23/10/2026

Law Guide Kannada

Online Guide

30 ದಿನದೊಳಗೆ ಎಲ್ಲ ಪೊಲೀಸ್ ಠಾಣೆಗಳನ್ನು ಡಿಜಿಟಲೀಕರಣಗೊಳಿಸಿ- ಕಟ್ಟುನಿಟ್ಟಿನ ಗಡುವು ನೀಡಿದ ಸುಪ್ರೀಂ

ನವದೆಹಲಿ: ಇಂದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಗಳು ಮತ್ತು ಇಂಟರ್ನೆಟ್ ಸಂಪರ್ಕವಿರದ ಪೊಲೀಸ್ ಠಾಣೆಗಳು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಹೀಗಾಗಿ ಎಲ್ಲಾ ಪೊಲೀಸ್ ಠಾಣೆಗಳನ್ನೂ 30 ದಿನದೊಳಗೆ ಮೂಲಭೂತ ಡಿಜಿಟಲೀಕರಣ ಸೌಲಭ್ಯಗಳೊಂದಿಗೆ ಸಜ್ಜುಗೊಳಿಸಬೇಕು ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಅಲ್ಲದೆ ಇದೇ ಗಡುವಿನೊಳಗೆ ಮಕ್ಕಳ ಕಲ್ಯಾಣ ಸಮಿತಿಗಳನ್ನೂ ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವಂತೆ ಸುಪ್ರೀಂಕೋರ್ಟ್ ತಿಳಿಸಿದೆ.

2011ರಲ್ಲಿ ಚೆನ್ನೈನಿಂದ ನಾಪತ್ತೆಯಾದ ತನ್ನ ಮಗಳನ್ನು ಪತ್ತೆಹಚ್ಚುವಂತೆ ಆಕೆಯ ತಂದೆ ಸಲ್ಲಿಸಿರುವ ಅರ್ಜಿ ಸಂಬಂಧ ಎಸ್. ಗಣೇಶ ವಿರುದ್ಧ ತಮಿಳುನಾಡು ಸರಕಾರ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಆರ್. ಮಹಾದೇವನ್ ಅವರ ಪೀಠವು ಈ ಖಡಕ್ ಆದೇಶ ನೀಡಿದೆ.

ನಾಪತ್ತೆಯಾದ ವ್ಯಕ್ತಿಗಳ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸುವಂತೆ ನೀಡಿರುವ ನಿರ್ದೇಶನಗಳಿಗೆ ಈ ಪ್ರಕರಣ ಸಂಬಂಧಿಸಿದೆ. ಕಾಣೆಯಾದ ಮಹಿಳೆಯರು ಮತ್ತು ಮಕ್ಕಳ ಪತ್ತೆ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಕಾನೂನು ಜಾರಿ ವ್ಯವಸ್ಥೆಯ ಮೂಲಸೌಕರ್ಯದಲ್ಲಿ ವ್ಯವಸ್ಥಿತ ಸುಧಾರಣೆಗಳನ್ನು ತರಬೇಕೆಂದು ಈ ಪ್ರಕರಣದಲ್ಲಿ ಮನವಿ ಮಾಡಲಾಗಿದೆ.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಪೀಠವು, ತಡೆರಹಿತ ಡಿಜಿಟಲ್ ದಾಖಲೆ ನಿರ್ವಹಣೆ, ಪ್ರಥಮ ವರ್ತಮಾನ ವರದಿಗಳನ್ನು (ಎಫ್ಐಆರ್) ಕ್ಷಿಪ್ರವಾಗಿ ಅಪ್ ಲೋಡ್ ಮಾಡುವುದು ಮತ್ತು ಪೊಲೀಸ್ ದತ್ತಾಂಶವನ್ನು ಮಕ್ಕಳ ರಕ್ಷಣೆ ಹಾಗೂ ಕಳ್ಳಸಾಗಣೆ ವಿರೋಧಿ ಪೋರ್ಟಲ್ ಗಳೊಂದಿಗೆ ಜೋಡಿಸುವುದಕ್ಕೆ ನಿರ್ದೇಶನಗಳನ್ನು ನೀಡಿದೆ.

ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿಗಳು, ಗೃಹ ಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಕಾರ್ಯದರ್ಶಿಗಳು ಈ ನಿರ್ದೇಶನಗಳ ಪಾಲನೆಯನ್ನು ನೇರವಾಗಿ ಮೇಲ್ವಿಚಾರಣೆ ಮಾಡಬೇಕು. ತಾಂತ್ರಿಕ ಅವಶ್ಯಕತೆಗಳನ್ನು ಪೂರೈಸಲು ಅಗತ್ಯ ಹಣವನ್ನು ತಕ್ಷಣವೇ ಮಂಜೂರು ಮಾಡಿ ಬಿಡುಗಡೆ ಮಾಡಬೇಕು ಎಂದು ನ್ಯಾಯಪೀಠವು ರಾಜ್ಯ ಸರಕಾರಗಳಿಗೆ ಸೂಚಿಸಿದೆ.

ಪ್ರತಿ ಎಫ್ ಐಆರ್ ಅನ್ನು ಸ್ಥಳೀಯ ಕಂಪ್ಯೂಟರ್ ನಲ್ಲಿ ಕಡ್ಡಾಯವಾಗಿ ಅಪ್ ಲೋಡ್ ಮಾಡಬೇಕು. ಬಳಿಕ ಇಂಟರ್ನೆಟ್ ಮೂಲಕ ಸಂಬಂಧಿತ ರಾಜ್ಯ ಪೋರ್ಟಲ್ (ಇದ್ದರೆ) ಮತ್ತು ಅಪರಾಧ ಮತ್ತು ಅಪರಾಧಿಗಳ ಟ್ರ್ಯಾಕಿಂಗ್ ನೆಟ್ವರ್ಕ್ ಮತ್ತು ವ್ಯವಸ್ಥೆಗಳಿಗೆ (ಸಿಸಿಟಿಎನ್ಎಸ್) ರವಾನಿಸಬೇಕು. ಸಿಸಿಟಿಎನ್ಎಸ್ 2.0ಕ್ಕೆ ದತ್ತಾಂಶದ ಸುಗಮ ಹರಿವಿಗಾಗಿ ಎಲ್ಲ ರಾಷ್ಟ್ರೀಯ ಮತ್ತು ರಾಜ್ಯ ಪೋರ್ಟಲ್ ಗಳ ಏಕೀಕರಣವನ್ನು ಸಾಧಿಸುವಂತೆ ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕಕ್ಕೂ (ಎನ್ಸಿಆರ್ಬಿ) ನ್ಯಾಯಪೀಠವು ನಿರ್ದೇಶಿಸಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.