07/10/2026

Law Guide Kannada

Online Guide

ಬಾಕಿ ಸಾಲ ವಸೂಲಿಗೆ ‘ಕ್ರಿಮಿನಲ್ ಪ್ರಕರಣ ಅಸ್ತ್ರ’ ಬಳಕೆ ಖಂಡನೀಯ- ಬ್ಯಾಂಕ್ ಗೆ ಹೈಕೋರ್ಟ್ ಚಾಟಿ

ಬೆಂಗಳೂರು: ಬಾಕಿ ಇರುವ ಸಾಲವನ್ನು ವಸೂಲಿ ಮಾಡಲು ಬ್ಯಾಂಕಿಂಗ್ ಸಂಸ್ಥೆಗಳು ಕ್ರಿಮಿನಲ್ ಮೊಕದ್ದಮೆಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುವುದು ಖಂಡನೀಯ, ಅಸಂಬದ್ಧ ಕ್ರಮ ಎಂದು ಕರ್ನಾಟಕ ಹೈಕೋರ್ಟ್ ಚಾಟಿ ಬೀಸಿದೆ.

ತಮ್ಮ ವಿರುದ್ಧ ರಾಷ್ಟ್ರೀಕೃತ ಬ್ಯಾಂಕ್ ವೊಂದು ದಾಖಲಿಸಿದ್ದ ಪ್ರಕರಣ ರದ್ದುಕೋರಿ ಬೆಂಗಳೂರಿನ ಪ್ರೀತೇಶ್ ಬಾರಿ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠವು ಪ್ರಕರಣವನ್ನು ರದ್ದುಗೊಳಿಸಿ ತೀರ್ಪು ಪ್ರಕಟಿಸಿದೆ.

ಅಪರಾಧ ನಡೆದಿದೆ ಎಂಬುದಕ್ಕೆ ಮೇಲ್ನೋಟಕ್ಕೆ ಬಲವಾದ ಪ್ರಾಥಮಿಕ ಆಧಾರಗಳಿಲ್ಲದೇ, ಬಲವಂತವಾಗಿ ಹಣದ ವಸೂಲಿಗಾಗಿ ಅಪರಾಧ ಪ್ರಕ್ರಿಯೆಯನ್ನು ಆರಂಭಿಸುವುದು ಕಾನೂನುಬಾಹಿರವಾಗಿದೆ. ಒಪ್ಪಂದದ ಪ್ರಕಾರ ಯೋಜನೆಯು ರದ್ದಾದರೆ ಅಥವಾ ಬಿಲ್ಡರ್ ಲೋಪ ಎಸಗಿದರೆ, ಬ್ಯಾಂಕಿಗೆ ಹಣ ಹಿಂತಿರುಗಿಸುವ ಜವಾಬ್ದಾರಿ ಬಿಲ್ಡರ್ ಮೇಲಿರುತ್ತದೆ. ಅರ್ಜಿದಾರರಿಗೆ ಫ್ಲಾಟ್ ಸಿಗದೇ, ಬಿಲ್ಡರ್ ಮೋಸ ಮಾಡಿದ್ದಾರೆ. ಕೇವಲ ಸಾಲ ಬಾಕಿ ಇದೆ ಎಂಬ ಒಂದೇ ಕಾರಣಕ್ಕೆ ಸಾಲಗಾರನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿರುವುದು ಅಸಂಬದ್ದ, ಖಂಡನೀಯ ಕ್ರಮವಾಗಿದೆ ಎಂದು ನ್ಯಾಯಪೀಠ ಕಿಡಿಕಾರಿತು.

ಅಲ್ಲದೇ, ವಿಫಲವಾದ ವ್ಯವಹಾರದಲ್ಲಿ ಸಾಲ ವಸೂಲಾತಿಗಾಗಿ ಕ್ರಿಮಿನಲ್ ಕಾನೂನು ಯಂತ್ರವನ್ನು ದುರ್ಬಳಕೆ ಮಾಡಿಕೊಂಡಿರುವ ಬ್ಯಾಂಕಿನ ನಡವಳಿಕೆ ಸರಿಯಲ್ಲ ಎಂದು ಪೀಠ ಟೀಕಿಸಿ ಅರ್ಜಿದಾರನ ವಿರುದ್ದ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಿತು.

ಪ್ರಕರಣದ ವಿವರ:
ಫ್ಲಾಟ್ ಖರೀದಿಸಲು ಅರ್ಜಿದಾರ ಪ್ರೀತೇಶ್ ಬಾರಿ ಅವರು ರಾಷ್ಟ್ರೀಕೃತ ಬ್ಯಾಂಕ್ ವೊಂದರಿಂದ 39.92 ಲಕ್ಷ ರೂ. ಸಾಲ ಪಡೆದಿದ್ದರು. ಇದಕ್ಕಾಗಿ ಬ್ಯಾಂಕ್ ಹಾಗೂ ಬಿಲ್ಡರ್ ಜೊತೆಗೂಡಿ ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಬಿಲ್ಡರ್ ಯೋಜನೆಯನ್ನು ಪೂರ್ಣಗೊಳಿಸಲಿಲ್ಲ ಮತ್ತು ಅರ್ಜಿದಾರರ ಹೆಸರಿಗೆ ಫ್ಲಾಟ್ನ ಕ್ರಯಪತ್ರವನ್ನೂ ಮಾಡಿಕೊಟ್ಟಿರಲಿಲ್ಲ. ಬ್ಯಾಂಕಿನ ಅನುಮತಿಯಿಲ್ಲದೇ ಆ ಆಸ್ತಿಯನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡಿದ್ದರು.

ಇದರಿಂದಾಗಿ ಬ್ಯಾಂಕ್ನಲ್ಲಿ ಪಡೆದ ಸಾಲದ ಹಣ ಬಾಕಿ ಉಳಿದಿದ್ದರಿಂದ, ಬ್ಯಾಂಕ್ ಶಂಕರ್ ಪುರಂ ಪೊಲೀಸ್ ಠಾಣೆಯಲ್ಲಿ ನಂಬಿಕೆ ದ್ರೋಹ ಮತ್ತು ವಂಚನೆ ಆರೋಪದಲ್ಲಿ ಪ್ರಕರಣ ದಾಖಲಿಸಿತ್ತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.