ಪತ್ನಿಯ ಸ್ನಾತಕೋತ್ತರ ಪದವಿ ಪದವಿ ಜೀವನಾಂಶ ನಿರಾಕರಿಸಲು ಕಾರಣವಲ್ಲ- ಹೈಕೋರ್ಟ್
ಬೆಂಗಳೂರು: ಪತ್ನಿ ಸ್ನಾತಕೋತ್ತರ ಪದವಿ ಪಡೆದಿದ್ದಾಳೆಂಬ ಕಾರಣಕ್ಕೆ ಸಿಆರ್ಪಿಸಿ ಸೆಕ್ಷನ್ 125 ರಡಿ ಜೀವನಾಂಶ ನಿರಾಕರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಕರ್ನಾಟಕ ಹೈಕೋರ್ಟ್, 5 ಸಾವಿರ ಮಾಸಿಕ ನಿರ್ವಹಣಾ ಭತ್ಯೆ ನಿಗದಿಪಡಿಸಿ ತೀರ್ಪು ನೀಡಿದೆ.
ನ್ಯಾಯಮೂರ್ತಿ ಡಾ. ಚಿಲ್ಲಕೂರು ಸುಮಲತಾ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ. ವಿಚ್ಛೇದನ ಪ್ರಕರಣದಲ್ಲಿ ಶಾಶ್ವತ ಜೀವನಾಂಶದ ಬೇಡಿಕೆ ತಿರಸ್ಕೃತವಾಗಿದ್ದರೂ, ಅದನ್ನು ಆಧಾರವಾಗಿ ಬಳಸಿ ಮಾಸಿಕ ಜೀವನಾಂಶ ನಿರಾಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠವು, ”ವಿಚ್ಛೇದನ ಪ್ರಕರಣದಲ್ಲಿ ಶಾಶ್ವತ ಜೀವನಾಂಶ ತಿರಸ್ಕೃತವಾಗಿದ್ದು, ಪತಿಯ ಆರ್ಥಿಕ ಸಾಮರ್ಥ್ಯವನ್ನು ಪತ್ನಿ ಸಾಬೀತುಪಡಿಸಲು ವಿಫಲವಾದ ಕಾರಣಕ್ಕೆ ಮಾತ್ರ. ಇದರಿಂದ ಸಿಆರ್ಪಿಸಿ ಸೆಕ್ಷನ್ 125 ರಡಿ ಜೀವನಾಂಶ ಪಡೆಯುವ ಹಕ್ಕು ಕಳೆದು ಹೋಗುವುದಿಲ್ಲ,” ಎಂದು ಹೇಳಿದೆ.
ಪದವಿ ಹೊಂದಿದ್ದಾಳೆ ಎಂಬುದು ಜೀವನಾಂಶ ನಿರಾಕರಿಸಲು ಕಾರಣವಲ್ಲ. ಪತ್ನಿ ಎಂ.ಎ. ಪದವಿ ಹೊಂದಿದ್ದಾಳೆ ಎಂಬುದಷ್ಟೇ ಆಕೆಗೆ ನಿರ್ವಹಣಾ ಭತ್ಯೆ ನಿರಾಕರಿಸಲು ಕಾರಣವಲ್ಲ. ಆಕೆ ಉದ್ಯೋಗದಲ್ಲಿದ್ದಾಳೆ ಅಥವಾ ಸ್ವತಂತ್ರವಾಗಿ ಆದಾಯ ಗಳಿಸುತ್ತಿದ್ದಾಳೆ ಎಂಬುದನ್ನು ಪತಿ ಕೂಡ ಹೇಳಿಲ್ಲ, ಎಂದು ನ್ಯಾಯಪೀಠ ತಿಳಿಸಿತು.
ಹಾಗೆಯೇ ಪತಿಯು ಖಾಸಗಿ ಸಂಸ್ಥೆಯಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಸುಮಾರು 29,000 ರೂ. ಆದಾಯ ಗಳಿಸುತ್ತಿರುವುದನ್ನು ಗಮನಿಸಿದ ನ್ಯಾಯಪೀಠವು , ಪತ್ನಿ ಮತ್ತು ಮಗನಿಗೆ ತಿಂಗಳಿಗೆ ತಲಾ 5,000 ರೂ. ನಿರ್ವಹಣಾ ಭತ್ಯೆ ಪಾವತಿಸುವಂತೆ ಆದೇಶಿಸಿತು.
ಪತ್ನಿ ಹಾಗೂ ಅಪ್ರಾಪ್ತ ಮಗ ಸಿಆರ್ಪಿಸಿ ಸೆಕ್ಷನ್ 125ರಡಿ ಕ್ರಮವಾಗಿ ತಿಂಗಳಿಗೆ 20 ಸಾವಿರ ರೂ. ಮತ್ತು 10 ಸಾವಿರ ರೂ. ನಿರ್ವಹಣಾ ಭತ್ಯೆ ಕೋರಿ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯವು ಮಗನಿಗೆ ತಿಂಗಳಿಗೆ 5 ಸಾವಿರ ರೂ. ಮಂಜೂರು ಮಾಡಿತ್ತು, ಆದರೆ, ಪತ್ನಿಯ ಹಿಂದಿನ 10 ಲಕ್ಷ ರೂ. ಶಾಶ್ವತ ಜೀವನಾಂಶದ ಬೇಡಿಕೆ ತಿರಸ್ಕೃತವಾಗಿತ್ತೆಂಬ ಕಾರಣ ನೀಡಿ ಆಕೆಯ ಅರ್ಜಿಯನ್ನು ತಿರಸ್ಕರಿಸಿತ್ತು. ಹಾಗೆಯೇ ಪತ್ನಿ ಎಂ.ಎ. ಪದವಿ ಹೊಂದಿರುವುದರಿಂದ ಉದ್ಯೋಗ ಪಡೆದು ಜೀವನ ನಡೆಸಬಹುದೆಂದು ಕೌಟುಂಬಿಕ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು ಈ ಆದೇಶ ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
