RTI ಮಾಹಿತಿ: ಏಕರೂಪದ ಡಿಜಿಟಲ್ ವ್ಯವಸ್ಥೆ ಜಾರಿಗೆ ಹೈಕೋರ್ಟ್ ಸೂಚನೆ
ಬೆಂಗಳೂರು : ಮಾಹಿತಿ ಒದಗಿಸದ ಆಯೋಗದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕಾರ ಮಾಡಿರುವ ಕರ್ನಾಟಕ ಹೈಕೋರ್ಟ್ , ಮಾಹಿತಿ ಹಕ್ಕು ಕಾಯ್ದೆ-2005ರ ಅನುಷ್ಠಾನಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಣೆ, ನಿರ್ವಹಣೆ ಹಾಗೂ ಬಹಿರಂಗಪಡಿಸುವುದಕ್ಕೆ ಸಂಬಂಧಿಸಿದಂತೆ ಏಕರೂಪದ ಡಿಜಿಟಲ್ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಕರ್ನಾಟಕ ಮಾಹಿತಿ ಆಯೋಗಕ್ಕೆ (ಕೆಐಸಿ) ಹೈಕೋರ್ಟ್ ನಿರ್ದೇಶನ ನೀಡಿದೆ.
ನಗರದ ಎನ್. ರಮೇಶ್ ಬಾಬು ಅವರು ಮಾಹಿತಿ ಒದಗಿಸದ ಕರ್ನಾಟಕ ಮಾಹಿತಿ ಆಯೋಗದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಆರ್ಟಿಐಗೆ ಸಂಬಂಧಿಸಿದ ಮಾಹಿತಿಯನ್ನು ನಾಗರಿಕರು ಸುಲಭವಾಗಿ ಪಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ಕೆಐಸಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಕೇಂದ್ರೀಕೃತ ಎಲೆಕ್ಟ್ರಾನಿಕ್ ಸೂಚ್ಯಂಕ ವ್ಯವಸ್ಥೆ ಜಾರಿಗೊಳಿಸಬೇಕು. ವರ್ಷವಾರು ಸ್ವೀಕರಿಸಿದ, ವಿಲೇವಾರಿ ಮಾಡಿದ ಹಾಗೂ ತಿರಸ್ಕರಿಸಿದ ಆರ್ ಟಿಐ ಅರ್ಜಿಗಳ ವಿವರ, ಮೊದಲ ಮತ್ತು ಎರಡನೇ ಮೇಲ್ಮನವಿಗಳ ಮಾಹಿತಿ, ವಿಧಿಸಲಾದ ದಂಡದ ವಿವರ ಹಾಗೂ ಮಾಹಿತಿ ಒದಗಿಸಲು ವಿಫಲವಾದ ಅಥವಾ ನಿರಾಕರಿಸಿದ ಸಾರ್ವಜನಿಕ ಮಾಹಿತಿ ಅಧಿಕಾರಿಗಳ (ಪಿಐಒ) ವಿರುದ್ಧ ಆರ್ಟಿಐ ಕಾಯ್ದೆಯ ಸೆಕ್ಷನ್ 20ರ ಅಡಿ ಶಿಫಾರಸು ಮಾಡಲಾದ ಶಿಸ್ತು ಕ್ರಮಗಳ ಮಾಹಿತಿಯನ್ನು ಈ ಏಕರೂಪ ವ್ಯವಸ್ಥೆ ಒಳಗೊಂಡಿರಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ರಾಜ್ಯದ ಪ್ರತಿಯೊಂದು ಇಲಾಖೆಯೂ ತನ್ನ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಪ್ರಾಧಿಕಾರಗಳನ್ನು ಗುರುತಿಸಿ, ಆರ್ ಟಿಐ ಕಾಯ್ದೆಯ ಸೆಕ್ಷನ್ 25ರ ಅಡಿ ಅಗತ್ಯ ಮಾಹಿತಿ ಸಂಗ್ರಹಿಸಬೇಕು. ದಾಖಲೆಗಳನ್ನು ನಿರಂತರವಾಗಿ ನವೀಕರಿಸುವ ಹೊಣೆಗಾರಿಕೆಯನ್ನು ನಿರ್ದಿಷ್ಟ ಅಧಿಕಾರಿಗೆ ವಹಿಸಬೇಕು. ಈ ಎಲ್ಲ ಮಾಹಿತಿಯನ್ನು ವಿದ್ಯುನ್ಮಾನ ರೂಪದಲ್ಲಿ ನಿರ್ವಹಿಸಬೇಕು. ಇದರಿಂದ, ಕಡತಗಳನ್ನು ಕೈಯಾರೆ ಪರಿಶೀಲಿಸುವ ಅಗತ್ಯವಿಲ್ಲದೆ ಮಾಹಿತಿ ಹುಡುಕಲು, ವಿಂಗಡಿಸಲು ಹಾಗೂ ಮರುಪಡೆಯಲು ಸಾಧ್ಯವಾಗುವಂತಿರಬೇಕು ಎಂದು ನ್ಯಾಯಾಲಯ ಹೇಳಿದೆ.
ಕೆಐಸಿ ತನ್ನ ಅಧಿಕೃತ ವೆಬ್ ಸೈಟ ನಲ್ಲಿ ಆರ ಟಐ ಅನುಷ್ಠಾನ ಮತ್ತು ಅನುಸರಣೆಗೆ ಸಂಬಂಧಿಸಿದಂತೆ ಸ್ಪಷ್ಟವಾಗಿ ಗುರುತಿಸಬಹುದಾದ ಪ್ರತ್ಯೇಕ ವಿಭಾಗವನ್ನು ಹೊಂದಿರಬೇಕು. ಆಯೋಗದ ಕಾರ್ಯನಿರ್ವಹಣೆ, ಮೇಲ್ಮನವಿಗಳು, ದೂರುಗಳು, ದಂಡ ಹಾಗೂ ಕಾಯ್ದೆಯಡಿ ಮಾಡಲಾದ ಶಿಫಾರಸುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಪ್ರಕಟಿಸಬೇಕು ಎಂದು ಹೈಕೋರ್ಟ್ ನ್ಯಾಯಪೀವು ಓ ನಿರ್ದೇಶನ ನೀಡಿದೆ
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
