅಕ್ಟೋಬರ್ 25ರಂದು ಮಗುವಿನ ಜನನವಾಗಿರುವುದೂ ಇದೇ ಸಂಗತಿಯನ್ನು ದೃಢಪಡಿಸುತ್ತದೆ ಎಂದು ನ್ಯಾಯಪೀಠ ಹೇಳಿತು.
ಸುಪ್ರೀಂ ಕೋರ್ಟ್ State of Punjab v. Shiv Ram ಪ್ರಕರಣದ ತೀರ್ಪನ್ನು ಗಮನಕ್ಕೆ ತೆಗೆದುಕೊಂಡ ಹೈಕೋರ್ಟ್, ಸಂತಾನನಿರೋಧಕ ಶಸ್ತ್ರಚಿಕಿತ್ಸೆಯ ನಂತರ ಗರ್ಭಧಾರಣೆಯಾಗುವುದು ಮಾತ್ರದಿಂದ ವೈದ್ಯರನ್ನು ನಿರ್ಲಕ್ಷ್ಯಕ್ಕಾಗಿ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಸ್ಪಷ್ಟಪಡಿಸಿದೆ. ವೈದ್ಯರು ಶಸ್ತ್ರಚಿಕಿತ್ಸೆ ಮಾಡುವಾಗ ಅಗತ್ಯವಾದ ವೈದ್ಯಕೀಯ ಕೌಶಲ್ಯ ಮತ್ತು ಎಚ್ಚರಿಕೆಯನ್ನು ವಹಿಸಲಿಲ್ಲ ಎಂಬುದನ್ನು ರೋಗಿಯು ಸಾಬೀತುಪಡಿಸಬೇಕು ಎಂದಿದೆ.
ಸಂತಾನನಿರೋಧಕ ಶಸ್ತ್ರಚಿಕಿತ್ಸೆಯ ನಂತರ ಗರ್ಭಧಾರಣೆಯಾಗಿದೆ ಎಂಬ ಒಂದೇ ಕಾರಣ ಸಾಕಾಗುವುದಿಲ್ಲ; ವೈದ್ಯಕೀಯ ನಿರ್ಲಕ್ಷ್ಯವನ್ನು ಪ್ರತ್ಯೇಕವಾಗಿ ಸಾಬೀತುಪಡಿಸಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ವಿಚಾರಣಾ ನ್ಯಾಯಾಲಯವು ಪ್ರಕರಣದ ವಾಸ್ತವಾಂಶಗಳನ್ನು ಸರಿಯಾಗಿ ಪರಿಶೀಲಿಸಿದೆ ಎಂದು ಹೇಳಿದ ಹೈಕೋರ್ಟ್, 2006ರ ತೀರ್ಪನ್ನು ಎತ್ತಿಹಿಡಿದು ಮಹಿಳೆಯ ಮೇಲ್ಮನವಿಯನ್ನು ವಜಾಗೊಳಿಸಿತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
